ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.06 : ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‍ರವರ 67 ನೇ ಪರಿನಿರ್ವಾಣ ದಿನ ಆಚರಿಸಲಾಯಿತು.
ಡಾ.ಬಿ.ಆರ್.ಅಂಬೇಡ್ಕರ್‍ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಬದುಕಿದ್ದಾಗ ಡಾ.ಬಿ.ಆರ್.ಅಂಬೇಡ್ಕರ್‍ರವರು ಸಮಾಜಕ್ಕೆ ಏನು ಕೊಡುಗೆ ಕೊಟ್ಟರು ಎನ್ನುವುದನ್ನು ನೆನಪು ಮಾಡಿಕೊಳ್ಳುವ ದಿನ ಇದು. ಡಾ.ಬಿ.ಆರ್.ಅಂಬೇಡ್ಕರ್ ಕೇವಲ ದಲಿತರಿಗಷ್ಟೆ ಮೀಸಲಾತಿಯನ್ನು ಕೊಟ್ಟಿದ್ದಾರೆನ್ನುವ ತಪ್ಪು ಕಲ್ಪನೆ ಇನ್ನು ಸಾಕಷ್ಟು ಜನರ ಮನದಲ್ಲಿದೆ.
ಬಾಲ್ಯದಲ್ಲಿಯೇ ಅನೇಕ ಕಷ್ಟ, ಅವಮಾನಗಳನ್ನು ಎದುರಿಸಿ ಶಿಕ್ಷಣ ಪಡೆದು ಅಮೇರಿಕ ಲಂಡನ್‍ನಲ್ಲಿ ಉನ್ನತ ವ್ಯಾಸಂಗ ಪಡೆದು ಭಾರತಕ್ಕೆ ಮರಳಿದ ಅವರು ಶೋಷಿತರು ಧ್ವನಿ ಇಲ್ಲದವರಿಗೆ ಶಕ್ತಿಯಾಗಿ ಸಂವಿಧಾನವನ್ನು ರಚಿಸಿ ಕೊಡುಗೆಯಾಗಿ ನೀಡಿದ್ದಾರೆಂದು ಬಣ್ಣಿಸಿದರು.
ಮಹಿಳೆಯರಿಗೂ ಮೀಸಲಾತಿ ಸಿಗಬೇಕನ್ನುವ ಉದ್ದೇಶದಿಂದ ಹಿಂದೂ ಕೋಡ್‍ಬಿಲ್ ತಂದರು, ಆರ್.ಬಿ.ಐ.ಯನ್ನು ದೇಶದಲ್ಲಿ ತರದೆ ಹೋಗಿದ್ದರೆ ಯಾರೂ ಕೋಟ್ಯಾಧಿಪತಿಗಳು ನಮ್ಮ ದೇಶದಲ್ಲಿ ಇರುತ್ತಿರಲಿಲ್ಲ. ಕಾರ್ಮಿಕರು ದಿನಕ್ಕೆ ಎಂಟು ಗಂಟೆಗಳ ಕಾಲ ಕೆಲಸ ಮಾಡಬೇಕೆಂಬ ಕಾನೂನು ಜಾರಿಗೆ ತಂದವರು ಅಂಬೇಡ್ಕರ್ ಎನ್ನುವುದನ್ನು ಮರೆಯುವಂತಿಲ್ಲ.
ಕೋಮುವಾದಿಗಳು ಸಂವಿಧಾನ ಬದಲಾವಣೆ ಮಾಡಲು ಹೊರಟಿದ್ದಾರೆ. ಅದಕ್ಕೆ ಅವಕಾಶ ಕೊಡಬಾರದು ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ ಮಾತನಾಡಿ 1956 ಡಿ.6 ರಂದು ಡಾ.ಬಿ.ಆರ್.ಅಂಬೇಡ್ಕರ್ ಪ್ರಾಣ ಬಿಟ್ಟ ದಿನವನ್ನು ಪರಿನಿರ್ವಾಣ ಎಂದು ಕರೆಯಲಾಗುತ್ತದೆ. 197 ದೇಶಗಳಲ್ಲಿಯೂ ಅಂಬೇಡ್ಕರ್‍ರವರನ್ನು ಸ್ಮರಣೆ ಮಾಡಲಾಗುತ್ತದೆ.
ಶಿಕ್ಷಣ, ಸಂಘಟನೆ, ಹೋರಾಟವನ್ನು ಅಸ್ಪೃಶ್ಯರಿಗೆ ನೀಡಿದ ಕೀರ್ತಿ ಅಂಬೇಡ್ಕರ್‍ಗೆ ಸಲ್ಲಬೇಕು ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಪಿ.ಸಂಪತ್‍ಕುಮಾರ್ ಮಾತನಾಡುತ್ತ ಸಂವಿಧಾನಶಿಲ್ಪಿ, ಮಹಾನ್ ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್‍ರವರನ್ನು ಇಡಿ ವಿಶ್ವವೇ ಸ್ಮರಿಸಿಕೊಳ್ಳುತ್ತಿದೆ. ಬಿ.ಜೆ.ಪಿ. ಸಂವಿಧಾನವನ್ನು ಬದಲಾವಣೆ ಮಾಡಲು ಹೊರಟಿದೆ. ಹಾಗಾಗಿ ಎಲ್ಲರೂ ಅಂಬೇಡ್ಕರ್‍ರವರ ಮಾರ್ಗದಲ್ಲಿ ಸಾಗಿ ಸಂವಿಧಾನವನ್ನು ರಕ್ಷಿಸಬೇಕಿದೆ ಎಂದು ವಿನಂತಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀಮತಿ ರೇಣುಕಶಿವು ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ಎಂದರೆ ಒಂದು ಶಕ್ತಿ. ಸಂವಿಧಾನದ ಅಡಿಯಲ್ಲಿ ಎಲ್ಲರೂ ಸಮಾನವಾಗಿ ಬದುಕಲು ಅವಕಾಶ ಕಲ್ಪಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಸಂವಿಧಾನವನ್ನು ರಚಿಸದೆ ಹೋಗಿದ್ದರೆ ಕಾನೂನೇ ಇರುತ್ತಿರಲಿಲ್ಲ ಎಂದು ಸಂವಿಧಾನದ ಉಪಯೋಗ ತಿಳಿಸಿದರು.
