ಪತ್ರಕರ್ತರು ತಮ್ಮ ಆರೋಗ್ಯದ ಕಡೆ ಕಾಳಜಿ ವಹಿಸಿ :  ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

suddionenews
2 Min Read

ವರದಿ ಮತ್ತು ಫೋಟೋ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ,ಸುದ್ದಿಒನ್, (ಅ.03): ದಿನವೂ ಒತ್ತಡದ ನಡುವೆ ಕೆಲಸ ಮಾಡುವ ಪತ್ರಕರ್ತರು ತಮ್ಮ ಆರೋಗ್ಯದ ಕಡೆಗೂ ಹೆಚ್ಚಿನ ನಿಗಾಹರಿಸಬೇಕೆಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ತಿಳಿಸಿದರು.

ಪ್ರಧಾನಿ ನರೇಂದ್ರಮೋದಿರವರ ಜನ್ಮದಿನದ ಅಂಗವಾಗಿ ಸೆ.17 ರಿಂದ ಅ.2 ರವರೆಗೆ ಹದಿನೈದು ದಿನಗಳ ಕಾಲ ನಡೆದ ಸೇವಾ ಪಾಕ್ಷಿಕ ಕಾರ್ಯಕ್ರಮದಡಿ ಭಾರತೀಯ ಜನತಾಪಾರ್ಟಿ ಮಾಧ್ಯಮ ಪ್ರಕೋಷ್ಠ, ವೈದ್ಯಕೀಯ ಪ್ರಕೋಷ್ಠ ವತಿಯಿಂದ ಪತ್ರಕರ್ತರು ಹಾಗೂ ಪತ್ರಿಕಾ ವಿತರಕರಿಗೆ ಪತ್ರಕರ್ತರ ಭವನದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಉಚಿತ ನೇತ್ರ ತಪಾಸಣೆ, ಮಧುಮೇಹ, ರಕ್ತದೊತ್ತಡ ತಪಾಸಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಅನೇಕ ಮಂದಿಗೆ ನೇತ್ರ ತಪಾಸಣೆ ಮಾಡಿಸಿಕೊಂಡು ಕನ್ನಡ ಪಡೆದುಕೊಳ್ಳುವ ಶಕ್ತಿಯಿರುವುದಿಲ್ಲ. ಕಣ್ಣಿನ ದೃಷ್ಠಿಯ ಸಮಸ್ಯೆ ಎಲ್ಲರಿಗೂ ಇದ್ದೇ ಇರುತ್ತದೆ. ಅದರಲ್ಲೂ ಐವತ್ತು ವರ್ಷಗಳಾದ ಮೇಲೆ ಕಡ್ಡಾಯವಾಗಿ ಪ್ರತಿಯೊಬ್ಬರು ತಪಾಸಣೆ ಮಾಡಿಸಿಕೊಂಡು ಅಗತ್ಯವಿದ್ದರೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು ಒಳ್ಳೆಯದು.
ಪತ್ರಕರ್ತರು ತಪ್ಪದೆ ನೇತ್ರ ತಪಾಸಣೆ ಮಾಡಿಸಿಕೊಂಡು ಕನ್ನಡಕಗಳನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.

ದೇಶದ ಪ್ರಧಾನಿ ನರೇಂದ್ರಮೋದಿರವರು ಪ್ರತಿಯೊಬ್ಬರಲ್ಲಿಯೂ ದೇಶಾಭಿಮಾನ ಮೂಡಿಸುವ ಚಿಂತನೆಯಿಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಹದಿನೈದು ದಿನಗಳ ಕಾಲ ದೇಶದ ಪ್ರತಿ ಹಳ್ಳಿ ಹಳ್ಳಿಯಲ್ಲಿಯೂ ಸೇವಾ ಪಾಕ್ಷಿಕದಡಿ ಅನೇಕ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದವು. ಮುಂದುವರೆದ ರಾಷ್ಟ್ರಗಳ ಜೊತೆ ಭಾರತ ಸ್ಪರ್ಧಿಸಬೇಕೆಂಬ ಪರಿಕಲ್ಪನೆ ಮೋದಿಯವರದು. ಅದಕ್ಕಾಗಿ ದೇಶದ ಅಭಿವೃದ್ದಿಗೆ ಜಾತಿ, ಧರ್ಮ ತಾರತಮ್ಯವಿಲ್ಲದೆ ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು.

