ನೊಂದವರಿಗೆ ನ್ಯಾಯ ಸಿಗಬೇಕಾದರೆ ಕಾನೂನು ಪದವಿ ಬೇಕು : ನ್ಯಾಯಾಧೀಶ ಜಿ.ಬಸವರಾಜು

3 Min Read

 

ಸುದ್ದಿಒನ್, ಚಿತ್ರದುರ್ಗ : ವಕೀಲ ವೃತ್ತಿಯಲ್ಲಿ ಪ್ರಾವಿಣ್ಯತೆ ಪಡೆದರೆ ನ್ಯಾಯಾಧೀಶರಿಗೂ ಹೆದರಬೇಕಾಗಿಲ್ಲ. ಹಾಗಂತ ನ್ಯಾಯಾಲಯ, ನ್ಯಾಯಾಧೀಶರಿಗೆ ಅಗೌರವ ತೋರಬಾರದು. ವಿನಯತೆ, ವಿನಮ್ರತೆಯಿಂದ ವಾದ ಮಾಡಬೇಕು ಎಂದು ಹೈಕೋರ್ಟ್ ಧಾರವಾಡ ಬೆಂಚ್‍ನ ನ್ಯಾಯಾಧೀಶರಾದ ಜಿ.ಬಸವರಾಜು ವಕೀಲರುಗಳಿಗೆ ತಿಳಿಸಿದರು.

ಇಲ್ಲಿನ ಸರಸ್ವತಿ ಕಾನೂನು ಕಾಲೇಜಿನಲ್ಲಿ ಶನಿವಾರ ಗ್ರಾಜ್ಯುಯೇಷನ್ ಡೇ ಉದ್ಘಾಟಿಸಿ ಮಾತನಾಡಿದ ನ್ಯಾಯಾಧೀಶರು ಸುವ್ಯಸ್ಥಿತ ಸಮಾಜ ನಿರ್ಮಾಣವಾಗಬೇಕಾದರೆ ಕಾನೂನು ವಿದ್ಯಾರ್ಥಿಗಳ ಹಾಗೂ ವಕೀಲರ ಪಾತ್ರ ದೊಡ್ಡದು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಲ್ಲಿ ಸಾಕಷ್ಟು ವಕೀಲರುಗಳಿದ್ದಾರೆ.

ರಾಷ್ಟ್ರಪಿತ ಮಹಾತ್ಮಗಾಂಧಿ, ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಇವರುಗಳು ವಕೀಲರಾಗಿದ್ದವರು. ನೊಂದವರಿಗೆ ನ್ಯಾಯ ಸಿಗಬೇಕಾದರೆ ಕಾನೂನು ಪದವಿ ಬೇಕು. ಅತ್ಯಂತ ಪವಿತ್ರವಾದ ವಕೀಲ ವೃತ್ತಿಯಲ್ಲಿ ಒಳ್ಳೆ ಹೆಸರು ಸಂಪಾದಿಸಿ ಮುಂದೆ ಬರಬೇಕಾದರೆ ಶ್ರದ್ದೆ, ಪ್ರಾಮಾಣಿಕತೆ, ಮಾನವೀಯತೆ, ಸಮಯ ಪ್ರಜ್ಞೆ ಮುಖ್ಯ ಎಂದು ಹೇಳಿದರು.

