ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಹೊಳಲ್ಕೆರೆ, ಡಿಸೆಂಬರ್.01 : ಶಿಕ್ಷಣದ ಜೊತೆ ಮಕ್ಕಳಲ್ಲಿ ಕನ್ನಡ ನಾಡು, ನುಡಿ, ನೆಲ, ಜಲ, ಸಂಸ್ಕೃತಿ, ಸಂಸ್ಕಾರ ಬಗ್ಗೆ ಅಭಿಮಾನ ಮೂಡಿಸುವ ಹೊಣೆಗಾರಿಕೆ ಶಿಕ್ಷಕರು ಹಾಗೂ ಪೋಷಕರುಗಳ ಮೇಲಿದೆ ಎಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.
ಹೊಳಲ್ಕೆರೆ ತಾಲ್ಲೂಕಿನ ತರಳಬಾಳು ನಗರ ಮುತ್ತುಗದೂರು ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹೊಳಲ್ಕೆರೆ ಮತ್ತು ಬಿ.ದುರ್ಗ ಹೋಬಳಿ ಘಟಕ ತರಳಬಾಳು ನೌಕರರ ಕ್ಷೇಮಾಭಿವೃದ್ದಿ ಸಂಘ, ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಶಾಲಾ-ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಡೆದ ಕನ್ನಡ ರಾಜ್ಯೋತ್ಸವ ದತ್ತಿ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಇದು ಪರಮ ಪವಿತ್ರವಾದ ಸ್ಥಳ. ಇಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂದು ಅತ್ಯುತ್ತಮ ಶಿಕ್ಷಕರು ಹಾಗೂ ಪ್ರಾಚಾರ್ಯರುಗಳಿದ್ದಾರೆ. ಸಲಹಾ ಸಮಿತಿ ಕೂಡ ರಚನೆಯಾಗಿದೆ. ಕೃಷಿಕರಿಗೆ ಯಾರು ಹೆಣ್ಣು ಕೊಡಲು ಮುಂದೆ ಬರುವುದಿಲ್ಲ. ಹಾಗಾಗಿ ಮಕ್ಕಳಿಗೆ ಆಸ್ತಿ ಮಾಡುವ ಬದಲು ಶಿಕ್ಷಣ ಕೊಡಿಸಿ ಮಕ್ಕಳ ಲಾಲನೆ ಪೋಷಣೆ ಮುಖ್ಯ. ಎಷ್ಟೆ ಕಷ್ಟ ಬಂದರೂ ಮಕ್ಕಳನ್ನು ಶಾಲೆಯಿಂದ ಬಿಡಿಸಬೇಡಿ. ಮಕ್ಕಳು ಮನೆಯಲ್ಲಿ ಇರುವ ಸಮಯದಲ್ಲಿ ತಾಯಂದಿರು ಧಾರವಾಹಿಗಳನ್ನು ನೋಡಿಕೊಂಡು ಕುಳಿತುಕೊಂಡರೆ ಮಕ್ಕಳ ಮನಸ್ಸು ಬೇರೆ ಕಡೆ ಸೆಳೆದಂತಾಗುತ್ತದೆ.
ಚಿಕ್ಕಂದಿನಿಂದಲೇ ಶ್ರದ್ದೆಯಿಂದ ಓದಿದರೆ ಮುಂದೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ಮಕ್ಕಳು ಕೇವಲ ಶಾಲೆಗೆ ಹೋಗಿ ಬಂದರೆ ಸಾಲದು. ತಂದೆ-ತಾಯಂದಿರು ಮಕ್ಕಳ ಕಡೆ ನಿಗಾಯಿಟ್ಟು ಶಾಲೆಯಲ್ಲಿ ಬೋಧಿಸಿದ ಪಾಠವನ್ನು ಸರಿಯಾಗಿ ಕಲಿತಿದ್ದಾರೋ ಇಲ್ಲವೋ ಎನ್ನುವುದನ್ನು ಪರಿಶೀಲಿಸಬೇಕು ಎಂದು ಹೇಳಿದರು.
ಹೊಳಲ್ಕೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶಿವಮೂರ್ತಿ, ತರಳಬಾಳು ನರ್ಸರಿ ಮತ್ತು ಹಿರಿಯ ಪ್ರಾಥಮಿಕ ಶಾಲೆ ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಎಂ.ದೇವರಾಜ್, ಪದವಿಪೂರ್ವ ಕಾಲೇಜು ಸಲಹಾ ಸಮಿತಿ ಅಧ್ಯಕ್ಷ ಎಂ.ಕೆ.ರುದ್ರಪ್ಪ, ಮರಳುಸಿದ್ದಯ್ಯ, ಕು.ಡಾ.ಇಂಚರ ಪಾಂಡೋಮಟ್ಟಿ, ಜೆ.ಪಿ.ಸಂತೋಷ, ಜೆ.ಎ.ದೇವರಾಜಯ್ಯ, ಎಂ.ಬಿ.ಸಿದ್ದೇಶ್, ಡಿ.ಮೋಹನ್, ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು, ಸದಸ್ಯರುಗಳು, ತರಳಬಾಳು ಸರ್ಸರಿ ಮತ್ತು ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು, ಬೋಧಕ, ಬೋಧಕೇತರ ವರ್ಗದವರು ವಿದ್ಯಾರ್ಥಿಗಳು ಕನ್ನಡ ರಾಜ್ಯೋತ್ಸವದಲ್ಲಿ ಪಾಲ್ಗೊಂಡಿದ್ದರು.