ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ,(ಜು.08) : ವಿಧಾನಸಭೆ ಚುನಾವಣೆ ಮುಗಿದು 56 ದಿನಗಳಾದರೂ ವಿರೋಧಪಕ್ಷದ ಒಬ್ಬ ನಾಯಕನನ್ನು ಆಯ್ಕೆ ಮಾಡಲು ಬಿಜೆಪಿಗೆ ಆಗುತ್ತಿಲ್ಲ ಎಂದು ಕೆ.ಪಿ.ಸಿ.ಸಿ. ಮಾಧ್ಯಮ ವಕ್ತಾರ ಎ.ಎನ್.ನಟರಾಜ್ ಗೌಡ ವ್ಯಂಗ್ಯವಾಡಿದರು.
ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಶನಿವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿಯಲ್ಲಿ 66 ಶಾಸಕರು ಇದ್ದರೂ ಒಬ್ಬ ನಾಯಕನನ್ನು ಆಯ್ಕೆ ಮಾಡಲು ಆಗುತ್ತಿಲ್ಲ. ಪ್ರಜಾಭಭುತ್ವ ವ್ಯವಸ್ಥೆಯಲ್ಲಿ ಬಿಜೆಪಿ ನಂಬಿಕೆ ಕಳೆದುಕೊಂಡಿರುವುದೇ ಇದಕ್ಕೆ ಕಾರಣ ಎಂದು ಟೀಕಿಸಿದರು.
ರಾಜ್ಯದ ನೂತನ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸರ್ವರಿಗೂ ಸಮಪಾಲು ಸಮಬಾಳು ಎನ್ನುವ ತತ್ವದಡಿ ಸರ್ವಾಂಗೀಣ ಅಭಿವೃದ್ಧಿ ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್ ಮಂಡಿಸಿದ್ದಾರೆ. ಆದರೆ ವಿರೋಧ ಪಕ್ಷದ ನಾಯಕನ ಕುರ್ಚಿ ಇನ್ನೂ ಖಾಲಿ ಇರುವುದು ಹಾಸ್ಯಸ್ಪದ.
ಪ್ರಧಾನಿ ಮೋದಿ, ಅಮಿತ್ ಷಾ, ಜೆ.ಟಿ. ನಡ್ಡಾ ಇವರುಗಳು ಸೇರಿಕೊಂಡು ಅಂತರಿಕ ಪ್ರಜಾಪ್ರಭುತ್ವ ಇಲ್ಲದಂತೆ ಮಾಡಿದ್ದಾರೆ. ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಕಪ್ಪ ಕೊಡಬೇಕೆನೋ ಇಲ್ಲಾ ನಾಯಕನಾಗುವ ಯೋಗ್ಯತೆ ಬಿಜೆಪಿಯಲ್ಲಿ ಯಾರಿಗೂ ಇಲ್ಲವೇನೋ ಎನ್ನುವ ಅನುಮಾನ ಕಾಡುತ್ತಿದೆ ಎಂದರು.
ಪ್ರಜಾಪ್ರಭುತ್ವ ಸಂವಿಧಾನವೇ ಧರ್ಮಗ್ರಂಥವೆಂದು ತಿಳಿದುಕೊಂಡಿರುವ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕಾಯಕವೇ ದೇವರು ಎಂದು ನಂಬಿ ರಾಜ್ಯದ ಜನರ ಹಿತ ಕಾಪಾಡುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಹಿತ ಕಾಪಾಡುವ ಬದಲು ಬಿಜೆಪಿ, ಜೆಡಿಎಸ್ ನವರು ಸೇರಿಕೊಂಡು ಕೇಂದ್ರದ ಪರ ವಕಾಲತ್ ವಹಿಸಿ ರಾಜ್ಯದ ಜನತೆಗೆ ಮೋಸ ವಂಚನೆ ಅನ್ಯಾಯ ಮಾಡುತ್ತಿದ್ದಾರೆ. ರಾಜ್ಯದಲ್ಲಿರುವ 26 ಸಂಸದರು ಪಾರ್ಲಿಮೆಂಟ್‍ನಲ್ಲಿ ಯಾವುದೇ ಧ್ವನಿ ಎತ್ತುತ್ತಿಲ್ಲ. ಅವರಿಗೆ ಧೈರ್ಯವೂ ಇಲ್ಲದಂತಾಗಿದೆ. ಕೋವಿಡ್ ಸಂದರ್ಭದಲ್ಲಿಯೂ ಮೌನವಾಗಿದ್ದರು ಎಂದು ಲೇವಡಿ ಮಾಡಿದರು.
