ಮೈಸೂರು; ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿದ್ದು, ಇದು ಬಡ, ಮಧ್ಯಮ ವರ್ಗದವರ ಮೇಲೆ ದೊಡ್ಡಮಟ್ಟದಲ್ಲಿಯೇ ಹೊರೆಯಾಗಲಿದೆ. ಹೀಗಾಗಿ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ವಿರುದ್ಧ ಬಿಜೆಪಿ ನಾಯಕರು ಕೆಂಡಾಮಂಡಲರಾಗಿದ್ದಾರೆ. ಇಂದಿನಿಂದ ಜನಾಕ್ರೋಶ ಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ. ಮೈಸೂರಿನಿಂದ ಈ ಯಾತ್ರೆ ಆರಂಭವಾಗಲಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ತಾಯಿ ಚಾಮುಂಡಿಗೆ ವಿಶೇಷ ಪೂಜೆ ಸಲ್ಲಿಸಿ ಯಾತ್ರೆಗೆ ಚಾಲನೆ ಕೊಡಲಿದ್ದಾರೆ.

ಇಂದು ಆರಂಭಿಕ ಪ್ರತಿಭಟನೆ ಮೈಸೂರು ಹಾಗೂ ಚಾಮರಾಜನಗರದಲ್ಲಿ ನಡೆಯಲಿದೆ. ಜಿಲ್ಲಾ ಕೇಂದ್ರದಲ್ಲಿ ಒಂದೆರಡು ಕಿಲೋ ಮೀಟರ್ ದೂರದವರೆಗೂ ಪಾದಯಾತ್ರೆ ನಡೆಸಿ, ಬಳಿಕ ಪ್ರತಿಭಟನಾ ಸಮಾವೇಶ ನಡೆಸಲಿದ್ದಾರೆ. ಸುಮಾರು ಹದಿನೈದು ದಿನಗಳ ಕಾಲ ಈ ಪ್ರತಿಭಟನೆಯನ್ನು ನಡೆಸಲು ಬಿಜೆಪಿ ತೀರ್ಮಾನ ಮಾಡಿದ್ದು, ಪ್ರತಿದಿನ ಎರಡು ಜಿಲ್ಲೆಗಳಲ್ಲಿ ಈ ಪಾದಯಾತ್ರೆ ಹಾಗೂ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ನಿನ್ನೆಯಷ್ಟೆ ವಿಪಕ್ಷ ನಾಯಕ ಆರ್.ಅಶೋಕ್ ಜನಾಕ್ರೋಶ ಯಾತ್ರೆಯ ಲೋಗೋವನ್ನು ಬಿಡುಗಡೆ ಮಾಡಿದರು.

ನಾಲ್ಕು ಹಂತದಲ್ಲಿ ಹೋರಾಟ ಮಾಡಲು ಬಿಜೆಪಿ ನಾಯಕರು ತೀರ್ಮಾನಿಸಿದ್ದಾರೆ. ಪ್ರತಿ ಜಿಲ್ಲೆಗೂ ತಮ್ಮ ಹೋರಾಟದ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲು ತೀರ್ಮಾನಿಸಿದ್ದಾರೆ. ಬೆಳಗ್ಗೆ 10 ಗಂಟೆಗೆ ಒಂದು ಜಿಲ್ಲೆ ಮಧ್ಯಾಹ್ನ3 ಗಂಟೆಗೆ ಮತ್ತೊಂದು ಜಿಲ್ಲೆಯಲ್ಲಿ ಹೋರಾಟ ನಡೆಸಲಿದ್ದಾರೆ. ಬೆಲೆ ಏರಿಕೆಯಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ. ಹಾಲಿನ ದರ ಮತ್ತೆ ಮತ್ತೆ ಏರಿಕೆಯಾಗುತ್ತಲೆ ಇದೆ. ವಿದ್ಯುತ್ ದರವೂ ಜಾಸ್ತಿಯಾಗಿದೆ. ಪ್ರತಿನಿತ್ಯ ಬಳಕೆ ಮಾಡುವ ವಸ್ತುಗಳ ಮೇಲೆ ಹೀಗೆ ಬೆಲೆ ಜಾಸ್ತಿ ಮಾಡಿದರೆ ಬದುಕುವುದು ಹೇಗೆ ಪ್ರಶ್ನೆ ಸಾಮಾನ್ಯ ಜನರದ್ದು. ಇದೀಗ ಬೆಲೆ ಏರಿಕೆಯನ್ನು ಖಂಡಿಸಿ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಲು ಸಜ್ಜಾಗಿದೆ.

