ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಏ.28) : ಅನೇಕ ಹಿರಿಯರು ಮತ್ತು ಯುವಕರನ್ನು ಸಂಪರ್ಕಿಸಿ ಅಭಿಪ್ರಾಯಗಳನ್ನು ತೆಗೆದುಕೊಂಡು ಪ್ರಣಾಳಿಕೆ ಹೊರಡಿಸಿದ್ದೇನೆಂದು ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಜೆಡಿಎಸ್. ಅಭ್ಯರ್ಥಿ ಜಿ.ರಘು ಆಚಾರ್ ತಿಳಿಸಿದರು.
ಜೆಡಿಎಸ್. ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ನವ ಚಿತ್ರದುರ್ಗ ನಿರ್ಮಾಣಕ್ಕಾಗಿ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಎರಡು ಬಾರಿ ಇಲ್ಲಿ ವಿಧಾನಪರಿಷತ್ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ರಾಜಕಾರಣ ನಿಂತ ನೀರಲ್ಲ. ಹರಿಯುವ ನೀರಿದ್ದಂತೆ. ಮುಂದಿನ ತಿಂಗಳು ಹತ್ತನೆ ತಾರೀಖಿನಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಬಹುಮತ ಸಿಕ್ಕು ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದೆ ತಡ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ಎಲ್ಲಾ ಭರವಸೆಗಳನ್ನು ಈಡೇರಿಸುವುದಾಗಿ ಹೇಳಿದರು.
ಶನಿವಾರ ಬೆಳಿಗ್ಗೆ 7 ಗಂಟೆಗೆ ನಗರದ ಒಂದನೆ ವಾರ್ಡ್‍ನಿಂದ ಪಾದಯಾತ್ರೆ ಆರಂಭಿಸಿ ಎರಡು ದಿನಗಳ ಕಾಲ 35 ವಾರ್ಡ್‍ಗಳಲ್ಲಿ ಸಂಚರಿಸಿ ಮತದಾರರಿಂದ ಬರುವ ದೇಣಿಗೆಯನ್ನು ರೈತರಿಗೆ ನೀಡುತ್ತೇನೆ. ನಮ್ಮದು ರೈತರ ಸ್ವಾಭಿಮಾನದ ಪಕ್ಷ. ಜೆಡಿಎಸ್. ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಜನತೆಗೆ ನೀಡಿದ ಯೋಜನೆಗಳನ್ನು ಪ್ರತಿ ಮನೆ ಮನೆಗೆ ಮುಟ್ಟಿಸಿ ಮತ ಕೇಳುತ್ತೇನೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ವರ್ಷಕ್ಕೆ ಐದು ಅಡುಗೆ ಅನಿಲ ಉಚಿತವಾಗಿ ಪ್ರತಿ ಮನೆಗೆ ನೀಡಲಾಗುವುದು ಎಂದರು.
ಜೆಡಿಎಸ್. ರಾಜ್ಯ ಉಪಾಧ್ಯಕ್ಷ ಬಿ.ಕಾಂತರಾಜ್ ಮಾತನಾಡುತ್ತ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಜೆಡಿಎಸ್. ಅಭ್ಯರ್ಥಿ ಜಿ.ರಘು ಆಚಾರ್ ಹೊರಡಿಸಿರುವ ನವ ಚಿತ್ರದುರ್ಗ ನಿರ್ಮಾಣಕ್ಕಾಗಿ ಪ್ರಣಾಳಿಕೆಯಲ್ಲಿ ಕೃಷಿ, ನೀರಾವರಿ, ಕುಡಿಯುವ ನೀರು, ಶಿಕ್ಷಣ, ಆರೋಗ್ಯಕ್ಕೆ ಒತ್ತು, ನಿರುದ್ಯೋಗಿಗಳ ಕೈಗೆ ಕೆಲಸ ನೀಡುವುದಕ್ಕಾಗಿ ಗಾರ್ಮೆಂಟ್ಸ್, ಐ.ಟಿ. ಹಬ್ ಸ್ಥಾಪನೆ, ಮಹಿಳೆಯರಿಗೆ ಪ್ರತ್ಯೇಕ ಪ್ರಣಾಳಿಕೆಯಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜೆಡಿಎಸ್. ತಾಲ್ಲೂಕು ಅಧ್ಯಕ್ಷ ತಿಮ್ಮಣ್ಣ, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಡಿ.ಗೋಪಾಲಸ್ವಾಮಿ ನಾಯಕ, ಯುವ ಘಟಕದ ಜಿಲ್ಲಾಧ್ಯಕ್ಷ ಓ.ಪ್ರತಾಪ್‍ಜೋಗಿ, ಅಬ್ಬು ಇನ್ನು ಅನೇಕರು ಪತ್ರಿಕಾಗೋಷ್ಠಿಯಲ್ಲಿ
ಉಪಸ್ಥಿತರಿದ್ದರು.