ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
* ವೀರ ವನಿತೆ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದಲ್ಲಿ “ಯೋಗಥಾನ್”
* ಗಿನ್ನೆಸ್ ವಿಶ್ವದಾಖಲೆಯ ಕಾರ್ಯಕ್ರಮ ಆಯೋಜನೆ
* 8 ಸಾವಿರ ಜನರಿಂದ ಏಕಕಾಲಕ್ಕೆ ಯೋಗಾಭ್ಯಾಸ ಪ್ರದರ್ಶನ
ಚಿತ್ರದುರ್ಗ (ಜ.15): ಐತಿಹಾಸಿಕ ಕಲ್ಲಿನಕೋಟೆ ಚಿತ್ರದುರ್ಗದಲ್ಲಿ ಸುಮಾರು 8 ಸಾವಿರಕ್ಕೂ ಅಧಿಕ ಜನರಿಂದ ಏಕಕಾಲಕ್ಕೆ “ಯೋಗಥಾನ್” ಯೋಗ ಪ್ರದರ್ಶನ ಅದ್ದೂರಿಯಾಗಿ ನೆರವೇರಿತು.
ಚಿತ್ರದುರ್ಗ ನಗರದ ವೀರ ವನಿತೆ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಆಯುಷ್ ಇಲಾಖೆ ಸೇರಿದಂತೆ ಜಿಲ್ಲಾ ಯೋಗ ಸಂಸ್ಥೆಗಳ ಸಹಯೋಗದಲ್ಲಿ “ಯೋಗಥಾನ್” ಗಿನ್ನೆಸ್ ವಿಶ್ವದಾಖಲೆಯ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಷ್ಟ್ರೀಯ ಯುವ ಸಪ್ತಾಹದ ಅಂಗವಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಯುವಕರು, ಯುವತಿಯರು ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಂಘ-ಸಂಸ್ಥೆ ಪದಾಧಿಕಾರಿಗಳು ಸೇರಿ ಗಿನ್ನೇಸ್ ವಿಶ್ವ ದಾಖಲೆ ಮಾಡುವ ನಿಟ್ಟಿನಲ್ಲಿ “ಯೋಗಥಾನ್” ಯೋಗ ಪ್ರದರ್ಶನ ಆಯೋಜನೆ ಮಾಡಲಾಗಿದ್ದು, 8 ಸಾವಿರ ಜನರು ಏಕಕಾಲಕ್ಕೆ ಯೋಗ ಪ್ರದರ್ಶನ ನೀಡಿರುವುದು ಹೆಮ್ಮೆಯ ವಿಷಯ ಎಂದು ಸಂತಸ ವ್ಯಕ್ತಪಡಿಸಿದರು.
“ಯೋಗ” ಎಂಬುವುದು ಕೇವಲ ಆಸನ ಮಾತ್ರವಲ್ಲದೇ ದೇಹ ಹಾಗೂ ಮನಸ್ಸು, ಆತ್ಮ ಈ ಮೂರನ್ನು ಒಟ್ಟಾಗಿ ಹಿಡಿದಿಡುತ್ತದೆ. ದೇಹ, ಮನಸ್ಸು ಹಾಗೂ ಆತ್ಮ ಒಟ್ಟಾಗಿದ್ದರೆ ಮಾತ್ರ ಮುಂದಿನ ದಿನಗಳಲ್ಲಿ ಶಾಂತಿ, ಸಹಬಾಳ್ವೆಯ ವಿಶ್ವ ನಿರ್ಮಾಣ ಮಾಡಲು ಸಾಧ್ಯವಾಗಲಿದೆ ಎಂದರು.
