ವಿಶೇಷ ವರದಿ : ಕೋಡಿಹಳ್ಳಿ ಸಂತೋಷ್,
ಪ್ರಧಾನ ಕಾಯ೯ದಶಿ೯, ಆದಿಜಾಂಬವ ಮಾದಿಗ ಮಹಾಸಂಸ್ಥಾನ ಟ್ರಸ್ಟ್ (ರಿ) ಹಿರಿಯೂರು.
ಮೊ: 9980209878
ಚಿತ್ರದುರ್ಗ : ಈ ನಾಡಿನಲ್ಲಿ ಅಸ್ಪಶ್ಯತೆ ನೋವನ್ನುಂಡಿರುವ, ಈಗಲೂ ಉಣ್ಣುತ್ತಿರುವ ಮಾದಿಗರು ರಾಜ್ಯದಲ್ಲಿ ಬಹುಸಂಖ್ಯಾತ ಸಮುದಾಯ.
ಇಂತಹ ಒಂದು ಬಹುದೊಡ್ಡ ಸಂಖ್ಯೆಯ ಮಾದಿಗ ಸಮುದಾಯವು ಅಸ್ಪಶ್ಯತೆಗೆ ಒಳಗಾಗಿ ಅನುಭವಿಸುತ್ತಿರುವ ನೋವಿಗೆ ಮುಲಾಮು ಹಚ್ಚುವ ರೀತಿ ಮಾದಿಗರನ್ನು ಅತ್ಯಂತ ಗೌರವದಿಂದ ಕಾಣುವ ಏಕೈಕ ಮಾದಿಗ ಉಪ-ಜಾತಿಯೇ ದಕ್ಕಲಿಗರು.
ಮಾದಿಗರು ವಾಸವಿರುವ ಪ್ರದೇಶಕ್ಕೆ ಬರುವ ದಕ್ಕಲಿಗರು,ಹಟ್ಟಿ ಹೊರಗಡೆ ಟೆಂಟ್ ಹಾಕಿಕೊಂಡು ಮೂರು ದಿವಸ ವಾಸ ಮಾಡುತ್ತಾರೆ.
ಹಟ್ಟಿಯ ಎಲ್ಲ ಹಿರಿಯರ ಹೆಸರನ್ನು ಗೌರವದಿಂದ ಕೂಗಿ ನಾವು ಬಂದಿದ್ದೇವೆಂದು ಹೇಳುತ್ತಾರೆ. ಪೂರ್ವಿಕರ ಇತಿಹಾಸವನ್ನು ಕ್ಷಣಾರ್ಧದಲ್ಲಿಯೇ ಹೇಳಿ ಅಚ್ಚರಿ ಮೂಡಿಸಿ, ಮಾದಿಗರ ಪ್ರೀತಿ ಗಳಿಸುತ್ತಾರೆ.
ಅಂಜಿನಪ್ಪ ಗೌಡ್ರೇ…..
ನಾರಾಯಣಸ್ವಾಮೇರೇ,
ಹನುಮಂತಪ್ಪ ಅಪ್ಪಾರೇ….
ನಿಮ್ಮ ಮಕ್ಕಳಾದ ದಕ್ಕಲರು ನಿಮ್ಮೂರಿಗೆ ಬಂದೀವಿ,
ಮೂರು ದಿನ ನಿಮ್ಮೂರಾಗೆ ಇರ್ತೀವಿ.
ನಮ್ಮಪ್ಪುಗಳು ಇರೋ ಊರಿಗೆ ಬಂದ್ರೆ ನಾವು ಒಲೆಗುಂಡು ಹೂಡಲ್ಲ, ಒಲೆಹಚ್ಚಲ್ಲ.
ಹೊತ್ತು ಹೊತ್ತಿಗೆ ಉಣ್ಣಾಕ ಹಾಕಬೇಕು…. ಕಣ್ರಪ್ರೋ!!
