ಬೆಳಗಾವಿ : ಇಂದಿನಿಂದ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಈ ಅಧಿವೇಶನದಲ್ಲಿ ಮಲ ಹೊರುವ ಪದ್ಧತಿ ಬಗ್ಗೆಯೂ ಚರ್ಚೆ ನಡೆದಿದೆ. ಕಾಂಗ್ರೆಸ್ ನಾಯಕ ಬಿ ಕೆ ಹರಿಪ್ರಸಾದ್ ಈ ವಿಚಾರ ಪ್ರಸ್ತಾಪಿಸಿದ್ದು, ಕರ್ನಾಟಕದಲ್ಲಿ ಇಂದಿಗೂ ಮಲ ಹೊರುವ ಪದ್ಧತಿ ಚಾಲ್ತಿಯಲ್ಲಿದೆ ಎಂದರು.
ಇನ್ನು ಸ್ಮಾರ್ಟ್ ಸಿಟಿ ಇಂಜಿನಿಯರ್ ಒಬ್ಬರು ಈ ಕೆಲಸವೂ ಒಂದು ಜಾತಿಗೆ ಸೀಮಿತವಾಗಿದೆ ಅಂತಾರೆ. ಈ ವಿಚಾರದಲ್ಲಿ ಅವರ ಪ್ರಜ್ಞಾವಂತಿಕೆ ಎಷ್ಟಿದೆ ಎಂಬುದನ್ನ ತೋರಿಸುತ್ತದೆ. ಸರ್ಕಾರ ಇಂಥ ವಿಚಾರಗಳ ಬಗ್ಗೆ ಗಂಭೀರತೆ ಅರಿಯಬೇಕು. ಆ ರೀತಿ ಮಾತನಾಡುವವರ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು. ಈವರೆಗೆ ಸುಮಾರು 400 ಮಂದಿ ಮ್ಯಾನ್ಯೂಯಲ್ ಸ್ಕ್ಯಾವೆಂಜಿಂಗ್ ಮಾಡುವಾಗ ಮೃತಪಟ್ಟಿದ್ದಾರೆ. ಆದರೆ ಕೇವಲ 40 ಮಂದಿಗೆ ಮಾತ್ರ ಪರಿಹಾರ ಒದಗಿಸಲಾಗಿದೆ. ಮ್ಯಾನ್ಯೂಯಲ್ ಸ್ಕ್ಯಾವೇಜಿಂಗ್ ಪದ್ಧತಿ ಹೋಗಲಾಡಿಸಲು ಹೊಸ ಮಸೂದೆ ಮಂಡಿಸಲು ಸರ್ಕಾರ ಗಮನಕೊಡಬೇಕು ಎಂದರು.
ಇದೆ ವೇಳೆ ಹರಿಪ್ರಸಾದ್ ಅವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಮ್ಯಾನ್ ಹೋಲ್ ಸ್ವಚ್ಛಗೊಳಿಸುವಾಗ ಕಾರ್ಮಿಕ ಮೃತಪಟ್ಟರೆ ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರನ ವಿರುದ್ಧ ಕ್ರಮ ಜರುಗಿಸಲಾಗುತ್ತೆ. ಮೃತರ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಲಾಗುತ್ತೆ. ಈ ಪದ್ಧತಿ ನಿರ್ಮೂಲನೆಗೆ ಯೋಜನೆ ರೂಪಿಸಿಕೊಡಲಾಗಿದೆ ಎಂದು ಉತ್ತರಿಸಿದರು.