ಕನ್ನಡಕ್ಕಾಗಿ ಹೋರಾಡಿದವರನ್ನು ನೆನೆಯುವುದು ಎಲ್ಲರ ಕರ್ತವ್ಯ : ತಾರಿಣಿ ಶುಭದಾಯಿನಿ

2 Min Read

 

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 21 : ಭಾಷೆ ಎಂದರೆ ಸಂಸ್ಕøತಿಯ ಪ್ರತೀಕ. ಭಾಷೆಯನ್ನು ಕಳೆದುಕೊಂಡರೆ ಸಂಸ್ಕøತಿಯನ್ನು ಕಳೆದುಕೊಂಡಂತೆ ಎಂದು ಸರ್ಕಾರಿ ಕಲಾ ಕಾಲೇಜು ಪ್ರಾಧ್ಯಾಪಕಿ ಕವಿಯತ್ರಿ ತಾರಿಣಿ ಶುಭದಾಯಿನಿ ಹೇಳಿದರು.

 

ಆರ್ಯವೈಶ್ಯ ಸಂಘ, ಆರ್ಯವೈಶ್ಯ ಸಾಹಿತ್ಯ ಪರಿಷತ್ತು, ವಾಸವಿ ಮಹಿಳಾ ಸಂಘದ ಸಂಯುಕ್ತಾಶ್ರಯದಲ್ಲಿ ಆರ್ಯವೈಶ್ಯ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಕನ್ಯಕಾ ಮಹಲ್‍ನಲ್ಲಿ ಬುಧವಾರ ನಡೆದ ಕನ್ನಡ ಹಬ್ಬದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

 

ಭಾಷೆಯೆಂದರೆ ಎಲ್ಲರೂ ಭಾವುಕರಾಗುತ್ತಾರೆ. ಪ್ರತಿಯೊಬ್ಬರಿಗೂ ಅವರವರ ಭಾಷೆ ಮೇಲೆ ಅಭಿಮಾನ, ಪ್ರೀತಿಯಿರುತ್ತದೆ. ಕನ್ನಡವೆಂದರೆ ನಾಡು, ನುಡಿ, ಸಂಸ್ಕøತಿಯನ್ನು ಪರಿಭಾವಿಸುವ ಭಾಷೆ. ಕನ್ನಡ ನಾಡು ಉದಯವಾಗಬೇಕಾದರೆ ಸಾಗಿದ ಹಾದಿ ತುಂಬಾ ಕಠಿಣವಾದುದು. ಹರಿದು ಹಂಚಿ ಹೋಗಿದ್ದ ಕನ್ನಡ ನಾಡನ್ನು ಒಂದುಗೂಡಿಸುವುದಕ್ಕಾಗಿ ಅನೇಕ ಹಿರಿಯರ ತ್ಯಾಗವಿದೆ. ಏಕೀಕರಣದ ಮೂಲಕ ಕನ್ನಡವನ್ನು ಬೆಸೆಯುವ ಕೆಲಸವಾಗಿರುವುದರಿಂದ ಕನ್ನಡಕ್ಕಾಗಿ ಹೋರಾಡಿದವರನ್ನು ನೆನೆಯುವುದು ಎಲ್ಲರ ಕರ್ತವ್ಯ ಎಂದು ತಿಳಿಸಿದರು.

 

ವಸಾಹತುಶಾಹಿ ಕಾಲ ಆರಂಭವಾದಾಗ ಇಂಗ್ಲಿಷ್ ಶಾಲೆಗಳು ಶುರುವಾಯಿತು. ಭಾಷೆ ಕಲಿಕೆ ಬಗ್ಗೆ ಇರುವ ಅಪ ನಂಬಿಕೆಯನ್ನು ತೊಡೆದು ಹಾಕಬೇಕು. ಇಂಗ್ಲಿಷ್, ಸಂಸ್ಕøತ, ಭಾಷೆಗಳು ಕನ್ನಡದ ವೈರಿಗಳಲ್ಲ. ಯಾವ ಭಾಷೆಯನ್ನಾಗಲಿ ಶ್ರದ್ದೆಯಿಂದ ಕಲಿಯಬೇಕು. ಕನ್ನಡಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಶರಣ, ದಾಸ ಪರಂಪರೆ ಕನ್ನಡಕ್ಕೆ ಎರಡು ಕಣ್ಣುಗಳಿದ್ದಂತೆ. ಕನ್ನಡ ಅನೇಕ ಸವಾಲುಗಳನ್ನು ಎದುರಿಸುತ್ತಿದೆ ಎಂದರು.

