ಹಾಸನ : ಪರಿಷತ್ ಚುನಾವಣೆಯ ಅಬ್ಬರ ಜೋರಾಗಿ ನಡೆಯುತ್ತಿದೆ. ಇದೇ ತಿಂಗಳು 10 ರಂದು ಪರಿಷತ್ ಚುನಾವಣೆ ನಡೆಯಲಿದೆ. ಹೀಗಾಗಿ ಪಕ್ಷದ ಮುಖಂಡರುಗಳು ಕೂಡ ತಮ್ಮ ತಮ್ಮ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ತೊಡಗಿದ್ದಾರೆ. ಪ್ರಚಾರದ ಬೆನ್ನಲ್ಲೇ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿ ಜೆಡಿಎಸ್ ಮುಖಂಡರ ಮೇಲೆ ಗಂಭೀರವಾದ ಆರೋಪ ಹೊರಿಸಿದ್ದಾರೆ.
ಕಾಂಗ್ರೆಸ್ ಎಂಎಲ್ಎ ಅಭ್ಯರ್ಥಿ ಶಂಕರ್ ಈ ರೀತಿ ಆರೋಪ ಮಾಡಿದ್ದು, ನನಗೆ ಮತ ಹಾಕೋದಕ್ಕೆ ಗ್ರಾ.ಪಂ ಸದಸ್ಯರಿಗೆ ಆಸಕ್ತಿ ಇದೆ. ಆದ್ರೆ ಜೆಡಿಎಸ್ ನವರ ಕಿರುಕುಳದಿಂದ ಅವರಿಗೆ ಹಾಕಲು ಸಾಧ್ಯವಾಗ್ತಿಲ್ಲ ಎಂದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ಜೆಡಿಎಸ್ ನವರು ನಮಗೆ ಬೆದರಿಕೆ ಒಡ್ಡುತ್ತಿದ್ದಾರೆಂದು ಗ್ರಾಮ ಪಂಚಾಯತ್ ಸದಸ್ಯರು ಹೇಳುತ್ತಿದ್ದಾರೆ. ನಮಗೆ ಮತ ಹಾಕಬೇಕು. ನಮ್ಮವರು ಅಲ್ಲಿಯೇ ಓಡಾಡುತ್ತಿರುತ್ತಾರೆ. ನೀವೂ ಬೇರೆಯವರಿಗೆ ಮತ ಹಾಕಿದ್ರೆ ಗೊತ್ತಾಗುತ್ತೆ ಎನ್ನುತ್ತಿದ್ದಾರಂತೆ.
ಅಲ್ಲದೇ ಮಹಿಳಾ ಮತದಾರರ ಮನೆಗೂ ಬಂದು ಒತ್ತಾಯ ಮಾಡುತ್ತಿದ್ದಾರಂತೆ. ಈ ಕಾರಣ ಅವರೆಲ್ಲಾ ನನಗೆ ಮತ ಹಾಕಲು ಹೆದರುತ್ತಿದ್ದಾರೆ. ಜೆಡಿಎಸ್ ನವರು ಹೀಗೆ ಬೆದರಿಕೆಯನ್ನ ಮುಂದುವರೆಸಿದ್ರೆ ನಾನು ದೂರು ಕೊಡುತ್ತೇನೆಂದು ಶಂಕರ್ ಅವರು ಹೇಳಿದ್ದಾರೆ.