ಎಂದು ಹೇಳುವ ಮೂಲಕ ಮಾದಿಗ
ಸಮುದಾಯವನ್ನು ಗೌರವಿಸುತ್ತಲೇ ನಮಗೆ ನಿಮ್ಮನ್ನು ಊಟೋಪಚಾರದ ಆತಿಥ್ಯ ಕೇಳುವ ಹಕ್ಕು ಇದೆ ಎಂಬ ಸಂದೇಶ ರವಾನಿಸುತ್ತಾರೆ. ಇತ್ತ ಮಾದಿಗರು ತಮ್ಮ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ತಮ್ಮನ್ನು ಗೌರವಿಸುವ ದಕ್ಕಲಿಗ ಸಮುದಾಯವನ್ನು ಮೂರು ದಿನ ಸಂತೃಪ್ತಗೊಳಿಸಿ, ಬಳಿಕ ಮುಂದಿನ ಊರಿಗೆ ಗೌರವದಿಂದ
ಬೀಳ್ಕೊಡುವ ಪದ್ಧತಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ.
ಇಂತಹ ದಕ್ಕಲಿಗ ಸಮಾಜದ ಸಮಾವೇಶವನ್ನು ಇತ್ತೀಚೆಗೆ ಚಿತ್ರದುರ್ಗದ ಶಿವಶರಣ ಮಾದಾರ ಚನ್ನಯ್ಯ ಮಠದಲ್ಲಿ ಆಯೋಜಿಸಿ ದೊಡ್ಡ ಮಟ್ಟದ ಪ್ರಚಾರ ಗಿಟ್ಟಿಸಿಕೊಂಡ ಹಾಸ್ಯಸ್ಪದವಲ್ಲದೇ, ಈ ಕಾಯ೯ಕ್ರಮದ ಕಾಯ೯ಸೂಚಿಯೇ ಸಂಶಯ ಹುಟ್ಟುಹಾಕುವಂತದ್ದು.
ಈ ಸಮಾವೇಶದ ನೇತೃತ್ವ ವಹಿಸಿದ್ದ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ ಎ.ನಾರಾಯಣಸ್ವಾಮಿ ಅವರ ಸಾಮಾಜಿಕ ಬದ್ಧತೆ,ಕಳಕಳಿ ಪ್ರಶ್ನಾತೀತ.
ಆದರೆ, ಆ ಕಾರ್ಯಕ್ರಮವನ್ನು ಒಂದು ರಾಜಕೀಯ ಪಕ್ಷದ ಕಾರ್ಯಕ್ರಮದಂತೆ ರೂಪಿಸಿದ್ದು, ಕೆಲ ವ್ಯಕ್ತಿಗಳಿಗೆ ಪ್ರಚಾರಕ್ಕಾಗಿ ಬಳಸಿಕೊಳ್ಳಲು ಅವಕಾಶ ಕಲ್ಪಿಸಿದ್ದು ಮಾತ್ರ ಬೇಸರ, ಆಘಾತ ತರಿಸುವ ಸಂಗತಿಯಾಗಿದೆ.
ಎಲ್ಲ ಪಕ್ಷದ ಪ್ರಮುಖ ದಲಿತ ನಾಯಕರ ಸಮ್ಮುಖದಲ್ಲಿ ಕಾರ್ಯಕ್ರಮ ಆಯೋಜಿಸಿದ್ದರೆ ದಕ್ಕಲಿಗರಿಗೆ ನ್ಯಾಯ ಕೊಡಿಸುವ ಚಿಂತನೆಯು ಗೆಲುವು ಪಡೆದುಕೊಳ್ಳುತ್ತಿತ್ತು.