ದೇಹ, ಮನಸ್ಸು ಒಟ್ಟಾಗಿರದಿದ್ದರೆ ಹಲವಾರು ವ್ಯತ್ಯಾಸ ಕಾಣಬಹುದು. ಇದರಿಂದ ಮಾನಸಿಕ ಖಿನ್ನತೆ, ಮಾನಸಿಕ ಒತ್ತಡವೂ ಉಂಟಾಗುತ್ತದೆ. ಇವೆಲ್ಲನ್ನೂ ತಡೆಗಟ್ಟಲು, ಒಂದು ನಿರ್ಧಿಷ್ಟ ವಿಷಯದ ಬಗ್ಗೆ ಕೇಂದ್ರಿಕರಿಸಲು ನಮ್ಮ ದೇಹ, ಮನಸ್ಸು, ಆತ್ಮ ಒಂದಾಗಿರಬೇಕು. ಇದು ಯೋಗ, ಧ್ಯಾನದಿಂದ ಮಾತ್ರ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಮಾನಸಿಕ ಹಾಗೂ ಶಾರೀರಿಕ ಸಂಪತ್ತಿಗೆ ಯೋಗ ಸಹಕಾರಿ. ಸದಾ ಚಟುವಟಿಕೆಯಿಂದ ಇರಲು ಯೋಗ ನೆರವಾಗುತ್ತದೆ. ಇದರಿಂದ ಉತ್ತಮ ಸಮಾಜ ಕಟ್ಟಲು ಸಾಧ್ಯವಾಗುತ್ತದೆ. ಹಾಗಾಗಿ ಪ್ರತಿಯೊಬ್ಬರು ತಮ್ಮ ನಿತ್ಯದ ಜೀವನದಲ್ಲಿ ಯೋಗ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಪಂ ಸಿಇಒ ಎಂ.ಎಸ್. ದಿವಾಕರ್ ಮಾತನಾಡಿ, ದೇಹ ದಂಡಿಸಲು, ಆರೋಗ್ಯ ಕಾಪಾಡಲು ವಿವಿಧ ಚಟುವಟಿಕೆಗಳನ್ನು ಕೈಗೊಳ್ಳುತ್ತೇವೆ. ಪ್ರತಿಮನೆಯಲ್ಲಿಯೂ ನಿತ್ಯವೂ ಪ್ರತಿಯೊಬ್ಬರೂ ಯೋಗ ಮಾಡಬೇಕು ಎಂದು ತಿಳಿಸಿದರು.
ಯೋಗಥಾನ್ ಕಾರ್ಯಕ್ರಮದಲ್ಲಿ ಮೊದಲಿಗೆ ಓಂ :
ಪ್ರಾರ್ಥನೆಯೊಂದಿಗೆ ಆರಂಭವಾಗಿ, ಕತ್ತು, ಭುಜಗಳು, ಸೊಂಟ ಮತ್ತು ಮೊಣಕಾಲುಗಳ ಚಲನೆಯ ಸೂಕ್ಷ್ಮ ವ್ಯಾಯಾಮಗಳನ್ನು ಮಾಡಿಸಲಾಯಿತು. ನಂತರ ನಿಂತು ಮಾಡುವ ಆಸನಗಳಾದ ತಾಡಾಸನ, ವೃಕ್ಷಾಸನ, ಪಾದ ಹಸ್ತಾಸನ, ಅರ್ದ ಚಕ್ರಾಸನ, ತ್ರಿಕೋನಾಸನ ಪ್ರದರ್ಶಿಸಲಾಯಿತು. ಕುಳಿತು ಮಾಡುವ ಆಸನಗಳಾದ ಭದ್ರಾಸನ, ವಜ್ರಾಸನ, ಅರ್ದಉಷ್ಟ್ರಾಸನ, ಶಶಂಕಾಸನ, ಉತ್ಪಾನ ಮಂಡೂಕಾಸನ, ವಕ್ರಾಸನ ಪ್ರದರ್ಶಿಸಲಾಯಿತು. ಹೊಟ್ಟೆ ನೆಲಕ್ಕೆ ಹಾಕಿ ಮಾಡುವ ಆಸನಗಳಾದ ಮಕರಾಸನ, ಭುಜಂಗಾಸನ, ಲಟಾಸನ ಮಾಡಲಾಯಿತು. ಬಳಿಕ ಬೆನ್ನು ನೆಲಕ್ಕೆ ಹಾಕಿ ಮಾಡುವ ಆಸನಗಳಾದ ಸೇತುಬಂಧಾಸನ, ಉತ್ತಾನ ಪಾದಾಸನ, ಅರ್ದ ಹಲಾಸನ, ಪವನ ಮುಕ್ತಾಸನ, ಶವಾಸನ ಪ್ರದರ್ಶನ ಮಾಡಲಾಯಿತು. ಕಪಾಲಭಾತಿ, ಪ್ರಾಣಾಯಾಮ ಆಸನಗಳಾದ ನಾಡಿಶೋಧ, ಅನುಲೋಮ-ವಿಲೋಮ, ಶೀತಳಿ ಪ್ರಾಣಯಾಮ, ಭ್ರಾಮರಿ ಪ್ರಾಣಯಾಮ, ಧ್ಯಾನ, ಸಂಕಲ್ಪ ಹಾಗೂ ಶಾಂತಿ ಪಾಠದೊಂದಿಗೆ ಯೋಗಥಾನ್ ಮುಕ್ತಾಯಗೊಂಡಿತು.