ಬಿಜೆಪಿಯ 66 ಶಾಸಕರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮನೆಗೆ ಹೋಗಿರುವುದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದ ಎ.ಎನ್.ನಟರಾಜ್ ಗೌಡ ದ್ವೇಷದ ರಾಜಕಾರಣ ಮಾಡುತ್ತಿರುವ ಕೇಂದ್ರ ಸರ್ಕಾರ 5 ಕೆ.ಜಿ. ಅಕ್ಕಿ ಕೊಡಲು ತಾರತಮ್ಯ ಮಾಡುತ್ತಿದೆ. ಅನ್ನಭಾಗ್ಯ ಯೋಜನೆಯಡಿ 4.42 ಕೋಟಿ ಜನತೆಗೆ ಅನ್ನಭಾಗ್ಯ ಯೋಜನೆ ಕೊಟ್ಟಿರುವ ರಾಜ್ಯ ಸರ್ಕಾರಕ್ಕೆ ಕೇಂದ್ರ ಸ್ಪಂದಿಸುತ್ತಿಲ್ಲ. ರಾಜ್ಯದ ಬೇಡಿಕೆಗೆ ಸ್ಪಂದಿಸುವುದು ಕೇಂದ್ರದ ಜವಾಬ್ದಾರಿ ಎನ್ನುವುದನ್ನು ಮರೆತು ಪಲಾಯನ ಮಾಡುತ್ತಿದೆ. ಇದರಿಂದ ರಾಜ್ಯ ಕೇಂದ್ರದ ಜೊತೆ ಸಂಘರ್ಷ ಮಾಡಬೇಕು ಇಲ್ಲ ಸಮನ್ವಯ ಮಾಡಿಕೊಳ್ಳಬೇಕು ಎನ್ನುವುದು ಯಕ್ಷ ಪ್ರಶ್ನೆಯಾಗಿದೆ ಎಂದು ಹೇಳಿದರು.
ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆಯಾಗಬಾರದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಬಜೆಟ್‍ನಲ್ಲಿ ಐದು ಉಚಿತ ಯೋಜನೆಗಳನ್ನು ಘೋಷಿಸಿದ್ದಾರೆ. ಮಧ್ಯ ಕರ್ನಾಟಕದ ಬಯಲುಸೀಮೆ ಚಿತ್ರದುರ್ಗಕ್ಕೆ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ತರಲು ಮೂರು ಸಾವಿರ ಕೋಟಿ ರೂಗಳನ್ನು ಮಂಜೂರು ಮಾಡಿದೆ. ಬಿಜೆಪಿಗೆ ಜನಕಲ್ಯಾಣ ಎಂಬುದೆ ಗೊತ್ತಿಲ್ಲ. ಬಜೆಟ್‍ನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದವರು, ಅಲ್ಪಸಂಖ್ಯಾತರು ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುವ ಮೂಲಕ ಕ್ರಾಂತಿಕಾರಿಕ ಬಜೆಟ್ ಮಂಡಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಫೀರ್, ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂತಪ್‍ಕುಮಾರ್, ಬಿ.ಟಿ.ಜಗದೀಶ್, ಕೆ.ಪಿ.ಸಿ.ಸಿ. ಮಾಧ್ಯಮ ವಕ್ತಾರ ಜಿ.ಬಿ.ಬಾಲಕೃಷ್ಣಸ್ವಾಮಿ ಯಾದವ್, ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್.ಡಿ.ಕುಮಾರ್, ಪದವೀಧರ ವಿಭಾಗದ ಅಧ್ಯಕ್ಷ ಮುದಸೀರ್ ನವಾಜ್, ಸಾಮಾಜಿಕ ಜಾಲತಾಣದ ಅಧ್ಯಕ್ಷ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.