ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.01 : ಒಂದು ಕಾಲದಲ್ಲಿ ಬಂಡಾಯ ಪ್ರಖರವಾಗಿತ್ತು. ಈಗ ಎಲ್ಲರೂ ತಮ್ಮ ತಮ್ಮ ಜಾತಿ ಧರ್ಮಗಳಿಂದ ಗುರುತಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಜಾತಿಗಿಂತ ಪ್ರೀತಿ ಮುಖ್ಯ ಎಂದು ಸಾಹಿತಿ ಡಾ.ಬಿ.ಎಲ್.ವೇಣು ಹೇಳಿದರು.
ಸೃಷ್ಟಿಸಾಗರ ಪ್ರಕಾಶನ, ಕೆ.ಎಂ.ವಿ.ಅಭಿಮಾನಿಗಳ ಬಳಗ, ಬಾಪೂಜಿ ಶಿಕ್ಷಣ ಸಂಸ್ಥೆ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ವತಿಯಿಂದ ರಾಷ್ಟ್ರೀಯ ಹೆದ್ದಾರಿ-13 ಪಿಳ್ಳೆಕೆರನಹಳ್ಳಿಯಲ್ಲಿರುವ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಕಾರ್ಯದರ್ಶಿ ಮೈಸೂರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪುರಸ್ಕøತರಾದ ಕೆ.ಎಂ.ವೀರೇಶ್‍ರವರಿಗೆ ಹಮ್ಮಿಕೊಳ್ಳಲಾಗಿದ್ದ ಗೌರವ ಸಮರ್ಪಣೆ ಉದ್ಗಾಟಿಸಿ ಮಾತನಾಡಿದರು.
ಶಿಕ್ಷಣದ ಜೊತೆ ಸಾಹಿತ್ಯ, ಸಾಂಸ್ಕøತಿಕ ಹಾಗೂ ರಂಗ ಚಟುವಟಿಕೆಗಳಿಗೆ ಕೆ.ಎಂ.ವೀರೇಶ್ ಹಿಂದಿನಿಂದಲೂ ಕೈಜೋಡಿಸಿಕೊಂಡು ಬರುತ್ತಿದ್ದಾರೆ. ಅವರ ಪ್ರಾಮಾಣಿಕ ನಿಷ್ಠೆ, ಪರಿಶ್ರಮಕ್ಕೆ ಗೌರವ ಡಾಕ್ಟರೇಟ್ ಪ್ರಶಸ್ತಿ ಸಿಕ್ಕಿದೆ. ಅತ್ಯುತ್ತಮ ಕಲಾವಿದರಾಗಿರುವ ಕೆ.ಎಂ.ವೀರೇಶ್‍ರವರಿಗೆ ಕಲಾವಿದರ ಕಷ್ಟ, ಜಂಜಾಟ, ತಾಪತ್ರೆ ಚೆನ್ನಾಗಿ ಗೊತ್ತಿದೆ. ಮುರುಘಾಮಠದಲ್ಲಿದ್ದಾಗ ಅನೇಕರಿಗೆ ಆಶ್ರಯ ನೀಡಿದ್ದಾರೆ. ಒಬ್ಬರ ಸಂತೋಷನ್ನು ಎಲ್ಲರೂ ಹಂಚಿಕೊಳ್ಳಬೇಕು ಅಸೂಯೆ ಪಡಬಾರದು. ಧರ್ಮ ಜಾತಿಯಿಂದ ದೇಶ ಕಟ್ಟಲು ಸಾಧ್ಯವಿಲ್ಲ. ಪ್ರೀತಿ ಮುಖ್ಯ ಎಂದರು.