ಮುಖ್ಯ ಯೋಗ ತರಬೇತುದಾರರಾದ ಶ್ರೀನಿವಾಸ್, ತಿಪ್ಪೇಸ್ವಾಮಿ ಯೋಗಾಭ್ಯಾಸದ ಮಾರ್ಗದರ್ಶನ ನೀಡಿ, ಯೋಗಾಸನಗಳ ಲಾಭ ತಿಳಿಸಿದರು. ಯೋಗ ತರಬೇತುದಾರರಾದ ಕೆಂಚವೀರಪ್ಪ, ಸುನೀತಾ, ರವಿ ಅಂಬೇಕರ್, ಯಶೋಧ, ಶ್ರೀನಿವಾಸ್, ಲಲಿತಾ ಬೇದ್ರೆ, ವೀರೇಶ್, ಕೃಷ್ಣಮೂರ್ತಿ ಯೋಗಾಭ್ಯಾಸದ ಸಹ ತರಬೇತುದಾರರಾಗಿ ಕಾರ್ಯನಿರ್ವಹಿಸಿದರು.
ವೀರವನಿತೆ ಒನಕೆ ಓಬವ್ವ ಕ್ರೀಡಾಂಗಣ ಭಾನುವಾರದಂದು ಬೆಳ್ಳಂಬೆಳಿಗ್ಗೆ ಕಿಕ್ಕಿರಿದು ತುಂಬಿತ್ತು. ಸಾವಿರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಮುಂಜಾನೆಯ ಚಳಿಯನ್ನೂ ಲೆಕ್ಕಿಸದೆ ಉತ್ಸಾಹದಿಂದಲೇ ಯೋಗಥಾನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಕ್ರೀಡಾಂಗಣದಲ್ಲಿ ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅಲ್ಲಲ್ಲಿ ಆಳೆತ್ತರದ ವೇದಿಕೆಯನ್ನು ನಿರ್ಮಿಸಿ, ಯೋಗ ತರಬೇತುದಾರರು ಮಾರ್ಗದರ್ಶನ ನೀಡಲು ವ್ಯವಸ್ಥೆ ಮಾಡಲಾಗಿತ್ತು. ಕ್ರೀಡಾಂಗಣದಲ್ಲಿ ಯೋಗಾಭ್ಯಾಸಕ್ಕಾಗಿ ನೆಲಹಾಸನ್ನು ಹಾಸಿ ಅನುಕೂಲ ಕಲ್ಪಿಸಲಾಗಿತ್ತು. ಮಕ್ಕಳಿಗೆ ಆಯಾ ಶಾಲೆಗಳಲ್ಲಿಯೇ ಒಂದು ವಾರಗಳ ಕಾಲ ಯೋಗತರಬೇತುದಾರರು ಯೋಗ ತರಬೇತಿ ನೀಡಿದ್ದರಿಂದ, ಕ್ರೀಡಾಂಗಣದಲ್ಲಿ ಜರುಗಿದ ಯೋಗಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಸುಲಲಿತವಾಗಿ ಯೋಗ ಪ್ರದರ್ಶನ ನೀಡಿದರು.
ಜಿಲ್ಲಾಧಿಕಾರಿ ದಿವ್ಯಪ್ರಭು, ಜಿ.ಪಂ. ಸಿಇಒ ಎಂ.ಎಸ್. ದಿವಾಕರ್ ಸೇರಿದಂತೆ ಪ್ರಮುಖ ಗಣ್ಯರು ಮೊದಲ ಸಾಲಿನಲ್ಲಿಯೇ ಉಪಸ್ಥಿತರಿದ್ದು, ಯೋಗಾಭ್ಯಾಸದಲ್ಲಿ ತೊಡಗಿ ಇತರರಿಗೆ ಪ್ರೇರೇಪಣೆ ನೀಡಿದರು.
ಯೋಗಥಾನ್‍ನಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ನೊಂದಣಿ ಮಾಡಿಸಿ, ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದಕ್ಕಾಗಿ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಥಮ ಬಹುಮಾನ ಹಾಗೂ ಸಂತ ಜೋಸೆಫರ ಕಾನ್ವೆಂಟ್ ಶಾಲೆ ಪ್ರೌಢಶಾಲಾ ವಿಭಾಗ ದ್ವಿತೀಯ ಬಹುಮಾನ ಪಡೆಯಿತು. ಜಿಲ್ಲಾಧಿಕಾರಿಗಳು ವಿಜೇತರಿಗೆ ಶೀಲ್ಡ್ ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಾ.ರಂಗಸ್ವಾಮಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಯಲಕ್ಷ್ಮಿ ಬಾಯಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಜಿಲ್ಲೆಯ ವಿವಿಧ ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳು, ಜಿಲ್ಲೆಯ ಯೋಗ ಸಂಸ್ಥೆಗಳ ಪದಾಧಿಕಾರಿಗಳು, ಸರ್ಕಾರಿ ಕಚೇರಿ ಸಿಬ್ಬಂದಿ, ಎನ್‍ಸಿಸಿ, ಎನ್‍ಎಸ್‍ಎಸ್ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಯೋಗಪಟುಗಳು ಭಾಗವಹಿಸಿದ್ದರು.