ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ.ಜನವರಿ.12 : ಕೇಂದ್ರ ಸರ್ಕಾರ ಕಳೆದ ಹತ್ತು ವರ್ಷಗಳಿಂದ ಕಾರ್ಮಿಕರ ಹೊಟ್ಟೆ ಮೇಲೆ ಹೊಡೆಯುವ ಕಾನೂನುಗಳನ್ನು ಜಾರಿಗೆ ತರುತ್ತಿದೆ ಎಂದು ನಿವೃತ್ತ ಪ್ರಾಚಾರ್ಯರಾದ ಜೆ.ಯಾದವರೆಡ್ಡಿ ಕಳವಳ ವ್ಯಕ್ತಪಡಿಸಿದರು.
ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಜಿಲ್ಲಾ ಸಮಿತಿಯಿಂದ ಒನಕೆ ಓಬವ್ವ ವೃತ್ತದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಸಹಿ ಸಂಗ್ರಹ ಉದ್ಘಾಟಿಸಿ ಮಾತನಾಡಿದರು.
ದೇಶದ ಪ್ರಧಾನಿ ನರೇಂದ್ರಮೋದಿರವರು ಕಾರ್ಮಿಕರ ಪರವಾಗಿದ್ದ 29 ಕಾನೂನುಗಳಲ್ಲಿ ಒಂದನ್ನು ಮಾತ್ರ ಉಳಿಸಿ ಎಲ್ಲಾ ಕಾನೂನುಗಳನ್ನು ರದ್ದುಪಡಿಸಿರುವುದು ದುರಂತ. ಕಾರ್ಮಿಕ ಮಕ್ಕಳಿಗೆ ನೀಡಲಾತ್ತಿರುವ ಶೈಕ್ಷಣಿಕ ಧನ ಸಹಾಯವನ್ನು ಸರ್ಕಾರ ವಿಸರ್ಜಿಸಿದೆ. ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ನಿರುದ್ಯೋಗ ಸಮಸ್ಯೆ ಜಾಸ್ತಿಯಾಗಿದೆ.
ವಿದ್ಯಾವಂತ ಯುವಕರು ಕೆಲಸಕ್ಕಾಗಿ ಬೀದಿ ಬೀದಿ ಅಲೆಯುತ್ತಿದ್ದಾರೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಅಗತ್ಯ ವಸ್ತುಗಳ ಬೆಲೆ ಜಾಸ್ತಿಯಾಗಿರುವುದರಿಂದ ಜನಸಾಮಾನ್ಯರು ತತ್ತರಿಸುವಂತಾಗಿದೆ ಎಂದು ಹೇಳಿದರು.
ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ರಾಜ್ಯ ಉಪಾಧ್ಯಕ್ಷ ಸಿ.ಕೆ.ಗೌಸ್‍ಪೀರ್ ಮಾತನಾಡಿ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ವಿರುದ್ದ ಸ್ವಾಮಿ ವಿವೇಕಾನಂದರ ಜಯಂತಿಯಂದು ಸಹಿ ಸಂಗ್ರಹ ಚಳುವಳಿ ಹಮ್ಮಿಕೊಂಡಿದ್ದು, ಜಿಲ್ಲೆಯಾದ್ಯಂತ ಎರಡರಿಂದ ಮೂರು ಲಕ್ಷ ಸಹಿ ಸಂಗ್ರಹಿಸಿ ಕೇಂದ್ರಕ್ಕೆ ಕಳಿಸುತ್ತೇವೆ. ಕಾರ್ಮಿಕ ಹಕ್ಕುಗಳನ್ನು ದಮನಗೊಳಿಸಿರುವ ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಸಿರುವುದನ್ನು ಖಂಡಿಸಿ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆಂದರು.
ನಿವೃತ್ತ ಪ್ರಾಚಾರ್ಯರಾದ ಡಾ.ಅಶೋಕ್‍ಕುಮಾರ್ ಸಂಗೇನಹಳ್ಳಿ, ಮಂಜುನಾಥ್, ಮಲ್ಲಿಕಾರ್ಜುನ್, ನಾಗರಾಜ್ ಇನ್ನು ಮುಂತಾದವರು ಈ ಸಂದರ್ಭದಲ್ಲಿದ್ದರು.