ಸುದ್ದಿಒನ್, ಚಿತ್ರದುರ್ಗ ಸೆಪ್ಟೆಂಬರ್. 01 : ಕಳೆದ ಕೆಲವು ದಿನಗಳಿಂದ ಮಾಯವಾಗಿದ್ದ ಮಳೆ ಇಂದು ಸುಮಾರು ಎರಡು ಗಂಟೆಗೂ ಹೆಚ್ಚು ಸಮಯ ಸುರಿದ ಧಾರಾಕಾರ ಮಳೆಯಿಂದಾಗಿ ಬಿಸಿಲಿನ ಝಳಕ್ಕೆ ಹೈರಾಣಾಗಿದ್ದ ಕೋಟೆನಾಡಿನ ಜನರಿಗೆ ಮಳೆರಾಯ ತಂಪೆರೆದಿದ್ದಾನೆ.
ಮಧ್ಯಾನ್ಹದಿಂದಲೇ ಅಲ್ಲಲ್ಲಿ ಮಳೆ ಬೀಳುತ್ತಿತ್ತು. ಆದರೆ ಸಂಜೆ 7 ಗಂಟೆಗೆ ಆರಂಭವಾದ ಮಳೆ ಕ್ರಮೇಣ ಬಿರುಸು ಪಡೆದುಕೊಂಡು ಜೋರಾಗಿ ಸುರಿಯಲಾರಂಭಿಸಿತು.
ಶ್ರಾವಣ ಶುಕ್ರವಾರ : ಇಂದು ಶ್ರಾವಣ ಮಾಸದ ಮೂರನೆಯ ಶುಕ್ರವಾರವಾಗಿದ್ದರಿಂದ ನಗರದ ದೇವಸ್ಥಾನಗಳಿಗೆ ಭಕ್ತರು ಸಾಲುಗಟ್ಟಿ ನಿಂತಿದ್ದರು. ಕೋಟೆ ಮೇಲಿನ ಏಕನಾಥೇಶ್ವರೀ, ರಾಜ ಉತ್ಸವಾಂಬ ದೇವಾಲಯ, ಕನ್ಯಕಾ ಪರಮೇಶ್ವರಿ ಅಮ್ಮನವರ ದೇವಾಲಯ ಬರಗೇರಮ್ಮ ದೇವಸ್ಥಾನ, ತಿಪ್ಪಿನಘಟ್ಟಮ್ಮ ದೇವಸ್ಥಾನ ಸೇರಿದಂತೆ ಅನೇಕ ದೇವಾಲಯಗಳಲ್ಲಿ ಭಕ್ತರು ಹೆಚ್ಚಾಗಿ ನೆರೆದಿದ್ದರು. ಸಂಜೆ ಸುರಿದ ಬಾರೀ ಮಳೆಯಿಂದಾಗಿ ಪರದಾಡುವಂತಾಗಿ ಮಳೆ ನಿಲ್ಲುವವರೆಗೂ ಕೆವರು ದೇವಸ್ಥಾನದಲ್ಲಿಯೇ ಇದ್ದು ಮಳೆ ಕಡಿಮೆಯಾದ ನಂತರ ತೆರಳಿದರು.
ವಾಹನ ಸಂಚಾರ ಅಸ್ತವ್ಯಸ್ತ :
ಮಳೆಯ ಅಬ್ಬರಕ್ಕೆ ರಸ್ತೆಯಲ್ಲಿ ಮಳೆಯ ನೀರು ಹರಿಯಿತು. ಇದರಿಂದ ನಗರದ ಗಾಂಧಿ ವೃತ್ತದ ಎರಡೂ ಬದಿಯಲ್ಲಿ ಚರಂಡಿಯಲ್ಲಿ ನೀರು ಸರಾಗವಾಗಿ ಸಾಗದೇ ರಸ್ತೆಯೆಲ್ಲಾ ನೀರು ತುಂಬಿಕೊಂಡು ಪಾದಾಚಾರಿಗಳು ಸೇರಿದಂತೆ ದ್ವಿಚಕ್ರ ವಾಹನಗಳ ಸವಾರರು ತೀವ್ರ ಪರದಾಡುವಂತಾಯಿತು. ಸಂಜೆ ವೇಳೆಗೆ ಮನೆ ಕಡೆ ಹೊರಟಿದ್ದ ಸಾಕಷ್ಟು ಜನರು ಮಳೆಯಲ್ಲಿ ಸಿಲುಕಿ ಪರದಾಡಿದರು.
ಮೆದೇಹಳ್ಳಿ ರಸ್ತೆಯ ರೈಲ್ವೆ ಅಂಡರ್ ಪಾಸ್, ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿ ಬೈಪಾಸ್ ರಸ್ತೆ, ಮಠದ ಕುರುಬರಹಟ್ಟಿಯ ಅಂಡರ್ ಪಾಸ್, ಜೆಸಿಆರ್ ಬಳಿಯ ಬೈಪಾಸ್ ರಸ್ತೆ, ತುರುವನೂರು ಗೇಟ್ ಮತ್ತು ರೈಲ್ವೆ ಅಂಡರ್ ಪಾಸ್ ಬಳಿ ನೀರು ನಿಂತಿದ್ದು ವಾಹನ ಸವಾರರಿಗೆ ತೀವ್ರ ತೊಂದರೆಯಾಯಿತು.
