ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಮುಂದಿನ ಸ್ವತಂತ್ರ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅವರು ಡಿಸೆಂಬರ್ 1 ರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಹಾಲಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಅವರು ಮತ್ತೊಂದು ಅವಧಿಗೆ ಸ್ಪರ್ಧಿಸಲು ಬಯಸುವುದಿಲ್ಲ ಎಂದು ICC ಮಂಡಳಿಗೆ ತಿಳಿಸಿದ್ದರು. ಜುಲೈ 27 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿತ್ತು. ಈ ಹಿನ್ನೆಲೆಯಲ್ಲಿ ಷಾ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಬಾರೀ ಬಹುಮತದೊಂದಿಗೆ ಅವಿರೋಧವಾಗಿ ಆಯ್ಕೆಯಾದರು.
35 ರ ಹರೆಯದ ಶಾ ಅವರು ಐಸಿಸಿ ಮುಖ್ಯಸ್ಥರಾಗಿರುವ ಅತ್ಯಂತ ಕಿರಿಯ ವಯಸ್ಸಿನವರಾಗಿದ್ದಾರೆ. ಗ್ರೆಗ್ ಬಾರ್ಕ್ಲೇ ಅವರಿಂದ ಜಯ್ ಶಾ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಈ
ಹಿಂದೆ, ಜಗಮೋಹನ್ ದಾಲ್ಮಿಯಾ ಮತ್ತು ಶರದ್ ಪವಾರ್ ಐಸಿಸಿ ಅಧ್ಯಕ್ಷರಾಗಿದ್ದರು ಮತ್ತು ನಂತರ ಎನ್ ಶ್ರೀನಿವಾಸನ್ ಮತ್ತು ಶಶಾಂಕ್ ಮನೋಹರ್ ಅವರು ಅಧ್ಯಕ್ಷರಾಗಿ ಸ್ಥಾನವನ್ನು ಅಲಂಕರಿಸಿದ್ದರು.
ಐಸಿಸಿ ಅಧ್ಯಕ್ಷರು ಸ್ವತಂತ್ರ ಹುದ್ದೆಯಾಗಿರುವುದರಿಂದ ಷಾ ಅವರು ತಮ್ಮ ಬಿಸಿಸಿಐ ಕರ್ತವ್ಯಗಳನ್ನು ಹಾಗೂ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷರನ್ನು ತ್ಯಜಿಸಬೇಕಾಗುತ್ತದೆ.