1965 ರಲ್ಲಿ ಕಾನೂನು ಕಾಲೇಜು ಆರಂಭವಾಯಿತು. ಚಿತ್ರದುರ್ಗದಲ್ಲಿ ಕಾಲೇಜು ಸ್ಥಾಪನೆಯಾಗದಿದ್ದರೆ ಆರ್ಥಿಕವಾಗಿ ಹಿಂದುಳಿದವರು ಕಾನೂನು ಪದವಿ ಪಡೆಯುವುದು ಕಷ್ಟವಾಗುತ್ತಿತ್ತು. 1988 ರಲ್ಲಿ ನಾನೂ ಕೂಡ ಇದೆ ಕಾಲೇಜಿನಲ್ಲಿ ಕಾನೂನು ಪದವಿ ಪಡೆದೆ. ಆಗ ಇಷ್ಟು ಸೌಲಭ್ಯವಿರಲಿಲ್ಲ. ನೀವುಗಳು ನಿಜವಾಗಿಯೂ ಅದೃಷ್ಟವಂತರು. ಕಾನೂನು ಕಾಲೇಜು ಆರಂಭಕ್ಕೆ ಕಾರಣಕರ್ತರಾದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆಂದರು.

ಕಾನೂನು ಪದವಿ ಮುಗಿಸಿಕೊಂಡು ವಕೀಲರಾದೊಡನೆ ಹಣದ ಹಿಂದೆ ಹೋಗಬೇಡಿ. ಎರಡು ವರ್ಷಗಳ ಕಾಲ ವೃತ್ತಿಯನ್ನು ಕಲಿಯಿರಿ. ವಕೀಲರ ಸಂಖ್ಯೆ ಜಾಸ್ತಿಯಾಗಿದೆ ಎಂದು ಯಾರು ಹೆದರುವುದು ಬೇಡ. ಎಲ್ಲಾ ಕ್ಷೇತ್ರದಲ್ಲಿಯೂ ವಕೀಲರ ಅವಶ್ಯಕತೆಯಿದೆ. ನಾನು ಕೂಡ ಇದೆ ಸರಸ್ವತಿ ಕಾನೂನು ಕಾಲೇಜಿನಲ್ಲಿ ಪದವಿ ಪಡೆದು ಐದು ವರ್ಷಗಳ ಕಾಲ ವಕೀಲನಾಗಿ ನಂತರ ನ್ಯಾಯಾಧೀಶನಾಗಿ ಆಯ್ಕೆಯಾದೆ.

ನ್ಯಾಯಾಲಯದಲ್ಲಿ ಇಂಗ್ಲಿಷ್‍ನಲ್ಲಿ ವಾದ ಮಂಡಿಸಿದರೆ ಕೇಸನ್ನು ಗೆದ್ದುಬಿಡುತ್ತೇನೆಂಬ ಭ್ರಮೆ ಸರಿಯಲ್ಲ. ನ್ಯಾಯಾಧೀಶರ ಎದುರು ಕನ್ನಡದಲ್ಲಿಯೇ ವಾದ ಮಂಡಿಸಿ. ಇಂಗ್ಲಿಷ್ ಬರುವುದಿಲ್ಲ ಎನ್ನುವ ಹಿಂಜರಿಕೆ ಬೇಡ. ಕನ್ನಡದಲ್ಲಿ ವಾದ ಮಾಡಬಾರದೆಂದು ಎಲ್ಲಿಯೂ ನಿಬಂಧನೆಯಿಲ್ಲ. ವಿಚಾರ ಮಂಡನೆ ಮುಖ್ಯ. ಉದಾಸೀನ ಮಾಡದೆ ಫೈಲ್ ಓದಿ. ಬೆರಳ ತುದಿಯಲ್ಲಿಯೇ ಈಗ ಎಲ್ಲಾ ವಿಷಯಗಳು ಸಿಗುತ್ತದೆ. ವಕೀಲರು, ನ್ಯಾಯಾಧೀಶರು ತಮ್ಮ ಕೊನೆಯುಸಿರಿರುವತನಕ ಓದಬೇಕು ಎಂದರು.