ಜಿಲ್ಲೆಯಾದ್ಯಂತ ಗುರುವಾರ ರಾತ್ರಿ ಸುರಿದ ಮಳೆ ವಿವರ
ಹಿರಿಯೂರಿನಲ್ಲಿ ಅತಿಹೆಚ್ಚು ಅಂದರೆ 114 ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯ ಅತ್ಯಧಿಕ ಮಳೆಯಾಗಿತ್ತು. ಬಬ್ಬೂರಿನಲ್ಲಿ 68 ಮಿ.ಮೀ, ಇಕ್ಕನೂರು 15.2 ಮಿ.ಮೀ, ಈಶ್ವರಗೆರೆ 11.2 ಮಿ.ಮೀ, ಸುಗೂರು 16.3 ಮಿ.ಮೀ ಮಳೆಯಾಗಿದೆ.
ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗ-1 ರಲ್ಲಿ 42.2 ಮಿ.ಮೀ, ಚಿತ್ರದುರ್ಗ-2 ರಲ್ಲಿ 1.4 ಮಿ.ಮೀ ಮಳೆಯಾಗಿದೆ.
ಹೊಳಲ್ಕೆರೆ ತಾಲ್ಲೂಕಿನ ಹೆಚ್.ಡಿ.ಪುರದಲ್ಲಿ 8.6 ಮಿ.ಮೀ ಮಳೆಯಾಗಿದೆ.
ಮೊಳಕಾಲ್ಮೂರು ತಾಲ್ಲೂಕಿನ ಮೊಳಕಾಲ್ಮೂರು 3.6 ಮಿ.ಮೀ, ರಾಯಾಪುರದಲ್ಲಿ 1 ಮಿ.ಮೀ ಮಳೆಯಾಗಿದೆ.
ಹೊಸದುರ್ಗ ತಾಲ್ಲೂಕಿನ ಮತ್ತೋಡು 3.2 ಮಿ.ಮೀ, ಮಾಡದಕೆರೆ 22 ಮಿ.ಮೀ ಮಳೆಯಾಗಿದೆ.
ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆಯಲ್ಲಿ 52 ಮಿ.ಮೀ, ಪರಶುರಾಂಪುರ 1.2 ಮಿ.ಮೀ, ತಳುಕು 44.2 ಮಿ.ಮೀ, ಡಿ.ಮರಿಕುಂಟೆ 2.2 ಮಿ.ಮೀ ಮಳೆಯಾಗಿದೆ.
ರಾಜ್ಯಾದ್ಯಂತ ಮುಂದಿನ ಒಂದು ವಾರಗಳ ಕಾಲ ಮಳೆ ಸಾಧ್ಯತೆ
ಮಳೆಗಾಗಿ ರೈತರು ಕಣ್ಣರಳಿಸಿ ಕಾಯುತ್ತಿದ್ದರು. ಹೊಲ ಉಳುಮೆ ಮಾಡಿ, ಬೀಜ ಬಿತ್ತನೆ ಬೀಜ ಹಾಕಿ ಮಳೆಗಾಗಿ ಕಾಯುತ್ತಿದ್ದಾರೆ. ನಿಟ್ಟುಸಿರು ಬಿಟ್ಟಂತೆ ನಿನ್ನೆಯಿಂದ ರಾಜ್ಯದೆಲ್ಲೆಡೆ ಮಳೆರಾಯ ದರ್ಶನ ಕೊಟ್ಟಿದ್ದಾನೆ. ರೈತರೆಲ್ಲ ಸಂತಸದಲ್ಲಿ ಮುಳುಗಿದ್ದಾರೆ. ಮುಂದಿನ ಒಂದು ವಾರಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಬೆಂಗಳೂರಿನಲ್ಲಂತು ರಾತ್ರಿ ಇಡೀ ಮಳೆ ಸುರಿದಿದೆ. ಹಲವೆಡೆ ಪಾರ್ಕ್ ಗಳಲ್ಲೂ ಮಳೆ ನೀರು ನಿಂತು ಜಲಾವೃತಗೊಂಡಿದೆ. ಇಂದು ಕೂಡ ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ. ರಾಜ್ಯದ ಉತ್ತರ ಒಳನಾಡಿನಲ್ಲಿ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಇಷ್ಟು ದಿನ ವಾಡಿಕೆಯಂತೆ ಮಳೆಯಾಗಿಲ್ಲ. ಆದ್ರೆ ಸೆಪ್ಟೆಂಬರ್ ತಿಂಗಳಲ್ಲಿ ವಾಡಿಕೆಯಂತೆ ಮಳೆಯಾಗಲಿದೆ ಎಂಬ ಸೂಚನೆ ನೀಡಲಾಗಿದೆ.
ರಾಜ್ಯದಲ್ಲಿ ವಾಡಿಕೆಯಂತೆ ಮಳೆ ಆಗದ ಹಿನ್ನೆಲೆ ಡ್ಯಾಂಗಳು ಖಾಲಿಯಾಗುತ್ತಿವೆ. ಅದರಲ್ಲೂ ಕೆಆರ್ಎಸ್ ಡ್ಯಾಂನಲ್ಲಿ ಮಳೆ ಇಲ್ಲದೆ ಒಂದು ಕಡೆ ನೀರಿಲ್ಲ, ಮತ್ತೊಂದು ಕಡೆ ತಮಿಳುನಾಡಿಗೆ ಬೇರೆ ನೀರು ಹರಿಸುತ್ತಿರುವ ಕಾರಣ ದಿನೇ ದಿನೇ ನೀರು ಖಾಲಿಯಾಗ್ತಾ ಇದೆ. ಇನ್ಮುಂದೆ ಆದ್ರೂ ಮಳೆ ವಾಡಿಕೆಯಂತೆ ಸುರಿದರೆ ಡ್ಯಾಂಗಳು ತುಂಬಲಿವೆ.