ಚಿಕ್ಕಮಗಳೂರು: ರಸ್ತೆ, ಕುಡಿಯುವ ನೀರಿನ ಬಗ್ಗೆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲು ಸ್ಥಳೀಯ ಜನ ಟ್ರೋಲ್ ಮಾಡುವ ಮೂಲಕ, ವಿಭಿನ್ನ ಪ್ರತಿಭಟನೆ ಮಾಡುವ ಮೂಲಕ ಸಂಬಂಧಪಟ್ಟವರಿಗೆ ಬಿಸಿ ಮುಟ್ಟಿಸಲು ಪ್ರಯತ್ನ ಪಡುತ್ತಾರೆ. ಆದ್ರೆ ಕೆಲವೊಮ್ಮೆ ಅದು ಕೂಡ ಯಾವುದೇ ಪ್ರಯೋಜವಾಗುವುದಿಲ್ಲ. ಇದೀಗ ಕಳಸ ಜನರ ಪರಿಸ್ಥಿತಿಯೂ ಅದೇ ಆಗಿದೆ.
ಜಿಲ್ಲೆಯ ಕಳಸ ಪಟ್ಟಣದ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತು ಹೋಗಿದೆ. ಇದರಿಂದ ಅಲ್ಲಿ ಬದುಕುತ್ತಿರುವ, ದಿನನಿತ್ಯ ಓಡಾಡುವ ಜನರ ಸ್ಥಿತಿ ಚಿಂತಾಜನಕವಾಗಿದೆ. ರಸ್ತೆಯ ತುಂಬೆಲ್ಲಾ ಧೂಳು ಎದ್ದು ಬರುತ್ತಿದೆ. ಬಸ್ ಬಂದರೆ, ವಾಹನಗಳು ಓಡಾಡಿದರೆ ಮುಂದೆ ಬರುತ್ತಿರುವ ವ್ಯಕ್ತಿಗಳೇ ಕಾಣದಷ್ಟು ಧೂಳು ತುಂಬಿಕೊಂಡು ಬಿಡುತ್ತದೆ.
ಈ ಸಮಸ್ಯೆಯನ್ನು ನೋಡಿ ನೋಡಿ ಬೇಸತ್ತ ಸ್ಥಳೀಯರು ಟ್ರೋಲ್ ಮಾಡುವ ಮೂಲಕ ಸಂಬಂಧಪಟ್ಟವರಿಗೆ ಬಿಸಿ ಮುಟ್ಟಿಸಲು ಪ್ರಯತ್ನ ಮಾಡುತ್ತಿದ್ದಾರೆ. ಭಿನ್ನ ವಿಭಿನ್ನ ಎನಿಸುವಂತ ಟ್ರೋಲ್ ಗಳನ್ನು ಮಾಡುತ್ತಿದ್ದಾರೆ. ಗಿಣಿಯೊಂದು ಹಾರಿಹೋದಾಗ ಹಸಿರಾಗಿತ್ತು. ಕಳಸ ರಸ್ತೆ ದಾಟಿ ಬಂದಾಗ ಬಣ್ಣವೇ ಬದಲು. ನನ್ನನ್ನು ನಂಬಿ ನಾನು ಕಾಗೆಯಲ್ಲ ಎಂದು ಹೇಳುವಂತ ಟ್ರೋಲ್ ಮಾಡಿದ್ದಾರೆ.
ಮತ್ತೊಂದು ಆಫ್ರಿಕನ್ ವ್ಯಕ್ತಿಯೊಬ್ಬ ಏರ್ ಪೋರ್ಟ್ ನಲ್ಲಿ ತೆಗೆಸಿಕೊಂಡ ಫೋಟೋ ಚೆಂದವಾಗಿದೆ. ಅದೇ ಕಳಸ ರಸ್ತೆಗೆ ಬಂದಾಗ ಧೂಳು ತುಂಬಿ ವಿಚಿತ್ರವಾಗಿ ಕಾಣುತ್ತಿದ್ದಾರೆ. ಇನ್ನು ಸೂಪರ್ ಮ್ಯಾನ್ ಬಗ್ಗೆಯೂ ವಿಚಿತ್ರ ಟ್ರೋಲ್ ಮಾಡಿದ್ದಾರೆ. ಕಳಸ ರಸ್ತೆಗೆ ಬಂದು ಹೋದ ಮೇಲೆ ಆಕ್ಸಿಜನ್ ಹಾಕಿಕೊಂಡ ರೀತಿಯಲ್ಲಿ ಟ್ರೋಲ್ ಮಾಡಿದ್ದಾರೆ.