ಪ್ರತಿ ಕ್ಷಣದಲ್ಲಿಯೂ ಕಾನೂನು ಬದಲಾವಣೆಯಾಗುತ್ತಿರುತ್ತದೆ. ಐ.ಪಿ.ಸಿ. ಸಿ.ಆರ್.ಪಿ.ಸಿ. ಎವಿಡೆನ್ಸ್ ಆಕ್ಟ್ ಅಧ್ಯಯನ ಮಾಡಿ. ಕಾನೂನು ನಿಂತ ನೀರಲ್ಲ. ಕಾನೂನು ಬದಲಾವಣೆ ಮಾಡುವವರು ವಕೀಲರು. ನೀವುಗಳು ಹಾಕುವ ಶ್ರಮದಿಂದ ಸಮಾಜದಲ್ಲಿ ಏನೆಲ್ಲಾ ಬದಲಾವಣೆ ತರಬಹುದು. ಎಲ್ಲಿಯಾದರೂ ಅಕ್ರಮ, ಅನ್ಯಾಯ, ಭ್ರಷ್ಠಾಚಾರ ನಡೆಯುತ್ತಿದ್ದರೆ ನೋಡಿಕೊಂಡು ಸುಮ್ಮನಿರಬಾರದು.

ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನೀವುಗಳೆ ಸಲ್ಲಿಸಬಹುದು. ವೃತ್ತಿಯ ಜೊತೆ ಮಾನವೀಯತೆ ಇರಬೇಕಷ್ಟೆ. ಪ್ರಜಾಪ್ರಭುತ್ವದಲ್ಲಿ ಹೋರಾಟ ಇಲ್ಲದೆ ಏನನ್ನು ಪಡೆಯಲು ಆಗುವುದಿಲ್ಲ. ಹಕ್ಕಿಗಾಗಿ ಪ್ರತಿಯೊಬ್ಬರು ಹೋರಾಡಬೇಕಾಗಿರುವುದರಿಂದ ಕ್ರಾಂತಿಕಾರಿ ಗುಣ ಬೆಳೆಸಿಕೊಳ್ಳುವಂತೆ ಕರೆ ನೀಡಿದರು.

ಕಾರ್ಯಾಂಗ ಶಾಸನಗಳನ್ನು ಅನುಷ್ಠಾನಗೊಳಿಸುವಲ್ಲಿ ವಿಫಲವಾದಾಗ ನ್ಯಾಯಾಂಗ ಮಧ್ಯ ಪ್ರವೇಶಿಸಬೇಕಾಗುತ್ತದೆ. ವಕೀಲರು ಕಾನೂನು ಅಂಶಗಳನ್ನು ಪರಿಪೂರ್ಣವಾಗಿ ತಿಳಿದುಕೊಂಡಿರಬೇಕು. ಹೊಸ ಹೊಸ ಕಾನೂನುಗಳನ್ನು ವಕೀಲರುಗಳು ಓದಬೇಕು. ಗುಮಾಸ್ತರ ಮಾತು ಕೇಳಿ ವಕಾಲತ್ತು ಮಾಡಬೇಡಿ. ಪ್ರಶ್ನೆ ಮಾಡುವ ಪರಿಪಾಠ ಬೆಳೆಸಿಕೊಳ್ಳಿ. ಕಕ್ಷಿದಾರ ವಕೀಲರುಗಳ ಮುಂದೆ ಬಂದಾಗ ಎಲ್ಲಾ ಜ್ಞಾನವು ನಿಮ್ಮ ಕಣ್ಣ ಮುಂದೆ ಬರಬೇಕು. ಪ್ರತಿ ಕ್ಷಣದಲ್ಲೂ ಯೋಚಿಸಬೇಕು. ಪ್ರತಿ ಹಂತದಲ್ಲೂ ವಕೀಲರ ಪಾತ್ರವಿದೆ. ಕಾನೂನು ಜ್ಞಾನವಿದ್ದರೆ ಯಾರಿಗೂ ಹೆದರಬೇಕಾಗಿಲ್ಲ ಎಂದು ಹೇಳಿದರು.

ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಬಿ.ಎಸ್.ರೇಖ ಮಾತನಾಡಿ ಐದು ವರ್ಷದ ಕಾನೂನು ಕೋರ್ಸ್ ಆರಂಭವಾದಾಗ ಯಾವ ರೂಪ ರೇಷೆಯೂ ಇರಲಿಲ್ಲ. ನಿಮಗೆ ಈಗ ಎಲ್ಲಾ ಸೌಲಭ್ಯಗಳಿದೆ. ಶ್ರಮಪಟ್ಟು ಓದಬೇಕು. ಶಿಕ್ಷಕರ ಪಾತ್ರ ತುಂಬಾ ಮುಖ್ಯ. ಶಿಕ್ಷಕರು ಯಾವ ರೀತಿ ತಯಾರು ಮಾಡುತ್ತಾರೆ. ಮುಂದೆ ಯಾವ ರೀತಿ ಇರುತ್ತೇವೆನ್ನುವುದು ಮುಖ್ಯ. ವಿದ್ಯಾರ್ಥಿಗಳು ಕಾನೂನು ಕಾಲೇಜಿನಲ್ಲಿ ಕಲಿಯುವುದೇ ಬೇರೆ, ನ್ಯಾಯವಾದಿಗಳಾಗಿ ಕೆಲಸ ಮಾಡುವುದೇ ಬೇರೆ, ನ್ಯಾಯಾಲಯದಲ್ಲಿ ಏರು ಧ್ವನಿಯಲ್ಲಿ ವಾದ ಮಂಡಿಸಿದರೆ ಕೇಸು ಗೆಲ್ಲುತ್ತೇವೆಂದಲ್ಲ.

ನ್ಯಾಯಾಲಯಕ್ಕೆ ದೇವರ ಸ್ಥಾನವಿದೆ. ಆ ಘನತೆಯನ್ನು ಉಳಿಸಿಕೊಳ್ಳುವುದು ಎಲ್ಲರ ಜವಾಬ್ದಾರಿ. ಶಿಸ್ತು ಮುಖ್ಯ, ನ್ಯಾಯಾಲಯದ ಕಲಾಪದಲ್ಲಿರುವಾಗ ಮೊಬೈಲ್ ಬಳಸಬಾರದು ಎಂದು ಕಾನೂನು ಪದವಿ ಮುಗಿಸಿಕೊಂಡು ವಕೀಲರಾಗಿ ಹೊರಬರುತ್ತಿರುವವರಿಗೆ ತಿಳಿಸಿದರು.

ಸರಸ್ವತಿ ಕಾನೂನು ಕಾಲೇಜಿನ ಅಧ್ಯಕ್ಷರಾದ ಹೆಚ್.ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು.
ಬೆಳಗಾವಿಯ ಹನ್ನೊಂದನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಇ.ಎಸ್.ಈರಣ್ಣ, ಸರಸ್ವತಿ ಕಾನೂನು ಕಾಲೇಜಿನ ಕಾರ್ಯದರ್ಶಿ ಡಿ.ಕೆ.ಶೀಲ, ಪ್ರಾಚಾರ್ಯರಾದ ಡಾ.ಎಂ.ಎಸ್.ಸುಧಾದೇವಿ, ಆಡಳಿತಾಧಿಕಾರಿ ಪ್ರೊ.ಡಿ.ಹೆಚ್.ನಟರಾಜ, ಹಿರಿಯ ನೋಟರಿ ಚಲ್ಮೇಶ್, ಶ್ರೀಮತಿ ರೂಪ ಜಿ.ಬಸವರಾಜು ವೇದಿಕೆಯಲ್ಲಿದ್ದರು.

ಷಣ್ಮುಖ ಎಸ್.ಪ್ರಾರ್ಥಿಸಿದರು. ದೈಹಿಕ ಶಿಕ್ಷಕ ಪಿ.ಸಿ.ಮುರುಗೇಶ್ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕ ಶ್ರೀಶೈಲ ಎಲ್. ವಂದಿಸಿದರು.

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

Share This Article
Leave a Comment

Leave a Reply

Your email address will not be published. Required fields are marked *