ಆದರೆ, ಹಾಗೇ ಆಗಲಿಲ್ಲವೆಂಬ ನೋವು ನೊಂದ ಜನರಲ್ಲಿದೆ. ಅದರಲ್ಲೂ ಮೊದಲ ಬಾರಿಗೆ (2018 ರಲ್ಲಿ ) ದಕ್ಕಲಿಗ ಸಮುದಾಯವನ್ನು ಗುರುತಿಸಿ,
ಅವರನ್ನು ರಾಜ್ಯದ ಮೂಲೆ ಮೂಲೆಗಳಿಂದ ಬೆಂಗಳೂರಿಗೆ ಸರ್ಕಾರಿ ವೆಚ್ಚದಲ್ಲಿ ಕರೆಯಿಸಿ, ಔತಣಕೂಟ ಕೊಟ್ಟು,ಇತಿಹಾಸದಲ್ಲಿಯೇ ಪ್ರಥಮಬಾರಿಗೆ ಲಕ್ಷಾಂತರ ರೂ. ವೆಚ್ಚದ ಸೌಲಭ್ಯಗಳನ್ನ ನೇರ ಸಾಲದಡಿ ಕಲ್ಪಿಸಿಕೊಟ್ಟ ಅಂದಿನ ಸಮಾಜ ಕಲ್ಯಾಣ ಸಚಿವರಾದ ಎಚ್.ಆಂಜನೇಯರನ್ನ ಸೇರಿದಂತೆ ಇನ್ನಿತರ ದಲಿತ ನಾಯಕರನ್ನ ಮಾದಾರ ಚೆನ್ನಯ್ಯ ಮಠದಲ್ಲಿ ನಡೆದ ಕಾಯ೯ಕ್ರಮಕ್ಕೆ ಆಹ್ವಾನಿಸದೇ ಇದ್ದದ್ದು ದೊಡ್ಡ ಲೋಪ.
ಮಾಜಿ ಸಚಿವ ಎಚ್.ಆಂಜನೇಯರು ಮೌನ ಮುರಿಯಬೇಕು : ಸಮಾಜ ಕಲ್ಯಾಣ ಸಚಿವರಾಗಿದ್ದ ವೇಳೆ ಎಚ್.ಆಂಜನೇಯ ಅವರು, ವಿಧಾನಸೌಧದ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಿ, ಅಂದಾಜು 300ಕ್ಕೂ ಹೆಚ್ಚು ದಕ್ಕಲಿಗರಿಗೆ ಗೂಡ್ಸ್ ಮತ್ತು ಪ್ರಯಾಣಿಕ ವಾಹನಗಳು, ಕಾರು, ಆಟೋ ಸೇರಿ ಅನೇಕ ಸೌಲಭ್ಯಗಳನ್ನು ಹಾಗೂ ವೈಯಕ್ತಕಿ ಸಾಲ, ಸಹಾಯಧನವನ್ನು
(ಬ್ಯಾಂಕ್ ಭದ್ರತೆ ರಹಿತ) ನೇರ ಸಾಲದಡಿ ಪ್ರಥಮ ಬಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ವಿತರಿಸಿದ್ದು ಇತಿಹಾಸ.
ಅಂದು ಸಿಎಂ ಸಿದ್ದರಾಮಯ್ಯ, ದಕ್ಕಲಿಗರನ್ನು ಆತ್ಮೀಯವಾಗಿ ಅಪ್ಪಿಕೊಂಡು ಮಾತನಾಡಿದ್ದರು. “” ದಕ್ಕಲಿಗರನ್ನು ಮುಟ್ಟಿದ ಪ್ರಥಮ ಸಿಎಂ”” ಎಂಬ ಸುದ್ದಿ ರಾಜ್ಯದಲ್ಲಿ ಅಂದು ಸಂಚಲನ ಉಂಟುಮಾಡಿತ್ತು.
ಇದಕ್ಕೆ ಕಾರಣಕರ್ತರಾಗಿದ್ದು ಆಗಿನ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರು.
ಇಷ್ಟೇ ಅಲ್ಲದೆ ಅಂಬೇಡ್ಕರ್ ಅಭಿವೃದ್ಧಿ ನಿಗಮದಡಿ ಭೂಮಿ ಖರೀದಿಸಿ ದಕ್ಕಲಿಗರಿಗೆ ಭೂಮಿ ಮಾಲೀಕತ್ವ ಕೊಡುವ ಪ್ರಯತ್ನವು ವೇಗವಾಗಿ ನಡೆದಿತ್ತು.
ಅಷ್ಟರಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿ ಮುಗಿದು, ಚುನಾವಣೆ ಘೋಷಣೆ ಆಗಿ
ಭೂಮಿ ಮಾಲೀಕತ್ವ ಕೊಡುವ ಸಿದ್ಧರಾಮಯ್ಯ, ಆಂಜನೇಯರ ಕನಸು ಹಾಗೆಯೇ ಕಡತಗಳಲ್ಲಿ ಉಳಿಬಿಟ್ಟಿದೆ….
