ಹುಬ್ಬಳ್ಳಿ; ಇತ್ತೀಚೆಗಷ್ಟೇ ಶಾಸಕ ಯತ್ನಾಳ್ ಅವರನ್ನು ಬಿಜೆಪಿ ಉಚ್ಛಾಟನೆ ಮಾಡಿದೆ. ಆರು ವರ್ಷಗಳ ಕಾಲ ಪಕ್ಷದಿಂದ ಹೊರಗಿಟ್ಟಿದೆ. ಹೀಗಾಗಿ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿಗಳು ಶಾಸಕ ಯತ್ನಾಳ್ ಪರವಾಗಿ ಮಾತನಾಡಿದ್ದರು. ಇದೀಗ ಸ್ವಾಮೀಜಿಗೆ ಪಂಚಮಸಾಲಿ ಟ್ರಸ್ಟ್ ಎಚ್ಚರಿಕೆ ನೀಡಿದೆ.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪರವಾಗಿ ಹಾಗೂ ಒಂದು ಪಕ್ಷದ ಪರವಾಗಿ ಕೂಡಲಸಂಗಮದ ಪಂಚಮಸಾಲಿ ಗುರುಪೀಠಾಧ್ಯಕ್ಷ ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರು ಮಾತನಾಡಬಾರದು. ಸ್ವಾಮೀಜಿಯವರು ತಮ್ಮ ವರ್ತನೆ ಬದಲಾವಣೆ ಮಾಡಿಕೊಳ್ಳಬೇಕು. ಮಾತನಾಡಿದರೆ ಅನಿವಾರ್ಯವಾಗಿ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಎಚ್ಚರಿಕೆ ನೀಡಿದೆ. ಯಾವುದೇ ರಾಜಕೀಯ ವ್ಯಕ್ತಿಯ ಪರ, ಪಕ್ಷದ ಪರವಾಗಿ ಮಾತನಾಡದಂತೆ ಜಯಮೃತ್ಯುಂಜಯ ಸ್ವಾಮಿಗಳಿಗೆ ಮನವಿ ಮಾಡಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮುಂದಿನ ವಾರ ಸಭೆ ನಡೆಸುತ್ತೇವೆ. ಅಷ್ಟರ ಒಳಗೆ ಸ್ವಾಮೀಜಿಯವರ ವರ್ತನೆ ಬದಲಾವಣೆಯಾಗದೆ ಇದ್ದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಟ್ರಸ್ಟ್ ನ ನಿಯಮದ ವಿರುದ್ಧ ನಡೆದುಕೊಂಡರೆ ಟ್ರಸ್ಟ್ ನಿಂದ ಕೆಳಗಿಳಿಸುವ ಅಧಿಕಾರ ಟ್ರಸ್ಟ್ ಗೆ ಇದೆ. ಶಾಸಕ ಬಸನಗೌಡ ಯತ್ನಾಳ್ ಅವರು ಟ್ರಸ್ಟ್ ಬಗ್ಗೆ ಬೇಜವಬ್ದಾರಿಯಿಂದ ಮಾತನಾಡಿದ್ದಾರೆ. ಇದು ಟ್ರಸ್ಟ್ ಹಾಗೂ ಸಮಾಜದವರಿಗೆ ನೋವು ತರಿಸಿದೆ. ಯಾವುದೇ ಪದಾಧಿಕಾರಿಗಳು ಸಮಾಜದ ಆಸ್ತಿ ಕಬಳಿಕೆ ಮಾಡಿಲ್ಲ. ಸಾರ್ವಜನಿಕವಾಗಿ ಟ್ರಸ್ಟ್ ಪದಾಧಿಕಾರಿಗಳ ವಿರುದ್ಧ ಮಾತನಾಡಿದ್ದಾರೆ. ಇದಕ್ಕೆ ಬಸನ ಗೌಡ ಪಾಟೀಲ್ ಯತ್ನಾಳ್ ಅವರು ಕ್ಷಮೆ ಕೇಳಬೇಕು ಇಲ್ಲದಿದ್ದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.


