ಬೆಂಗಳೂರಿನ ಜಯಮಹಲ್ ರಸ್ತೆ ಹಾಗೂ ಬಳ್ಳಾರಿಯನ್ನು ಕನೆಕ್ಟ್ ಮಾಡುವ ರಸ್ತೆಯಲ್ಲಿ ಪ್ರತಿನಿತ್ಯವೂ ಸಿಕ್ಕಾಪಟ್ಟೆ ಟ್ರಾಫಿಕ್ ಆಗುತ್ತಿದೆ. ಹೀಗಾಗಿ ಈ ರಸ್ತೆ ಅಗಲೀಕರಣಕ್ಕೆ ಸರ್ಕಾರ ಯೋಜನೆ ಹಾಕಿಕೊಂಡಿತ್ತು. ಸುಪ್ರೀಂ ಕೋರ್ಟ್ ನಲ್ಲಿ ಇದೀಗ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಿದೆ. ರಸ್ತೆಗಳ ವಿಸ್ತರಣೆಗಾಗಿ ಸ್ವಾಧೀನಪಡಿಸಿಕೊಂಡ ಅರಮನೆ ಮೈದಾನದ 15 ಎಕರೆಗೂ ಹೆಚ್ಚಿನ ಭೂಮಿಗೆ ಸಂಬಂಧಿಸಿದಂತೆ 3,400 ಕೋಟಿಗೂ ಹೆಚ್ಚಿನ ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕು ಅಂದ್ರೆ ಟಿಡಿಆರ್ ಪ್ರಮಾಣ ಪತ್ರವನ್ನು ನ್ಯಾಯಾಲಯದಲ್ಲಿ ಠೇವಣಿ ಇಡುವಂತೆ ಆದೇಶ ನೀಡಿತ್ತು. ಈ ಬಗ್ಗೆ ಇದೀಗ ಸಂಸದ ಯದುವೀರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಕೊಡಗಿನಲ್ಲಿ ಮಾತನಾಡಿದ ಯದುವೀರ್ ಅವರು, ಬೆಂಗಳೂರು ಅರಮನೆ ಜಾಗದ ವಿಷಯದಲ್ಲಿ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಅದು ನಮಗೆ ಸಂತೋಷ ಕೊಡುವ ವಿಚಾರವೇನು ಅಲ್ಲ. ರಸ್ತೆ ಅಗಲೀಕರಣ, ಅಭಿವೃದ್ಧಿ ಕೆಲಸ ಏನಿದೆ ಅದನ್ನ ಸರಿಪಡಿಸಿಕೊಂಡು ಮುಂದುವರೆದರೆ ಏನೂ ಸಮಸ್ಯೆ ಇಲ್ಲ.

ನಮಗೇನು ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ಹೆಸರು ತರಬೇಕು ಎಂಬುದಿಲ್ಲ. ಕೋರ್ಟ್ ಆದೇಶದಂತೆ ಪ್ರಕ್ರಿಯೆ ಆದರೆ ಎಲ್ಲರಿಗೂ ಒಳ್ಳೆಯದು. ಟಿಡಿಆರ್ ಕೊಡುವುದಕ್ಕೆ ಸರ್ಕಾರದ ಖಜಾನೆಯಿಂದ ಒಂದು ರೂಪಾಯಿ ಕೊಡುವ ಅವಶ್ಯಕತೆ ಇಲ್ಲ. ಟಿಡಿಆರ್ ನ ಮಾಲೀಕರು ಎಂದು ಒಂದು ಸರ್ಟಿಫಿಕೇಟ್ ಕೊಡಬೇಕು ಅಷ್ಟೇ. ಸರ್ಟಿಫಿಕೇಟ್ ಕೊಟ್ಟು ರಸ್ತೆ ಅಗಲೀಕರಣ ಮಾಡಬೇಕು. ಬೆಂಗಳೂರಿನ ಜಯಮಹಲ್ ಹಾಗೂ ಬಳ್ಳಾರಿ ರಸ್ತೆಯ ಟ್ರಾಫಿಕ್ ನಲ್ಲಿ ಸಿಕ್ಕಿ ಹಾಕಿಕೊಂಡಿದ್ದೀನಿ. ನಾವೂ ಈ ಮೊದಲು ಟಿಡಿಆರ್ ಗೆ ಒಪ್ಪಿಕೊಂಡಿರುವುದೇ ಸಮಾಜದ ಹಿತದೃಷ್ಟಿಯಿಂದ ಎಂದು ಪ್ರತಿಕ್ರಿಯೆ ನೀಡಿದ್ದಾರೆ.