ಕನ್ನಡ ಹಬ್ಬ ಉದ್ಘಾಟಿಸಿ ಮಾತನಾಡಿದ ಆರ್ಯವೈಶ್ಯ ಸಂಘದ ಅಧ್ಯಕ್ಷ ಎಲ್.ಇ.ಶ್ರೀನಿವಾಸಬಾಬು ಕನ್ನಡ ನಾಡಿನಲ್ಲಿ ವಾಸಿಸುವ ಎಲ್ಲರೂ ಕಡ್ಡಾಯವಾಗಿ ಕನ್ನಡ ಕಲಿಯಬೇಕು. ನಾವುಗಳು ಕೇವಲ ನವೆಂಬರ್ ಕನ್ನಡಿಗರಾಗಬಾರದು. ಈ ದಿಸೆಯಲ್ಲಿ ಆರ್ಯವೈಶ್ಯ ಸಾಹಿತ್ಯ ಪರಿಷತ್ತು ಹಲವು ಅರ್ಥಪೂರ್ಣ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಸಾಗುತ್ತಿರುವುದಕ್ಕೆ ಆರ್ಯವೈಶ್ಯ ಸಂಘ ಮೊದಲಿನಿಂದಲೂ ಬೆಂಬಲಿಸಿಕೊಂಡು ಬರುತ್ತಿದೆ ಎಂದು ಶ್ಲಾಘಿಸಿದರು.

 

ವಿಶ್ರಾಂತ ಪ್ರಾಧ್ಯಾಪಕ, ಕವಿ ಪ್ರೊ.ಟಿ.ವಿ.ಸುರೇಶ್‍ಗುಪ್ತ ಆರ್ಯವೈಶ್ಯ ಸಾಹಿತ್ಯ ಪರಿಷತ್ತು ನಡೆದು ಬಂದ ದಾರಿ ಕುರಿತು ಮಾತನಾಡುತ್ತ 2007 ರಲ್ಲಿ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಆರ್ಯವೈಶ್ಯ ಸಾಹಿತ್ಯ ಪರಿಷತ್ತು ಹುಟ್ಟು ಹಾಕಲಾಯಿತು. ಸಣ್ಣಪುಟ್ಟ ಹೆಜ್ಜೆಗಳನ್ನಿಡುತ್ತು ಇಂದು ದೊಡ್ಡದಾಗಿ ಬೆಳೆದು ನಿಂತಿದೆ. ಅಂದಿನಿಂದ ಇಂದಿನವರೆಗೆ ಗೌರವಾಧ್ಯಕ್ಷನಾಗಿ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದೇನೆ. ಕನ್ನಡದ ಹಬ್ಬಕ್ಕೆ ಆರ್ಯವೈಶ್ಯ ಸಂಘ ಮೊದಲಿನಿಂದಲೂ ಪ್ರೋತ್ಸಾಹ ನೀಡುತ್ತಿದೆ. ಆರ್ಯವೈಶ್ಯ ಸಾಹಿತ್ಯ ಸಮ್ಮೇಳನವನ್ನು ವರ್ಣರಂಜಿತವಾಗಿ ಆಚರಿಸಿದ್ದೇವೆ. ವಿಶಿಷ್ಠವಾದ ಕಾರ್ಯಕ್ರಮಗಳು ಆರ್ಯವೈಶ್ಯ ಸಾಹಿತ್ಯ ಪರಿಷತ್ತಿನಿಂದ ನಡೆದಿದೆ. ಮಹಿಳೆಯರಲ್ಲಿಯೂ ಬರೆಯುವ ಪ್ರವೃತ್ತಿಯನ್ನು ಆರ್ಯವೈಶ್ಯ ಸಾಹಿತ್ಯ ಪರಿಷತ್ ಹುಟ್ಟುಹಾಕಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

 

ಆರ್ಯವೈಶ್ಯ ಸಾಹಿತ್ಯ ಪರಿಷತ್ ಅಧ್ಯಕ್ಷೆ ಸುಜಾತ ಪ್ರಾಣೇಶ್ ಅಧ್ಯಕ್ಷತೆ ವಹಿಸಿದ್ದರು. ವಾಸವಿ ಮಹಿಳಾ ಸಂಘದ ಅಧ್ಯಕ್ಷೆ ಟಿ.ಎಸ್. ಸರ್ವದ, ಕಾರ್ಯದರ್ಶಿ ಸುಧಾ ಮಂಜುನಾಥ್, ಆರ್ಯವೈಶ್ಯ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ನಾಗರಾಜ್, ಆರ್ಯವೈಶ್ಯ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಜೆ.ಆರ್.ಶಿವಕುಮಾರ್ ವೇದಿಕೆಯಲ್ಲಿದ್ದರು.

Share This Article
Leave a Comment

Leave a Reply

Your email address will not be published. Required fields are marked *