ಕೊರೋನಾ ಸಂದರ್ಭದಲ್ಲಿ ಅನೇಕರು ಉದ್ಯೋಗ ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆಂದು ವಿರೋಧ ಪಕ್ಷದವರು ಟೀಕಿಸಿದರು. ಅಮೇರಿಕಾದಂತ ಶಕ್ತಿಶಾಲಿ ದೇಶ ಕೂಡ ಕೊರೋನಾ ನಿಗ್ರಹಿಸುವಲ್ಲಿ ಹಿಂದೆ ಬಿದ್ದಿದೆ. ಆದರೆ ನಮ್ಮ ದೇಶದ ಪ್ರಧಾನಿ ಮೋದಿರವರು ಎಲ್ಲರಿಗೂ ಉಚಿತವಾಗಿ ಲಸಿಕೆ ಸಿಗುವಂತೆ ಶ್ರಮಿಸಿದ್ದಾರೆ. ಬಡವರು ಯಾರೂ ಉಪವಾಸವಿರಬಾರದೆಂದು ಅಂದಾಜು ಎಂಬತ್ತು ಕೋಟಿ ಜನರಿಗೆ ಎರಡುವರೆ ವರ್ಷಗಳಿಂದ ಉಚಿತ ರೇಷನ್ ಒದಗಿಸಿದ್ದಾರೆ. ಎಂಟು ವರ್ಷಗಳ ಮೋದಿರವರ ಕಾರ್ಯ ಈಗ ಫಲ ನೀಡುತ್ತಿದೆ ಎಂದು ಹೇಳಿದರು.

ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ ಮಾತನಾಡಿ ಪ್ರಧಾನಿ ಮೋದಿರವರ ಹುಟ್ಟುಹಬ್ಬದ ಪ್ರಯುಕ್ತ ಹದಿನೈದು ದಿನಗಳ ಕಾಲ ದೇಶಾದ್ಯಂತ ಸೇವಾ ಪಾಕ್ಷಿಕದಡಿ ವಿವಿಧ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಾಗಿದೆ. ಸಸಿ ನೆಡುವುದು, ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಹೀಗೆ ಹತ್ತು ಹಲವಾರು ಜನಪರ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಲಾಯಿತು. ಪತ್ರಕರ್ತರಿಗೆ ಹಾಗೂ ಪತ್ರಿಕಾ ವಿತರಕರಿಗೆ ಉಚಿತ ನೇತ್ರ ತಪಾಸಣೆ ಹಮ್ಮಿಕೊಂಡಿದ್ದು, ನಿಜವಾಗಿಯೂ ಅರ್ಥಪೂರ್ಣ. ಸಮಾಜಕ್ಕೆ ಸುದ್ದಿಗಳನ್ನು ತಲುಪಿಸುವ ಪತ್ರಕರ್ತರು ತಮ್ಮ ಆರೋಗ್ಯವನ್ನು ಸದೃಢವಾಗಿಟ್ಟುಕೊಳ್ಳುವಂತೆ ವಿನಂತಿಸಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್‍ಗೌಡಗೆರೆ, ಬಿಜೆಪಿ.ಯುವ ಮುಖಂಡರುಗಳಾದ ಡಾ.ಸಿದ್ದಾರ್ಥ, ಅನಿತ್‍ಕುಮಾರ್ ಜಿ.ಎಸ್. ನಗರ ಮಂಡಲ ಅಧ್ಯಕ್ಷ ನವೀನ್ ಚಾಲುಕ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರೇಂದ್ರ ವೇದಿಕೆಯಲ್ಲಿದ್ದರು.

ವಕ್ತಾರ ನಾಗರಾಜ್‍ಬೇದ್ರೆ, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ಬಿಜೆಪಿ.ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶ್ರೀಮತಿ ಶೈಲಜಾರೆಡ್ಡಿ, ಉಪಾಧ್ಯಕ್ಷರುಗಳಾದ ಚಂದ್ರಿಕಾ ಲೋಕನಾಥ್, ಗೀತಮ್ಮ, ನಗರಾಧ್ಯಕ್ಷೆ ಶೀಲಾ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿಗಳಾದ ಶಾಂತಮ್ಮ, ಗೀತಮ್ಮ ಸೇರಿದಂತೆ ವಿವಿಧ ಮೋರ್ಚಗಳ ಅಧ್ಯಕ್ಷರು, ಪದಾಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *