ಸರ್ಕಾರ ಗ್ಯಾರೆಂಟಿ ಯೋಜನೆಗಳ ಮಧ್ಯೆ ಕಲಾವಿದರನ್ನು ಮರೆತಿರುವುದು ವಿಪರ್ಯಾಸ : ಡಾ.ಬಿ.ರಾಜಶೇಖರಪ್ಪ

2 Min Read

 

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 09 : ಕಲಾವಿದರನ್ನು ಪೋಷಿಸುವಲ್ಲಿ ಸರ್ಕಾರ ಹಿನ್ನೆಲೆಯನ್ನು ಸಾಧಿಸಿಕೊಳ್ಳುತ್ತಿದೆ. ನಾಟಕ, ನೃತ್ಯ, ಸಂಗೀತ ಕ್ಷೇತ್ರದ ಸಂಪನ್ಮೂಲ ವ್ಯಕ್ತಿಗಳಿಗೆ ಮತ್ತು ಸಂಘ ಸಂಸ್ಥೆಗಳಿಗೆ ಧನಸಹಾಯದ ಬೆಂಬಲ ನೀಡಬೇಕಿದೆ ಎಂದು ಶಸಾಪ ರಾಜ್ಯ ಉಪಾಧ್ಯಕ್ಷ ಕೆ.ಎಂ.ವೀರೇಶ್ ಅಭಿಪ್ರಾಯಪಟ್ಟರು.

ರಂಗಸೌರಭ ಕಲಾ ಸಂಘ, ದೀವಿಗೆ ಎಜುಕೇಷನ್ ಟ್ರಸ್ಟ್, ಎಸ್.ಜೆ.ಎಂ.ವಿದ್ಯಾಪೀಠ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ನಗರದ ಶ್ರೀ ಮುರುಘಾಮಠದ ಆವರಣದಲ್ಲಿರುವ ಬಸವೇಶ್ವರ ಸಭಾಂಗಣದಲ್ಲಿ ಏರ್ಪಡಿಸಿದ್ದ ನೀನಾಸಂ ತಿರುಗಾಟದ ಎರಡನೇ ದಿನದ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

ಆಧುನಿಕ ಯುವಪೀಳಿಗೆಯಲ್ಲಿ ನಾಟಕದ ಅಭಿರುಚಿ ಕಡಿಮೆಯಾಗುತ್ತಿದೆ. ಕೆಟ್ಟ ಚಟುವಟಿಕೆಗಳಿಗೆ ಬಲಿಯಾಗಿ ತಮ್ಮ ಅಂತಃಸತ್ವವನ್ನು ಕಳೆದುಕೊಳ್ಳುತ್ತಿರುವುದು ಆತಂಕಕ್ಕೀಡು ಮಾಡಿದೆ. ಈ ನಿಟ್ಟಿನಲ್ಲಿ ಜಾಗೃತಿಯನ್ನುಂಟು ಮಾಡುವ ರಂಗಭೂಮಿ ಕಲಾವಿದರನ್ನು ಸರ್ಕಾರ ಮಾತ್ರವಲ್ಲದೆ ಕಲಾ ಪೋಷಕರೂ ಕೂಡ ಆಸಕ್ತಿ ತೋರಬೇಕು ಎಂದರು.

ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿ ಸರ್ಕಾರ ಗ್ಯಾರೆಂಟಿ ಯೋಜನೆಗಳ ಮಧ್ಯೆ ಕಲಾವಿದರನ್ನು ಮರೆತಿರುವುದು ವಿಪರ್ಯಾಸ. ಆರೋಗ್ಯವಂತ ಜನಜೀವನದ ಕಲುಷಿತ ವಾತಾವರಣವನ್ನು ತಿಳಿಗೊಳಿಸುವ ಪ್ರಯತ್ನ ಮಾಡಬೇಕು ಎಂದರು.

ಆರ್ಥಿಕತಜ್ಞ ಹಾಗೂ ನಾಟಕಕಾರ ಡಾ.ಜಿ.ಎನ್ ಮಲ್ಲಿಕಾರ್ಜುನಪ್ಪ ಮಾತನಾಡಿ ನಾಟಕ ಎಂಬುದು ತಕ್ಷಣಕ್ಕೆ ರೂಪುಗೊಳ್ಳುವುದಿಲ್ಲ. ರಂಗಸಜ್ಜಿಕೆ, ವೇಷಭೂಷಣ, ಪರಿಕರ, ಕಥಾವಸ್ತು, ಬೆಳಕಿನ ವಿನ್ಯಾಸ, ಸಂಗೀತ, ನೃತ್ಯ, ಪಾತ್ರವರ್ಗ, ಅಭಿನಯದ ಅಭಿವ್ಯಕ್ತಿ ಮುಂತಾದ ಕಸರತ್ತುಗಳ ಶ್ರಮದಿಂದ ಸಾರ್ಥಕತೆಯನ್ನು ಕಂಡುಕೊಳ್ಳಬೇಕು. ಎಲ್ಲಾ ಸಾಧ್ಯತೆಗಳ ಶ್ರಮದ ಬಗ್ಗೆ ಅರಿವಿರುವ ವ್ಯಕ್ತಿಗಳು ಮಾತ್ರ ಕಲೆಯ ಹಸಿವನ್ನು ನೀಗಿಸಬಲ್ಲರು. ಸಮಾಜಕ್ಕೆ ನಿಜ ಶ್ರೋತೃವರ್ಗದ ಅಗತ್ಯವಿದೆ ಎಂದರು.

ರಂಗನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ, ಹಿರಿಯ ಪ್ರಾಧ್ಯಾಪಕಿ ಡಾ.ತಾರಿಣಿ ಶುಭದಾಯಿನಿ, ಆಂಗ್ಲ ಉಪನ್ಯಾಸಕ ಎಂವಿ.ನಟರಾಜ್, ಯೋಗ ಚಿಕಿತ್ಸಕ ಎಂ.ಬಿ.ಮುರುಳಿ, ಶ್ಯಾಮಲ, ನಾಗರಾಜ್ ಎಂ.ವಿ, ಫಣಿರಾಜ, ನೀನಾಸಂ ತಿರುಗಾಟದ ಮ್ಯಾನೇಜರ್ ಗಣೇಶ್ ಭೀಮನಕೋಣೆ, ನಿವೃತ್ತ ಪ್ರಾಚಾರ್ಯ ಕೆ.ಜಂಬುನಾಥ್, ಸುನಿತಾಮುರುಳಿ, ನಿವೃತ್ತ ಪ್ರಾಧ್ಯಾಪಕ ರುದ್ರಪ್ಪ ಅಂಗಡಿ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ನಾಟಕಕಾರ ಜಿ.ಶಂಕರಪಿಳ್ಳೆ ರಚಿಸಿದ, ನಾ. ದಾಮೋದರಶೆಟ್ಟಿ ಕನ್ನಡಕ್ಕೆ ಅನುವಾದಿಸಿರುವ, ನೀನಾಸಂ ತಿರುಗಾಟದ ಅವತರಣಮ್ ಭ್ರಾಂತಾಲಯಮ್ ನಾಟಕವು ಶಂಕರ ವೆಂಕಟೇಶ್ವರನ್ ನಿರ್ದೇಶನದಲ್ಲಿ ಪ್ರದರ್ಶನಗೊಂಡಿತು.