ವಿಮರ್ಶಕ, ಲೇಖಕ ಡಾ.ಲೋಕೇಶ್ ಅಗಸನಕಟ್ಟೆ ಮಾತನಾಡಿ ಸಂತೋಷವನ್ನು ಹಂಚಿಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಪ್ರಶಸ್ತಿಗೆ ಕಾರಣವಾಗಿರುತ್ತದೆ. ಶಿಕ್ಷಣದ ಮೂಲಕ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿರುವ ಕೆ.ಎಂ.ವೀರೇಶ್‍ರವರ ಸಾಧನೆ ಗುರುತಿಸಿ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿರುವುದು ಉತ್ಕøಷ್ಠ. ಕಾಲದ ಅಪೇಕ್ಷೆಯನ್ನು ನಿರಾಕರಿಸಿ ವಿಮುಖದಲ್ಲಿ ಸಾಗುವವರನ್ನು ಯಾರು ಗುರುತಿಸುವುದಿಲ್ಲ. ಹಾಗಾಗಿ ಪ್ರಶಸ್ತಿ ಪಡೆದುಕೊಂಡಿರುವವರ ಧನಾತ್ಮಕ ಚಿಂತನೆಯನ್ನು ಪರಿಗಣಿಸಬೇಕು. ಡಾ.ಕೆ.ಎಂ.ವೀರೇಶ್‍ರವರು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿರುವ ಕೊಡುಗೆ ಅಪಾರ. ಅವರಲ್ಲಿ ಶತ್ರುತ್ವದ ಗುಣ ಇಲ್ಲ. ಜನಾನುರಾಗಿ. ಸೀದಾಸಾದ, ಸಲೀಸು, ವ್ಯಕ್ತಿತ್ವವನ್ನು ವಿಸ್ತರಣೆಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಸಾಗುತ್ತಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗೌರವ ಸಮರ್ಪಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯರು, ಪ್ರಾಧ್ಯಾಪಕರಾದ ಡಾ.ಜೆ.ಕರಿಯಪ್ಪ ಮಾಳಿಗೆ ಮಾತನಾಡಿ ಡಾ.ಕೆ.ಎಂ.ವೀರೇಶ್‍ರವರದು ಬಹುಮುಖ ವ್ಯಕ್ತಿತ್ವ. ಅವಸರ, ಒತ್ತಡ, ಉದ್ವೇಗದ ನಡುವೆ ಎಲ್ಲರೂ ಆಪ್ತತೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಅನೇಕ ಬಡ ಮಕ್ಕಳ ಶಿಕ್ಷಣಕ್ಕೆ ಮೊದಲಿನಿಂದಲೂ ನೆರವು ನೀಡುತ್ತ ಬರುತ್ತಿರುವ ಡಾ.ಕೆ.ಎಂ.ವೀರೇಶ್‍ರವರದು ಬಹುತ್ವದ ಗುಣ ಎಂದು ಗುಣಗಾನ ಮಾಡಿದರು.
ಎಲ್ಲರನ್ನು ಪ್ರೀತಿಸುವ ಗುಣವಿರುವ ಡಾ.ಕೆ.ಎಂ.ವೀರೇಶ್‍ರವರು ವಿಶ್ವಮಾನವ ಪ್ರಜ್ಞೆಯಿಟ್ಟುಕೊಂಡಿದ್ದಾರೆ. ಇದೆಲ್ಲದರ ಸಾಧನೆಯ ಫಲವೆ ಗೌರವ ಡಾಕ್ಟರೇಟ್ ದೊರಕಲು ಕಾರಣ. ಅವರ ಶಿಕ್ಷಣ ಸಂಸ್ಥೆ ಆದರ್ಶ, ಚಿಂತನೆ, ಆಲೋಚನೆಯಿಟ್ಟುಕೊಂಡು ಸಾಗಲಿ ಎಂದು ಶುಭ ಹಾರೈಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಮಾತನಾಡುತ್ತ ಶೈಕ್ಷಣಿಕ ಸಾಹಿತ್ಯಿಕ ಕಲೆಯಲ್ಲಿ ಡಾ.ಕೆ.ಎಂ.