ತಾವು ಹಿಡಿದ ಕೆಲಸ ಪೂರ್ಣಗೊಳಿಸುವ ಹಠವಾದಿ ಎಚ್.ಆಂಜನೇಯ, ಈಚೆಗೆ ಯಾಕೋ ಹೆಚ್ಚು ಮೌನವಹಿಸಿದ್ದಾರೆ.
ಅದರಲ್ಲೂ ದಕ್ಕಲಿಗ ಸಮುದಾಯವನ್ನು ಪ್ರಚಾರಕ್ಕೆ ಬಳಸಿಕೊಳ್ಳುವ ಪ್ರಯತ್ನದ ವಿರುದ್ಧವಾದರೂ ಆಂಜನೇಯರು ಧ್ವನಿಯೆತ್ತಬೇಕಾಗಿತ್ತು.
ಕೊನೆಪಕ್ಷ ಅ ಸಮುದಾಯಕ್ಕೆ ತಮ್ಮ ಕಾಂಗ್ರೆಸ್ ಸರ್ಕಾರದ ಅಧಿಕಾರವಧಿಯಲ್ಲಿ ಏನು ಮಾಡಿದ್ದೇವೆ, ಭೂಮಿ ಹಕ್ಕು ಕೊಡುವ ಯೋಜನೆ ಎಲ್ಲಿಗೆ ನಿಂತಿದೆ ಎಂಬ ಮಾಹಿತಿ ಜತೆಗೆ ಅದನ್ನು ಮುಂದುವರಿಸಿ ಎಂದು ಈಲಾದರೂ ಒತ್ತಡ ತರಬೇಕಾಗಿದೆ.
ದಕ್ಕಲಿಗ ಸಮುದಾಯಕ್ಕೆ ನ್ಯಾಯ ಕೊಡಿಸಲು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಎಚ್.ಆಂಜನೇಯರು ಒಗ್ಗೂಡಿ ಹೊರಟರೇ ಕ್ಷಣಾರ್ಧದಲ್ಲಿಯೇ ಸಮಸ್ಯೆ ನಿವಾರಣೆ ಸಾಧ್ಯವಾಗಲಿದೆ ಎಂಬುದು ಜನ ಸಮುದಾಯದಲ್ಲಿ ಚಾಲ್ತಿಯಿರುವ ಮಾತು.
ಆದರೆ, ಈ ಇಬ್ಬರ ಒಗ್ಗೂಡಿದ ಕಾಯಾ೯ಚರಣೆಗೆ ಕೆಲವರ ಅಡ್ಡಿ ಇರುವುದು ಸತ್ಯ. ಅದನ್ನು ಭೇದಿಸಿ ಹೊರಡುವ ಶಕ್ತಿ ಈ ಇಬ್ಬರೂ ನಾಯಕರಲ್ಲಿ ಇದ್ದು, ಪಕ್ಷ-ಸಂಘಟನೆಗಳ ಮುಲಾಜಿನಿಂದ ಹೊರಬರುವ ಮನಸ್ಸು ಮಾಡಬೇಕು ಅಷ್ಟೇ….
ಇಲ್ಲದಿದ್ದರೆ ಮತಶಕ್ತಿ ಹೊಂದಿಲ್ಲದ ದಕ್ಕಲಿಗ ಸಮುದಾಯವನ್ನು ಮುಖ್ಯವಾಹಿನಿಗೆ ತರಬೇಕೆಂಬ ಕನಸು ನನಸಾಗುವುದಿಲ್ಲ.
ಇಲ್ಲದಿದ್ದರೇ ಈ ಸಣ್ಣ ಸಮುದಾಯವನ್ನೂ ಕೂಡ ಕೆಲವರು ಪ್ರಚಾರಕ್ಕೆ ದಾಳವಾಗಿ ಬಳಸಿಕೊಂಡು ವಿಕೃತಿ ಮೆರೆಯಲು ಅವಕಾಶ ಮಾಡಿಕೊಟ್ಟಂತಾಗುತ್ತದೆಯಷ್ಟೇ.