ಅವತರಣಮ್ ಭ್ರಾಂತಾಲಯಮ್ : ಹುಚ್ಚಾಸ್ಪತ್ರೆಯ ರೋಗಿಗಳು ಸೇರಿ ಪ್ರಸ್ತುತಪಡಿಸುವ ಒಂದು ನಾಟಕ. ಆದರೆ ಈ ನಾಟಕವು ಹುಚ್ಚರನ್ನು ಕುರಿತದ್ದಲ್ಲ, ನಾಟಕವನ್ನು ಕುರಿತದ್ದು. ಇಲ್ಲಿ ನಟರು ನಿರ್ದೇಶಕನಿಗೇ ಅರಿವಳಿಕೆ ಕೊಟ್ಟು ಮಲಗಿಸುತ್ತಾರೆ. ರಂಗಭೂಮಿಯೇ ರಂಗಭೂಮಿಯ ನಿಯಂತ್ರಣದ ವಿರುದ್ಧ ಬಂಡೇಳುತ್ತದೆ. ಈ ಜಗತ್ತಿನ ಅತ್ಯಂತ ದೊಡ್ಡದಾದ ಶಬ್ದವನ್ನು ಕೇಳಬೇಕೆಂದು ಹಂಬಲಿಸುತ್ತಿರುವ ಒಬ್ಬ ರಾಜನ ಕಥೆಯನ್ನು ಹೇಳಲು ಹೊರಟ ಈ ನಾಟಕದೊಳಗೆ ಶಬ್ದಗಳು ತಮ್ಮ ಅರ್ಥವನ್ನು ಕಳೆದುಕೊಳ್ಳುತ್ತವೆ. ನಟರು ಪಾತ್ರಗಳನ್ನು ಮಿಕ್ಕು ಬೆಳೆಯುತ್ತಾರೆ. ಕಥೆ ದಿಕ್ಕು ತಪ್ಪಿ ಹರಿಯುತ್ತದೆ. ರಂಗಕ್ರಿಯೆಗಳು ತರ್ಕದ ಗೆರೆ ದಾಟುತ್ತವೆ. ಇದೆಲ್ಲದರ ಫಲವಾಗಿ ಹುಟ್ಟುವ ಹುಚ್ಚಾಟಗಳು ಕೇವಲ ಹುಚ್ಚುತನದ ಪ್ರದರ್ಶನಕ್ಕಾಗಿ ಹುಟ್ಟಿದ್ದಲ್ಲ; ಬದಲು, ರಂಗಭೂಮಿಯ ಅರ್ಥಕ್ಕಾಗಿ ದುಡಿಯಬೇಕೆಂಬ ಅಪೇಕ್ಷೆಯ ವಿರುದ್ಧ ಮತ್ತು ಸದಾ ಗಾಂಭೀರ್ಯವನ್ನು ಧಾರಣೆ ಮಾಡಬೇಕೆಂಬ ಐತಿಹಾಸಿಕ ಆಕಾಂಕ್ಷೆಗಳ ವಿರುದ್ಧ ನಡೆಯುವ ಪ್ರತಿರೋಧ. ಆದ್ದರಿಂದ ಅರ್ಥಹೀನತೆಯೆಂಬುದು ಇಲ್ಲಿ ಒಂದು ಇತ್ಯಾತ್ಮಕ ಮುದ್ರೆಯಾಗಬೇಕೆಂಬ ಹಂಬಲ ಈ ಪ್ರಯೋಗದ ಹಿಂದಿದೆ. ಆ ಮೂಲಕ ರಂಗಭೂಮಿಯು ಪ್ರಪಂಚದ ವಿವರಣೆಯಾಗಬೇಕೆಂಬ ಒತ್ತಡವನ್ನು ನಿರೋಧಿಸಿ ಆ ಮಾಧ್ಯಮವನ್ನು ಅದರ ಆದಿರೂಪಕ್ಕೆ ಒಯ್ಯಲು ಈ ಪ್ರಯೋಗ ಸಂಕಲ್ಪಿಸುತ್ತದೆ; ಮತ್ತು ತತ್ಫಲವಾಗಿ, ಜೀವಂತವಾಗಿಯೂ ಅನಿಶ್ಚಿತವಾಗಿಯೂ ಅಸಂಬದ್ಧವಾಗಿಯೂ ಇರುವ ಮಾನವ ಪ್ರಾಣಿಯನ್ನು ಕೇಂದ್ರದಲ್ಲಿಟ್ಟು ಕಾಣಿಸಲು ಹವಣಿಸುತ್ತದೆ.

Share This Article
Enable Notifications OK No thanks