ವೀರೇಶ್‍ರವರು ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ಶಿಕ್ಷಣದ ಜೊತೆ ನಾಟಕಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದಾಗ ಚಿತ್ರದುರ್ಗದಲ್ಲಿ 75 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲು ಇವರ ಪರಿಶ್ರಮ ಸಾಕಷ್ಟಿತ್ತು ಎನ್ನುವುದನ್ನು ನೆನಪಿಸಿಕೊಂಡರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಕೆ.ಎಂ.ವೀರಶ್ 1981 ರಲ್ಲಿ ಮುರುಘಾಮಠಕ್ಕೆ ಜೀವನೋಪಾಯಕ್ಕಾಗಿ ಸೇರಿಕೊಂಡೆ. ಮುರುಗೇಶನ ಕೃಪೆಯಿಂದ ಇಂದು ಈ ಮಟ್ಟಕ್ಕೆ ಬೆಳೆದು ನಿಂತಿದ್ದೇನೆ. ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ನನಗೆ ಗೌರವ ಡಾಕ್ಟರೇಟ್ ಸಿಗುತ್ತದೆಂದು ಕನಸು ಮನಸಿನಲ್ಲಿಯೂ ನೆನೆಸಿರಲಿಲ್ಲ. ಸ್ವತಂತ್ರವಾಗಿರಬೇಕೆಂದು ಮುರುಘಾಮಠದಿಂದ ಹೊರ ಬಂದು ಬಾಪೂಜಿ ಶಿಕ್ಷಣ ಮಹಾವಿದ್ಯಾಲಯವನ್ನು ಆರಂಭಿಸಿದೆ. ಗೌರವ ಡಾಕ್ಟರೇಟ್ ಸಿಕ್ಕಿರುವುದು ಜವಾಬ್ದಾರಿ ಶಿಸ್ತು ಹೆಚ್ಚಿಸಿದೆ. ಸಾಮಾಜಿಕವಾಗಿ ಒಳ್ಳೆ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ. ದ್ವೇಷ, ಅಸೂಯೆಗಿಂತ ಎಲ್ಲರನ್ನು ಪ್ರೀತಿಯಿಂದ ಸಮಾನವಾಗಿ ಕಾಣುವುದು ನನ್ನ ಗುಣ ಎಂದರು.
ಪತ್ರಕರ್ತ ದೊಣೆಹಳ್ಳಿ ಗುರುಮೂರ್ತಿ ಮಾತನಾಡುತ್ತ ಎಲ್ಲರೊಳಗೊಂದಾಗುವ ವ್ಯಕ್ತಿತ್ವ ಡಾ.ಕೆ.ಎಂ.ವೀರೇಶ್‍ರವರದು. ಸಾಂಸ್ಕøತಿಕ, ಸಾಮಾಜಿಕ ಹಾಗೂ ರಂಗ ಚಟುವಟಿಕೆಯತ್ತ ಹೆಚ್ಚಿನ ಆಸಕ್ತಿ ಜೊತೆಗೆ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯವನ್ನು ಕಟ್ಟಿ ಬೆಳೆಸುತ್ತಿರುವುದು ಸುಲಭದ ಕೆಲಸವಲ್ಲ. ಇವರ ಬಹುಮುಖ ಪ್ರತಿಭೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿರುವುದು ಅರ್ಥಪೂರ್ಣವಾಗಿದೆ ಎಂದು ಹೇಳಿದರು.
ಸೃಷ್ಟಿಸಾಗರ ಪ್ರಕಾಶನದ ಮುಖ್ಯಸ್ಥ ಮೇಘಗಂಗಾಧರನಾಯ್ಕ, ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀಮತಿ ಎಂ.ಆರ್.ಜಯಲಕ್ಷ್ಮಿ ವೇದಿಕೆಯಲ್ಲಿದ್ದರು.
ಗೌಸ್‍ಪೀರ್ ಪ್ರಾರ್ಥಿಸಿದರು. ಹುರುಳಿ ಬಸವರಾಜ್ ಸ್ವಾಗತಿಸಿದರು. ಶ್ರೀಮತಿ ಆರ್.ಶೈಲಜಾಬಾಬು ವಂದಿಸಿದರು. ಕೆ.ಪಿ.ಎಂ.ಗಣೇಶಯ್ಯ ನಿರೂಪಿಸಿದರು.
ನಿವೃತ್ತ ಡಿ.ವೈ.ಎಸ್ಪಿ.ಗಳಾದ ಅಬ್ದುಲ್‍ರೆಹಮಾನ್, ಮಹಾಂತರೆಡ್ಡಿ, ಸೈಯದ್ ಇಸಾಖ್ ಸೇರಿದಂತೆ ಡಾ.ಕೆ.ಎಂ.ವೀರೇಶ್‍ರವರ ಅಪಾರ ಅಭಿಮಾನಿಗಳು ಹಾಗೂ ಬಂಧು ಬಳಗದವರು ಗೌರವ ಸಮರ್ಪಣೆಯಲ್ಲಿ ಭಾಗವಹಿಸಿದ್ದರು.