ಚಿತ್ರದುರ್ಗ,(ಫೆ.10) : ಬಹುರಾಷ್ಟ್ರೀಯ ಕಂಪನಿಗಳ ಹಿಡಿತದಲ್ಲಿ ಪತ್ರಿಕೋದ್ಯಮ ಇದ್ದು, ಪತ್ರಕರ್ತರ ಸ್ಥಿತಿ ಶೋಚನಿಯ ಪರಿಸ್ಥಿತಿಯಲ್ಲಿರುವುದರಿಂದ ಪತ್ರಕರ್ತರಿಗೆ ನ್ಯಾಯ ಸಿಗುವವರೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ವಿಶ್ರಮಿಸುವುದಿಲ್ಲ ಎಂದು ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.
ತ.ರಾ.ಸು. ರಂಗಮಂದಿರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಭಾರತ ಸಂವಿಧಾನ ಕುರಿತು ಜಾಗೃತಿ ಸಮಾವೇಶದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪತ್ರಿಕೋದ್ಯಮ, ಮಾಧ್ಯಮಗಳು, ಬಲಿಷ್ಟರ ಕೈಯಲ್ಲಿದ್ದು, ಪತ್ರಕರ್ತರಾಗಿ ಕಾರ್ಯನಿರ್ವಹಿಸುವಂತವರಿಗೆ ನ್ಯಾಯ ಸಿಗುತ್ತಿಲ್ಲ. ಆದ್ದರಿಂದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯು ರಾಜ್ಯ ವ್ಯಾಪಿ ಸಂಘಟನೆಯನ್ನು ಮಾಡುವ ಮೂಲಕ ಪತ್ರಕರ್ತರಿಗೆ ಸಾಮಾಜಿಕ ನ್ಯಾಯಕೊಡಿಸುವಲ್ಲಿ ಶ್ರಮಿಸುತ್ತಿದೆ ಎಂದು ಬಂಗ್ಲೆ ಮಲ್ಲಿಕಾರ್ಜುನ್ ನುಡಿದರು.
ರಾಜ್ಯ ಸರ್ಕಾರ ಸಣ್ಣ ಮತ್ತು ಮಾಧ್ಯಮ ಪತ್ರಿಕೆಗಳಿಗೆ ಜಾಹಿರಾತು ನೀಡುವ ವಿಷಯದಲ್ಲಿ ತಾರತಮ್ಯ ಎಸಗುತ್ತಿದ್ದು, ಇದರಿಂದಾಗಿ ಪತ್ರಕರ್ತರು ನ್ಯಾಯಯುತವಾಗಿ ಸರ್ಕಾರದ ಮುಂದೆ ಬೇಡಿಕೆ ಇಟ್ಟರೆ, ಸರ್ಕಾರದ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸದೇ ನಿರ್ಲಕ್ಷ್ಯಿಸಿತ್ತಿರುವುದು ಅಕ್ಷಮ್ಯ ಎಂದು ಬಂಗ್ಲೆ ಮಲ್ಲಿಕಾರ್ಜುನ್ ಹೇಳಿದರು.
ಸದ್ಗುರು ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಮಾತನಾಡಿ,ಪತ್ರಕರ್ತರ ಮೇಲೆ ಸಾಮಾಜಿಕ ಹೊಣೆಗಾರಿಕೆ ಇದ್ದು, ಸಮಾಜದಲ್ಲಿ ಶೋಷಣೆಗೆ, ತುಳಿತಕ್ಕೆ, ನಿರ್ಲಕ್ಷ್ಯಕ್ಕೊಳಗಾದ ಸಮುದಾಯಗಳಿಗೆ ನ್ಯಾಯ ಕೊಡಿಸಬೇಕಾದ ಜವಾಬ್ದಾರಿ ಪತ್ರಕರ್ತರ ಮೇಲಿದೆ ಎಂದು ಹೇಳಿದರು.
ಪತ್ರಕರ್ತರ ಸಂಘಟನೆಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳುವ ಮೂಲಕ ಜನಸಾಮಾನ್ಯ ಪರ ಧ್ವನಿ ಎತ್ತಬೇಕು. ಪತ್ರಕರ್ತರ ಸಂಘಟನೆಯ ಹೆಸರಿನಲ್ಲಿ ಕಂಡಕಂಡವರ ಮುಂದೆ ನಿಲ್ಲಬಾರದು ಎಂದು ಸ್ವಾಮೀಜಿ ಸಲಹೆ ನೀಡಿದರು.
