ಬೆಂಗಳೂರು : ಕಡಲ ತೀರದ ಭಾರ್ಗವ’ ಅಂದಾಕ್ಷಣ ನಮಗೆ ಕಣ್ಮುಂದೆ ಬರೋದೇ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶಿವರಾಮ ಕಾರಂತರು. ಈ ಅನ್ವರ್ಥನಾಮವೇ ಇದೀಗ ಕನ್ನಡ ಚಿತ್ರರಂಗದಲ್ಲಿ ಶೀರ್ಷಿಕೆಯಾಗಿ ಸಿನೆಮಾವಾಗಿ ಸುದ್ದಿಯಾಗಿದೆ. ಆದ್ರೆ ಅದಕ್ಕೂ ಈ ಸಿನೆಮಾಗೂ ಒಂದಕ್ಕೊಂದು ಸಂಬಂದವಿಲ್ಲ. ಸಿನೆಮಾ ಕಥೆಗೆ ತಕ್ಕಂತೆ ಟೈಟಲ್ ಇಡಲಾಗಿದೆ ಎನ್ನುವ ಚಿತ್ರತಂಡ ಸೆಟ್ಟೇರಿದ ದಿನದಿಂದಲೂ ಭರವಸೆ ಹುಟ್ಟಿಸಿದೆ.
ವಿಭಿನ್ನ ಟೈಟಲ್, ಟೀಸರ್ ರಿಲೀಸ್ ಮಾಡಿ ಕುತೂಹಲ ಸೃಷ್ಟಿ ಮಾಡಿದ್ದ ಚಿತ್ರತಂಡವೀಗ ಸಮಯವೇ ಹಾಡಿನ ಲಿರಿಕಲ್ ವೀಡಿಯೋ ಬಿಡುಗಡೆ ಮಾಡಿ ಗಮನ ಸೆಳೆಯುತ್ತಿದೆ. ಹೌದು, “ಸಮಯವೇ” ಎಂಬ ಸೆಂಟಿಮೆಂಟ್ ಹಾಡಿಗೆ ಡಾ.ವಿ ನಾಗೇಂದ್ರ ಪ್ರಸಾದ್ ಸಾಹಿತ್ಯವಿದೆ, ಅನಿಲ್ ಸಿ ಜೆ ಸಂಗೀತ ನಿರ್ದೇಶನದ ಈ ಹಾಡಿಗೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಧ್ವನಿಯಾಗಿದ್ದಾರೆ.
ಸಮಯಗಳ ಸೀಮೆಯಲ್ಲಿ ನಾವಿಕನು ಆದೆ ನಾನು ಎಂದು ಶುರುವಾಗುವ ಈ ಹಾಡು ನಾಯಕನ ನೆನಪಿನಂಗಳದ ಜೊತೆ ಒಂದು ಕ್ಷಣ ಕಣ್ಣಂಚಲ್ಲಿ ನೀರು ತರಿಸುವಂತಿದೆ. ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಸಿನಿಪ್ರಿಯರ ಮನ ತಲ್ಲಣ ಗೊಳಿಸಿ ಪ್ರಶಂಸೆ ಗಿಟ್ಟಿಸಿಕೊಳ್ಳುತ್ತಿದೆ.
ಈಗಾಗಲೇ ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಜ್ಜಾಗುತ್ತಿರುವ ‘ಕಡಲ ತೀರದ ಭಾರ್ಗವ’ ಸಸ್ಪೆನ್ಸ್, ಥ್ರಿಲ್ಲರ್ ರೋಮ್ಯಾಂಟಿಕ್ ಜಾನರ್ ಚಿತ್ರ. ಪನ್ನಗ ಸೋಮಶೇಖರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಜವಾಬ್ದಾರಿ ಹೊತ್ತಿದ್ದಾರೆ.
ಚಿತ್ರದಲ್ಲಿ ಹೊಸ ಪ್ರತಿಭೆಗಳಾದ ಭರತ್ ಗೌಡ, ವರುಣ್ ರಾಜ್ ಇಬ್ಬರು ನಾಯಕನಟರಾಗಿ ಬಣ್ಣ ಹಚ್ಚುವುದರ ಜೊತೆಗೆ ಬಂಡವಾಳವನ್ನೂ ಹೂಡಿ ಸಿನಿಮಾ ನಿರ್ಮಾಣದ ಜವಾಬ್ದಾರಿಯನ್ನೂ ನಿರ್ವಹಿಸಿದ್ದಾರೆ. ಶೃತಿ ಪ್ರಕಾಶ್ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಕೀರ್ತನ್ ಪೂಜಾರ್ ಛಾಯಾಗ್ರಹಣ ಹಾಗೂ ಆಶಿಕ್ ಕುಸುಗೊಳ್ಳಿ, ಉಮೇಶ್ RB ಅವರ ಸಂಕಲನವಿದ್ದು ಇವಕಲ ಸ್ಟುಡಿಯೋ ಬ್ಯಾನರ್ ನಡಿ ಅದ್ದೂರಿಯಾಗಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಶ್ರೀಧರ್, ರಾಘವ್ ನಾಗ್, ಅಶ್ವಿನ್ ಹಾಸನ್ ಒಳಗೊಂಡ ಹಲವು ಕಲಾವಿದರ ತಾರಾಬಳಗವಿದೆ. ಬೆಂಗಳೂರು, ಕೊಡಗು, ಉಡುಪಿ, ಭಟ್ಕಳ, ಮುರುಡೇಶ್ವರದ ಕಡಲ ತೀರದಲ್ಲಿ ಚಿತ್ರವನ್ನು ಸೆರೆ ಹಿಡಿಯಲಾಗಿದೆ.