ಕಲಬುರಗಿ: ರಾಜ್ಯದಲ್ಲಿ ಲೋಕಸಭಾ ಚುನಾವಣೆ ಎದುರಿಸಲು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಸಜ್ಜಾಗಿವೆ. ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲು ಹೊರಟಿವೆ. ಈ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಜೆಡಿಎಸ್ ಮೊದಲಿನಿಂದಲೂ ಸೆಕ್ಯೂಲರ್ ಅಂತ ಹೇಳುತ್ತಿದ್ದರು. ಆದರೆ ಈಗ ಜೆಡಿಎಸ್ ತನ್ನ ಐಡಿಯಾಲಜಿ ಬದಲಾಯಿಸಿಕೊಂಡರೆ ನಾನು ಏನು ಕಮೆಂಟ್ ಮಾಡುವುದಕ್ಕೆ ಹೋಗುವುದಿಲ್ಲ ಎಂದಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ದೇವೇಗೌಡರು ಮತ್ತು ಮೋದಿ ಕೈ ಕೈ ಹಿಡಿದುಕೊಂಡಿರುವುದನ್ನು ನೋಡಿದ್ದೇನೆ. ಎರಡು ಪಕ್ಷದ ನಾಯಕರು ಒಂದಾಗುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ಎಷ್ಟು ಸೀಟು ಕೊಡುತ್ತಾರೋ, ಇವರು ಎಷ್ಟು ಸೀಟು ಕೇಳುತ್ತಾರೋ ಇನ್ನು ಯಾವುದೇ ಸ್ಪಷ್ಟನೆ ಇಲ್ಲ. ಆದರೆ ನಮ್ಮನ್ನು ಮಾತ್ರ ಯಾರೂ ಹತ್ತಿಕ್ಕುವುದಕ್ಕೆ ಆಗುವುದಿಲ್ಲ ಎಂದಿದ್ದಾರೆ.
ನಾವೂ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 60% ಮತ ಪಡೆಯುವ ಪ್ರಯತ್ನದಲ್ಲಿದ್ದೇವೆ. ಇಂಡಿಯಾದ ನಾಲ್ಕನೇ ಸಭೆಯನ್ನು ಮಾಡಬೇಕಿದೆ. ನಾವೆಲ್ಲಾ ಒಟ್ಟಾಗಿ ಚುನಾವಣೆಯನ್ನು ಎದುರಿಸಲಿದ್ದೇವೆ. ದೇಶದ 28 ಪಾರ್ಟಿಗಳು ಒಟ್ಟಾಗಿ ಚುನಾವಣೆ ಎದುರಿಸಲಿದ್ದೇವೆ. ನಾನು ರಾಜಕೀಯದಲ್ಲಿ ಧರ್ಮ ತರುವುದಿಲ್ಲ. ರಾಜಕೀಯದ ಹಾದಿಯಲ್ಲಿ ಒಟ್ಟಾಗಿ ಸ್ಪರ್ಧೆ ಮಾಡುತ್ತೇವೆ. ಧರ್ಮದ ಹೆಸರು ಬಂದಾಗ ಅಂಬೇಡ್ಕರ್ ಸರಿನೋ, ಬಸವಣ್ಣ ಸರಿನೋ ಎಂಬ ಚರ್ಚೆಯನ್ನು ಆಮೇಲೆ ಮಾಡೋಣಾ ಎಂದಿದ್ದಾರೆ.
ಇನ್ನು ಜಿ20 ಶೃಂಹಸಭೆಯ ಬಗ್ಗೆ ಮಾತನಾಡಿದ್ದು, ದೇಶದಲ್ಲಿ, ಪ್ರಪಂಚದಲ್ಲಿ ಗದ್ದಲವಿಲ್ಲದೆ ಸಾಮರಸ್ಯದಿಂದ ಇರುವುದು ತುಂಬಾ ಒಳ್ಳೆಯದು. ಜಿ20 ಸಭೆಗೆ ಆಹ್ವಾನ ಇಲ್ಲದೆ ಹೇಗೆ ಹೋಗುವುದು ಎಂದು ಹೇಳುವ ಮೂಲಕ ಜಿ20 ಶೃಂಗ ಸಭೆಗೆ ಆಹ್ವಾನ ನೀಡಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.