ದಲಿತ ಮುಖಂಡ ಬಿ.ರಾಜಣ್ಣ ಮಾತನಾಡುತ್ತ ವಿಶ್ವಾದ್ಯಂತ ಪರಿನಿರ್ವಾಣ ದಿನದ ಮೂಲಕ ಡಾ.ಬಿ.ಅಂಬೇಡ್ಕರ್‍ವರ ಸ್ಮರಣೆಯಾಗುತ್ತಿದೆ. ದೀನದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ ಸಂವಿಧಾನದ ಮೂಲಕ ಶಕ್ತಿ ನೀಡಿದ್ದಾರೆ. ಕೆಳಜಾತಿ ತಳಸಮುದಾಯದವರಿಗೆ ಈಗಲೂ ಧ್ವನಿಯಾಗಿದ್ದಾರೆಂದರು.
ನ್ಯಾಯವಾದಿ ಮಲ್ಲೇಶ್ ಮಾತನಾಡಿ ಅಂಬೇಡ್ಕರ್ ಸಂವಿಧಾನ ಕೊಟ್ಟಿದ್ದರಿಂದ ನಾನೂ ಕೂಡ ವಕೀಲನಾಗಲು ಸಾಧ್ಯವಾಯಿತು. ಪ್ರತಿಯೊಬ್ಬರು ಶಿಕ್ಷಣಕ್ಕೆ ಆದ್ಯತೆ ಕೊಡಬೇಕು. ಅಂಬೇಡ್ಕರ್ ಕೊಟ್ಟಿರುವ ಮೀಸಲಾತಿಯನ್ನು ಬಳಸಿಕೊಂಡು ಪ್ರತಿಯೊಂದು ಮಗುವಿಗೂ ಶಿಕ್ಷಣ ಕೊಡಿಸಬೇಕು. ಮಹಿಳಾ ಮೀಸಲಾತಿಗೆ ಮೊದಲು ಪ್ರಸ್ತಾಪಿಸಿದ್ದು, ಅಂಬೇಡ್ಕರ್ ಎನ್ನುವುದನ್ನುಮೀಸಲಾತಿಯನ್ನು
ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ವರ್ಗಗಳ ವಿಭಾಗದ ಅಧ್ಯಕ್ಷ ಹೆಚ್.ಅಂಜಿನಪ್ಪ ಮಾತನಾಡುತ್ತ ಸಂವಿಧಾನವೇ ಎಲ್ಲರಿಗೂ ಭಗವದ್ಗೀತೆಯಿದ್ದಂತೆ. ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನವನ್ನು ಹಬ್ಬವನ್ನಾಗಿ ಎಲ್ಲಿಯವರೆಗೂ ಮನೆ ಮನೆಗಳಲ್ಲಿ ಆಚರಿಸುವುದಿಲ್ಲವೋ ಅಲ್ಲಿಯತನಕ ಸಂವಿಧಾನಕ್ಕೆ ಅರ್ಥ ಬರುವುದಿಲ್ಲ.
ಬಿ.ಜೆ.ಪಿ.ಯವರು ಸಂವಿಧಾನವನ್ನು ಬದಲಾಯಿಸಲು ಹೊರಟಿದ್ದಾರೆ. ನಾಲ್ಕು ಗೋಡೆಗಳ ನಡುವೆ ಅಂಬೇಡ್ಕರ್ ಜಯಂತಿ ಹಾಗೂ ಪರಿನಿರ್ವಾಣ ದಿನವನ್ನು ಆಚರಿಸುವ ಬದಲು ಗ್ರಾಮೀಣ ಭಾಗಗಳಲ್ಲಿ ಆಚರಿಸಿದರೆ ದಲಿತರು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದವರು, ಅಲ್ಪಸಂಖ್ಯಾತರಿಗೆ ಸಂವಿಧಾನದ ಪ್ರಯೋಜನ ತಿಳಿಸಿದಂತಾಗುತ್ತದೆ ಎಂದು ಸಲಹೆ ನೀಡಿದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಗೀತ ನಂದಿನಿಗೌಡ, ಕಾಂಗ್ರೆಸ್ ಎಸ್ಸಿ. ವಿಭಾಗದ ಅಧ್ಯಕ್ಷ ಜಯಣ್ಣ ಮೊಗಲಹಳ್ಳಿ, ಕೋಟಿ, ಸೈಯದ್ ಖುದ್ದೂಸ್, ಚಾಂದ್‍ಪೀರ್, ಶಬ್ಬೀರ್‍ಭಾಷ, ಸೈಯದ್ ಸೈಫುಲ್ಲಾ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ನರಸಿಂಹರಾಜ ಇನ್ನು ಅನೇಕರು ಅಂಬೇಡ್ಕರ್ ಪರಿನಿರ್ವಾಣ ದಿನದಲ್ಲಿ ಪಾಲ್ಗೊಂಡಿದ್ದರು.