ವರದಿ ಮತ್ತು ಫೋಟೋ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ನ.08): ಮುಂದಿನ ಪೀಳಿಗೆಗೆ ಅನುಕೂಲ ಮಾಡುವುದಕ್ಕಾಗಿಯಾದರೂ ಎಸ್.ಟಿ.ಮೀಸಲಾತಿ ಹೋರಾಟಕ್ಕೆ ಪಕ್ಷಭೇದ ಮರೆತು ಎಲ್ಲಾ ಕಾಡುಗೊಲ್ಲರು ಕೈಜೋಡಿಸುವಂತೆ ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘದ ರಾಜ್ಯಾಧ್ಯಕ್ಷ ರಾಜಣ್ಣ ಮನವಿ ಮಾಡಿದರು.
ಕರ್ನಾಟಕ ರಾಜ್ಯ ಕಾಡುಗೊಲ್ಲರ ಜಿಲ್ಲಾ ಶಾಖೆ ವತಿಯಿಂದ ಎಸ್.ಟಿ.ಮೀಸಲಾತಿ ಹೋರಾಟದ ಬಗ್ಗೆ ಸ್ಟೇಡಿಯಂ ಸಮೀಪವಿರುವ ಕ್ರೀಡಾಭವನದಲ್ಲಿ ಮಂಗಳವಾರ ನಡೆದ ರಾಜ್ಯ ಮಟ್ಟದ ಚಿಂತನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಳೆದ ಹದಿನೈದು ಇಪ್ಪತ್ತು ವರ್ಷಗಳಿಂದ ಎಸ್.ಟಿ.ಮೀಸಲಾತಿಗಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಅನೇಕ ಹೊಸ ಹೊಸ ಸಂಘಟನೆಗಳು ಹುಟ್ಟಿಕೊಂಡಿವೆ. ಅದರಂತೆ ಎಲ್ಲಾ ಸಂಘಟನೆಗಳ ಉದ್ದೇಶ ಒಂದೆ ಆಗಿದೆ. ಗೌಡ ಪೂಜಾರಿಗಳ ನೇತೃತ್ವದಲ್ಲಿ ಹೋರಾಟ ಮಾಡೋಣ. ನಮ್ಮ ಸಮಾಜದ ಸ್ವಾಮೀಜಿಗಳಿಗೂ ಈ ಹೋರಾಟಕ್ಕೂ ಸಂಬಂಧವಿಲ್ಲ. ಅವರ ಆಚಾರ ವಿಚಾರವೇ ಬೇರೆ, ನಮ್ಮದೇ ಬೇರೆ. ಹಾಗಾಗಿ ಸಮಾಜ ಒಡೆಯುವ ಪ್ರಶ್ನೆಯೇ ಇಲ್ಲ. ಅನೇಕ ಗೊಲ್ಲರಹಟ್ಟಿಗಳಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅಲ್ಲಿಗೆ ಹೋಗಿ ಸಮಸ್ಯೆಗಳನ್ನು ತಿಳಿದುಕೊಳ್ಳಬೇಕು.
ಎಲ್ಲಾ ಪಕ್ಷ, ಸಂಘಟನೆಯಲ್ಲಿರುವ ಕಾಡುಗೊಲ್ಲರು ಒಟ್ಟಿಗೆ ಸೇರಿಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿ ಎಸ್.ಟಿ.ಮೀಸಲಾತಿಯನ್ನು ಪಡೆಯಬೇಕು. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆತು ಹೋರಾಟಕ್ಕೆ ಬೆಂಬಲಿಸಿ ಎಂದು ಕರೆ ನೀಡಿದರು.
ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘದ ರಾಜ್ಯ ಗೌರವಾಧ್ಯಕ್ಷ ಮೀಸೆ ಮಹಲಿಂಗಪ್ಪ ಮಾತನಾಡಿ ಕಾಡುಗೊಲ್ಲ ಜನಾಂಗವನ್ನು ಎಸ್.ಟಿ.ಗೆ ಸೇರ್ಪಡೆಗೊಳಿಸುವಂತೆ ಅನೇಕ ವರ್ಷಗಳಿಂದಲೂ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಕಳೆದ ಉಪಚುನಾವಣೆಯಲ್ಲಿ ಎಸ್.ಟಿ.ಮೀಸಲಾತಿಯನ್ನು ನೀಡುವುದಾಗಿ ಭರವಸೆ ನೀಡಿದ ಬಿಜೆಪಿ. ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ. ಕಾಡುಗೊಲ್ಲರ ಅಭಿವೃದ್ದಿ ಮಂಡಳಿಯನ್ನು ರಚಿಸುತ್ತಿಲ್ಲ. ಶೇ.90 ರಷ್ಟು ಕಾಡುಗೊಲ್ಲರು ರಾಜ್ಯದಲ್ಲಿ ಬಿಜೆಪಿ.ಪರವಾಗಿದ್ದಾರೆ. ಈಗಲೂ ಎಸ್.ಟಿ.ಮೀಸಲಾತಿ ನೀಡದಿದ್ದರೆ ಕಾಂಗ್ರೆಸ್‍ಗೆ ಕಲಿಸಿದಂತೆ ಬಿಜೆಪಿ.ಗೂ ತಕ್ಕಪಾಠ ಕಲಿಸಬೇಕಾಗುತ್ತದೆಂದು ಎಚ್ಚರಿಸಿದರು.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ.ಸರ್ಕಾರ ಅಧಿಕಾರದಲ್ಲಿದೆ. ಹಾಗಾಗಿ ಕಾಡುಗೊಲ್ಲರಿಗೆ ಎಸ್.ಟಿ.ಮೀಸಲಾತಿ ನೀಡುವುದು ದೊಡ್ಡ ವಿಚಾರವೇನಲ್ಲ. ನಮ್ಮ ಬೇಡಿಕೆಯನ್ನು ಈಡೇರಿಸಿದರೆ ಮುಂದಿನ ಚುನಾವಣೆಯಲ್ಲಿ ಇಡಿ ಕಾಡುಗೊಲ್ಲ ಸಮಾಜ ಬಿಜೆಪಿ.ಪರವಾಗಿರುತ್ತದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರುಗಳಾದ ರವಿಕುಮಾರ್, ಶ್ರೀಮತಿ ಗೀತ ನಂದಿನಿಗೌಡ, ಸಿದ್ದೇಶ್‍ಯಾದವ್, ಹೊಳಲ್ಕೆರೆಯ ಚಿತ್ತಯ್ಯ, ಇನ್ನು ಮೊದಲಾದವರು ಚಿಂತನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಿವಮೂರ್ತಿ ಸೇರಿದಂತೆ ನಾಡಿನ ನಾನಾ ಭಾಗಗಳಿಂದ ಕಾಡುಗೊಲ್ಲರು ಚಿಂತನಾ ಸಭೆಯಲ್ಲಿ ಭಾಗವಹಿಸಿದ್ದರು.