ನವದೆಹಲಿ: ಲೋಕಸಭಾ ಚುನಾವಣೆಗೆ ಬಿಜೆಪಿ ಜೊತೆಗೆ ಜೆಡಿಎಸ್ ಕೈ ಜೋಡಿಸಿದೆ. ಈ ಬಾರಿ ಲೋಕಸಭೆಯಲ್ಲಿ ಕಾಂಗ್ರೆಸ್ ಮಣಿಸಲು ಮಾಸ್ಟರ್ ಪ್ಲ್ಯಾನ್ ಗಳನ್ನು ಮಾಡಲಾಗುತ್ತಿದೆ. ಅದರಲ್ಲೂ ಕುಮಾರಸ್ವಾಮಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಬಿಜೆಪಿಗಿಂತ ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರೇ ಹೆಚ್ಚಿನ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ. ಇದೀಗ ಜೆಡಿಎಸ್ ನಾಯಕರು ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ತಮ್ಮ ನಿರ್ಧಾರವನ್ನು ಬದಲಾಯಿಸಿದ್ದಾರೆ ಎನ್ನಲಾಗುತ್ತಿದೆ.
ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಬಿಜೆಪಿ ಸ್ಪರ್ಧೆ ಮಾಡಿದ್ದಲ್ಲಿ ಜೆಡಿಎಸ್ ನಾಯಕರು, ಕಾರ್ಯಕರ್ತರು ಸಂಪೂರ್ಣ ಬೆಂಬಲ ನೀಡಲಿದ್ದಾರೆ. ಹಾಗೇ ತಾವೂ ಗೆದ್ದೇ ಗೆಲ್ಲುತ್ತೀವಿ ಎಂಬ ಕ್ಷೇತ್ರವನ್ನು ಜೆಡಿಎಸ್ ನಾಯಕರು ಆಯ್ಕೆ ಮಾಡಿಕೊಳ್ಳುತ್ತಾರೆ. ಅದರಲ್ಲಿ ಐದು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಾರೆ ಎಂಬ ಮಾತಿತ್ತು. ಇದೀಗ ಆ ಸಂಖ್ಯೆ ಕಡಿಮೆಯಾಗಿದೆ ಎನ್ನಲಾಗಿದೆ.
ಈಗಾಗಲೇ ದೆಹಲಿಯಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಅವರ ಜೊತೆಗೆ ಜೆಡಿಎಸ್ ಪ್ರಬಲ ನಾಯಕರು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಸೀಟು ಹಂಚಿಕೆಯ ಕುರಿತು ಮಹತ್ವದ ಸಭೆ ನಡೆಯುತ್ತಿದೆ. ಅದರಲ್ಲಿ ಜೆಡಿಎಸ್ ಭದ್ರಕೋಟೆಯ ಮೇಲೆ ಹೆಚ್ಚಿನ ಗಮನ ಹರಿಸಲು ಕುಮಾರಸ್ವಾಮಿ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ಅದರಲ್ಲೂ ಮಂಡ್ಯ, ಹಾಸನ, ಕೋಲಾರದಲ್ಲಿ ಮಾತ್ರ ಜೆಡಿಎಸ್ ಸ್ಪರ್ಧೆ ಮಾಡಲಿದೆ. ತಾವೂ ಸ್ಪರ್ಧೆ ಮಾಡಿದ ಕ್ಷೇತ್ರದಲ್ಲಿ ಶೇಕಡ 100ರಷ್ಟು ಫಲಿತಾಂಶ ಪಡೆಯಲೇಬೇಕೆಂಬ ಹಠ ಜೆಡಿಎಸ್ ನಾಯಕರದ್ದಾಗಿದೆ. ಈ ಮೂಲಕ ತಮಗೆ ಬಲ ಇರುವ ಕಡೆಯಲ್ಲಿ ಸ್ಪರ್ಧೆಗೆ ನಿಂತು, ಗೆಲುವಿನ ಕಡೆಗೆ ಗಮನ ಹರಿಸಲು ನಿರ್ಧಾರ ಮಾಡಿದ್ದಾರೆ.