ಪುಸ್ತಕಗಳನ್ನು ಓದುವ ಸಂಸ್ಕೃತಿ ಕಣ್ಮರೆಯಾಗುತ್ತಿರುವುದು ವಿಷಾದನೀಯ : ಟೀಕಾ ಸುರೇಶಗುಪ್ತ

1 Min Read

 

ಚಿತ್ರದುರ್ಗ : ನವೆಂಬರ್‌ ಮಾಸ ಬಂದರೆ ಸಾಕು ಎಲ್ಲೆಡೆ ಕನ್ನಡದ ಕಾರ್ಯಕ್ರಮಗಳ ಸುಗ್ಗಿ. ಪ್ರತಿವರ್ಷ ಕನ್ನಡಿಗರೆಲ್ಲ ವ್ರತಾಚರಣೆ ಎಂಬಂತೆ ಸಂಭ್ರಮದಿಂದ ಹಳೆಯ ತಲೆಮಾರಿನ ಕವಿಗಳು, ಕಾವ್ಯಗಳು, ಹಾಡುಗಳನ್ನು ನಮ್ಮ ಸಂಸ್ಕೃತಿಯ ಸಂಕೇತವೆಂದು ಭಾವಿಸಿ, ನೆನಪುಗಳನ್ನು ಹಂಚಿಕೊಳ್ಳಲು ತವಕಿಸುತ್ತೇವೆ. ಜೊತೆಗೆ ನಮ್ಮೊಂದಿಗೆ

ಬಾಳುತ್ತಿರುವ ಸಾಧಕರನ್ನು ಜಿಲ್ಲಾ ಹಾಗು  ರಾಜ್ಯ ಮಟ್ಟದಲ್ಲಿ ಸತ್ಕರಿಸುವ ಪರಿಪಾಠ ನಾಡಿನೆಲ್ಲೆಡೆ ಹಬ್ಬಿದೆ. ನಾಡು-ನುಡಿಯ ಗೌರವವು ಅಳಿಯದೆ ಉಳಿದು ಬೆಳೆಯಲು ಪ್ರಜೆಗಳೆಲ್ಲರ ಸ್ವಾಭಿಮಾನದ ಪಾಲ್ಗೊಳ್ಳುವ ಅನಿವಾರ್ಯತೆ ಇದೆ. ಇದನ್ನು ಮನಗಂಡು ಕೋಟ್ಯಂತರ ಸಹೃದಯರು ಈ ವ್ರತದಲ್ಲಿ ತಮ್ಮದೇ ಆದ ರೀತಿಯಲ್ಲಿ ಭಾಗವಹಿಸಿ ಸಂಭ್ರಮಿಸುತ್ತಾರೆ.

ಇತ್ತೀಚಿನ ದಿನಗಳಲ್ಲಿ ಪುಸ್ತಕಗಳನ್ನು ಓದುವ ಸಂಸ್ಕೃತಿಯು ನಿಧಾನವಾಗಿ ಕಣ್ಮರೆಯಾಗುತ್ತಿದೆ. ಇದು ವಿಷಾದನೀಯ. ಓದುವ ಹವ್ಯಾಸ ಕಡಿಮೆಯಾದರೆ ಪುಸ್ತಕಗಳನ್ನು ವಿಶೇಷವಾಗಿ ಕನ್ನಡದ ಪುಸ್ತಕಗಳನ್ನು ಕೊಳ್ಳುವ, ಓದುವ ಪದ್ದತಿ ಮಾಯವಾಗಿ ಬಿಟ್ಟರೆ ಪರಿಸ್ಥಿತಿ ಅಂಧಕಾರಮಯವಾಗುವ ಅಪಾಯದ ಗಂಟೆ ಬಾರಿಸೀತು ಎನ್ನುವ ಆತಂಕ ಸಹಜ. ಇದಕ್ಕಾಗಿ ಈ ಮಾಸದಲ್ಲಾದರೂ ಕೆಲವು ಕನ್ನಡ ಪುಸ್ತಕಗಳಿಗಾಗಿ ನಿಮ್ಮ ಕಿಂಚಿತ್ ಹಣ ವಿನಿಯೋಗ ಮಾಡಿ. ನೀವೂ ಓದಿರಿ. ಉಡುಗೊರೆಯಾಗಿ ಪುಸ್ತಕಗಳನ್ನು ನೀಡಿರಿ. ಈ ಸಂಪ್ರದಾಯ ರೂಢಿಸಿಕೊಂಡರೆ ಕನ್ನಡ ಉಳಿದೀತು. ಜೊತೆಗೆ ಪ್ರತಿದಿನ ಒಂದು ಗಂಟೆಯಾದರೂ ಕನ್ನಡವನ್ನು ಓದಿರಿ ಬರೆಯಿರಿ.

ಇದರಿಂದ ಕನ್ನಡ ನಾಡು ನುಡಿಗೆ ಉತ್ತಮ ಭವಿಷ್ಯ ಲಭಿಸೀತು.  ಏನಂತೀರಿ ಮಿತ್ರರೇ?

ಟೀಕಾ. ಸುರೇಶಗುಪ್ತ
ಚಿತ್ರದುರ್ಗ,
ಮೊ : 99454 61834

Share This Article
Leave a Comment

Leave a Reply

Your email address will not be published. Required fields are marked *