ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಜಗದೀಶ್ ಶೆಟ್ಟರ್ ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷ ಸೇರಿದ್ದರು. ಇದೀಗ ಮರಳಿ ಗೂಡಿಗೆ ಸೇರಿದ್ದು, ಬಿಎಸ್ವೈ ನೇತೃತ್ವದಲ್ಲಿ ಮತ್ತೆ ವಾಪಾಸ್ ಬಿಜೆಪಿಗೆ ಬಂದಿದ್ದಾರೆ. ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಕೂಡ ಇಂದಿನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಬಿಜೆಪಿಗೆ ಸೇರಿದ ಜಗದೀಶ್ ಶೆಟ್ಟರ್ ಮಾತನಾಡಿದ್ದು, ಇದು ಸಂತಸದ ಸಂಗತಿ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದಾಗಿನಿಂದ ಕಾರ್ಯಕರ್ತರು, ಮುಖಂಡರು ಎಲ್ಲರ ಅಪೇಕ್ಷೆ ಇತ್ತು ವಾಪಾಸ್ ಬಿಜೆಪಿಗೆ ಬರಬೇಕು ಎಂಬುದು. ನಮ್ಮ ಹೈಕಮಾಂಡ್ ನಾಯಕರಿಗೂ ಆ ಅಪೇಕ್ಷೆ ಇತ್ತು. ಹೈಕಮಾಂಡ್ ನಾಯಕರು ಇಂದು ಮಾತನಾಡಿದಾಗ ಬಹಳ ಗೌರವದಿಂದ ನಡೆಸಿಕೊಂಡಿದ್ದಾರೆ. ಭಾರತೀಯ ಜನತಾ ಪಾರ್ಟಿಗೆ ನಾನು ವಾಪಾಸ್ ಬಂದಿರುವುದು ಬಹಳ ಖುಷಿ. ಕಾಂಗ್ರೆಸ್ ನಿಂದ ವಿಧಾನಪರಿಷತ್ ಸದಸ್ಯನಾಗಿದ್ದೀನಿ. ಈಗಾಗಲೇ ಸಭಾಪತಿ ಅವರಿಗೆ ಮನವಿ ಮಾಡಿದ್ದೀನಿ. ರಾಜೀನಾಮೆಯನ್ನು ಸ್ವೀಕರಿಸಲು ಮನವಿ ಮಾಡಿದ್ದೇನೆ.
ಇವತ್ತು ದೇಶದ ಮುಂದೆ ಇರುವುದು ದೇಶದ ಹಿತರಕ್ಷಣೆ. ನಮ್ಮ ಪ್ರಧಾನಿ ಮೋದಿಯವರು ಇಡೀ ಜಗತ್ತಿನಲ್ಲಿ ಶಕ್ತಿ ವೃದ್ದಿಸಲು ಕೆಲಸ ಮಾಡಿದ್ದಾರೆ. ಹೀಗಾಗಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು. ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ಈ ಮೂಲಕ ಹೇಳುತ್ತೇನೆ ಎಂದಿದ್ದಾರೆ.