ಹಿರಿಯ ಪತ್ರಕರ್ತ ಶ.ಮಂಜುನಾಥ್ ಮಾತನಾಡಿ, ಪತ್ರಿಕೋದ್ಯಮವನ್ನು ಸಂವಿಧಾನದ ನಾಲ್ಕನೇ ಅಂಗ ಎಂದು ಹೇಳುತ್ತಾರೆ. ಆದರೆ ಪತ್ರಿಕೋದ್ಯಮ ಎಂದಿಗೂ ಸಹ ನಾಲ್ಕನೇ ಅಂಗ ಆಗಿಲ್ಲ. ನ್ಯಾಯಾಂಗ, ಶಾಸಕಾಂಗ, ಕಾರ್ಯಂಗಗಳು ದಾರಿ ತಪ್ಪಿದ ಸಂದರ್ಭದಲ್ಲಿ ಪತ್ರಕರ್ತರು ಎಚ್ಚರಿಕೆಯಿಂದ ಮುನ್ನಡೆಸುವ ಜವಾಬ್ದಾರಿ ಇದೆ. ಆದರೆ ಇವತ್ತು ಪತ್ರಿಕಾ ರಂಗವೇ ದಿಕ್ಕು ತಪ್ಪಿ ನಡೆಯುತ್ತಿದೆ ಎಂದು ವಿಷಾದ ವ್ಯಕ್ತ ಪಡಿಸಿದರು.
ದಲಿತ ಮುಖಂಡ ಬಾಳೆಕಾಯಿ ಶ್ರೀನಿವಾಸ ಮಾತನಾಡಿ, ಈ.ಡಬ್ಲ್ಯೂ.ಎಸ್. ಕಾನೂನನ್ನು ಶೋಷಿತ, ದಲಿತ, ಹಿಂದುಳಿದವರ ಪರವಾಗಿ ತರಲಾಗಿದೆ ಎಂದು ಬಿಂಬಿಸಲಾಗುತ್ತಿದೆ. ಆದರೆ ಮೇಲ್ ಸಮುದಾಯದ ಹಿತಾಸಕ್ತಿ ಕಾಪಾಡಲು ಆರ್ಥಿಕ ದುರ್ಬಲರಿಗಾಗಿ ಎಂದು ಹೇಳಲಾಗುತ್ತಿರುವ ಕಾನೂನು ಬ್ರಾಹ್ಮಣ, ಬನಿಯ ಇತರೆ ಸಮುದಾಯಗಳಿಗೆ ಮಾತ್ರ ಮೀಸಲಿರಿಸುವ ಮೂಲಕ ಹಿಂದುಳಿದ ಸಮುದಾಯಗಳಿಗೆ ಅನ್ಯಾಯಮಾಡಲಾಗುತ್ತಿದೆ ಎಂದು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಹೊಸದುರ್ಗ ವಿಧಾನಸಭಾ ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ತಿಪ್ಪೇಸ್ವಾಮಿ, ನಗರಸಭಾ ಅಧ್ಯಕ್ಷೆ ಶ್ರೀಮತಿ ತಿಪ್ಪಮ್ಮ, ವಿ.ವಿ.ವಸಂತಕುಮಾರ್, ಮಹಡಿ ಶಿವಮೂರ್ತಿ, ಹಿರಿಯ ಪತ್ರಕರ್ತರಾದ ಆಲೂರು ಹುನುಮಂತರಾಯಪ್ಪ, ಟಿ.ಕೆ.ಬಸವರಾಜ್, ಶ್ರೀ ಅಂಗವನ ಜಂಗಮ ಸಂಸ್ಥಾನ ಟ್ರಸ್ಟ್‍ನ ಸಿದ್ಧಲಿಂಗಸ್ವಾಮಿಗಳು, ಶ್ರೀಮತಿ ಸುಧಾ, ಭಾರತಿ, ದಿವ್ಯ, ಲಕ್ಕಿಹಳ್ಳಿ ಶಿವಣ್ಣ, ಪತ್ರಕರ್ತ ಕಣ್ಣನ್ ಮುತ್ತುಸ್ವಾಮಿ, ಪ್ರೋ.ಗಂಗಾಧರ್ ಭಾರತ ಸಂವಿಧಾನ ಕುರಿತು ಉಪನ್ಯಾಸ ನೀಡಿದರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಜಿಲ್ಲಾಧ್ಯಕ್ಷ ಎಸ್.ಪ್ರಕಾಶ್‍ಮೂರ್ತಿ (ಎಚ್ಚರಿಕೆ), ಪ್ರಧಾನ ಕಾರ್ಯದರ್ಶಿ ಎಸ್.ಶಂಕರ್ ಮತ್ತು ಪದಾಧಿಕಾರಿಗಳು ಹಾಗೂ ಮುಂತಾದವರು ಹಾಜರಿದ್ದರು.