ಬೆಂಗಳೂರು: ಇಂದು ಸಿಎಂ ಸಿದ್ದರಾಮಯ್ಯ ಅವರು 2023-24ರ ಬಜೆಟ್ ಮಂಡನೆ ಮಾಡಿದ್ದಾರೆ. ಈ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ಕಟ್ ಅಂಡ್ ಪೇಸ್ಟ್ ಬಜೆಟ್ ಎಂದು ವ್ಯಂಗ್ಯವಾಡಿದ್ದಾರೆ.
ಕೇಂದ್ರ ಸರ್ಕಾರದ ಹಾಗೂ ಹಿಂದಿನ ಬಿಜೆಪಿ ಸರ್ಕಾರವನ್ನು ನಿಂದಿಸಲು ಮೀಸಲಾದ ಬಜೆಟ್ ಇದಾಗಿದೆ. ರಾಜಕೀಯ ಹೇಳಿಕೆಗಳಿಗೆ ಮೀಸಲಾದ ಬಜೆಟ್ ಆಗಿದೆ. ನಮ್ಮ ಹಣಕಾಸು ಸಚಿವರು ದಾಖಲೆ ನಿರ್ಮಿಸಿಕೊಳ್ಳಲು ಮಂಡಿಸಿರುವಂತ ಬಜೆಟ್ ಇದಾಗಿದೆ. ಇದನ್ನು ರಾಜ್ಯ ಬಜೆಟ್ ಪುಸ್ತಕ ಎನ್ನುವುದಕ್ಕಿಂತ ಬಿಜೆಪಿಯನ್ನು ನಿಂದಿಸುವುದಕ್ಕೆ ಸಿದ್ಧವಾದ ಬಜೆಟ್ ಎನ್ನಬಹುದು.
ಈ ಬಾರಿ 3 ಲಕ್ಷ 28 ಸಾವಿರ ಕೋಟಿ ಬಜೆಟ್ ನಲ್ಲಿ ಎರಡೂವರೆ ಲಕ್ಷ ಕೋಟಿ ರೆವಿನ್ಯೂ ಎಕ್ಸ್ ಪೆಂಡಿಚರ್, 27 ಸಾವಿರ ಕೋಟಿ ಸಾಲ ಮರುಪಾವತಿಗೆ ಇಟ್ಟುಕೊಂಡಿದ್ದಾರೆ. ಅದಾದ ಮೇಲೆ 85 ಸಾವಿರ ಕೋಟಿ ಸಾಲ ಎತ್ತುತ್ತಾರೆ. ಆ ಸಾಲಕ್ಕೆ ತಲೆ ಕೊಡುವುದು ಯಾರು?. ರಾಜ್ಯದಲ್ಲಿ ಹಣಕ್ಕೆ ಕೊರತೆ ಇಲ್ಲ. ರಾಜ್ಯದ ತೆರಿಗೆ ಇಲಾಖೆಗಳ ಯಾವುದೇ ಶ್ರಮ ಇಲ್ಲದೆ ಜನರು ರಾಜ್ಯದ ಜನತೆ ಖಜಾನೆ ತುಂಬಿದ್ದಾರೆ. ಅದಕ್ಕಾಗಿ ಜನತೆಯನ್ನು ಅಭಿನಂದಿಸುತ್ತೇನೆ. ಕೋವಿಡ್ ಸಮಸ್ಯೆಯಲ್ಲೂ, ಜನ ಹಣ ತುಂಬಿಸಿಕೊಟ್ಟಿದ್ದಾರೆ. ಒಂದೇ ವರ್ಷಕ್ಕೆ ಜನರ ಮೇಲೆ 85 ಸಾವಿರ ಕೋಟಿ ಸಾಲ ಹೊರೆ ಹೊರೆಸುತ್ತಿದ್ದಾರೆ. ಇಷ್ಟೋಂದು ಸಾಲ ಏಕೆ ಮಾಡ್ತೀದೀರಿ. ಅದಕ್ಕೆ ಕಾರಣ ಕೊಡಿ ಎಂದರು.