ಪ್ರತಿಯೊಬ್ಬರು ಒಂದಲ್ಲ ಒಂದು ರೀತಿ ಮೂಢನಂಬಿಕೆಯನ್ನು ಆಚರಿಸುತ್ತಿರುವುದು ದೊಡ್ಡ ದುರಂತ : ಜೆ.ಯಾದವರೆಡ್ಡಿ

2 Min Read

 

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಆ.21 : ಮೌಢ್ಯವನ್ನು ಪ್ರಶ್ನಿಸುವವರಿಗೆ ದುರ್ಗತಿ ಕಾದಿದೆ ಎನ್ನುವ ಸಂದೇಶವನ್ನು ದುಷ್ಠ ಶಕ್ತಿಗಳು ಹಿಂದಿನಿಂದಲೂ ನೀಡುತ್ತಾ ಬರುತ್ತಿವೆ. ಮೂಢನಂಬಿಕೆ ವಿರುದ್ದ ಹೋರಾಡಿದ ಬುದ್ದ, ಬಸವ, ಅಂಬೇಡ್ಕರ್ ಇವರುಗಳ ಜೀವನವೂ ದುರಂತಮಯವಾಗಿತ್ತು ಎಂದು ವಿಜ್ಞಾನ ಕೇಂದ್ರದ ಅಧ್ಯಕ್ಷ ಜೆ.ಯಾದವರೆಡ್ಡಿ ಹೇಳಿದರು.

ಚಿತ್ರದುರ್ಗ ವಿಜ್ಞಾನ ಕೇಂದ್ರದ ವತಿಯಿಂದ ಸರ್ಕಾರಿ ವಿಜ್ಞಾನ ಕಾಲೇಜು ಸ್ನಾತಕೋತ್ತರ ವಿಭಾಗದಲ್ಲಿ ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನದ ಅಂಗವಾಗಿ ಸೋಮವಾರ ವಿದ್ಯಾರ್ಥಿಗಳೊಂದಿಗೆ ಏರ್ಪಡಿಸಲಾಗಿದ್ದ ಸಂವಾದ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿದರು.

ಮೂಢನಂಬಿಕೆಯನ್ನು ವಿರೋಧಿಸಿದ ತತ್ವಜ್ಞಾನಿ ಸಾಕ್ರೆಟಿಸ್‍ಗೆ ವಿಷ ಉಣಿಸಿ ಕೊಲ್ಲಲಾಯಿತು. ಡಾ.ಎಂ.ಎಂ.ಕಲ್ಬುರ್ಗಿ, ಪತ್ರಕರ್ತೆ ಗೌರಿ ಲಂಕೇಶ್ ಇವರುಗಳ ಹತ್ಯೆಯಾಯಿತು. ದಾರ್ಶನಿಕರು, ಚಿಂತಕರು, ವಿಚಾರವಾದಿಗಳು ಮೌಢ್ಯವನ್ನು ಪ್ರಶ್ನಿಸಿ ಪ್ರಾಣ ಕಳೆದುಕೊಂಡಿದ್ದಾರೆ. ಭಾರತ ದೇಶ ಮೌಢ್ಯದಲ್ಲಿ ಮುಂದಿದೆ. ಹುಟ್ಟಿನಿಂದ ಹಿಡಿದು ಸಾಯುವವರೆಗೂ ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯಲ್ಲಿ ಮೂಢನಂಬಿಕೆಯನ್ನು ಆಚರಿಸಿಕೊಂಡು ಬರುತ್ತಿರುವುದು ದೊಡ್ಡ ದುರಂತ ಎಂದು ಬೇಸರ ವ್ಯಕ್ತಪಡಿಸಿದರು.

ಮೂಢನಂಬಿಕೆ ಎನ್ನುವುದು ಮನುಷ್ಯ ಬದುಕಿರುವತನಕ ಕಾಡುತ್ತಿರುತ್ತದೆ. ದೇವರು, ಧರ್ಮದ ಹೆಸರಿನಲ್ಲಿ ದೇವದಾಸಿ ಪದ್ದತಿ ಇಂದಿಗೂ ಜೀವಂತವಾಗಿದೆ. ಚಂದ್ರಗುತ್ತಿಯ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ನಡೆಯುತ್ತಿದ್ದ ಬೆತ್ತಲೆ ಸೇವೆಯನ್ನು ನಿಲ್ಲಿಸಲು ಪೊಲೀಸರು ಹಾಗೂ ಅಲ್ಲಿನವರ ಜೊತೆ ದೊಡ್ಡ ಸಂಘರ್ಷವೇ ನಡೆದು ಅಂತಿಮವಾಗಿ ಸರ್ಕಾರ ಬಿಗಿ ಕಾನೂನು ಜಾರಿಗೆ ತಂದ ಫಲವಾಗಿ ನಿಂತಿದೆ. ಮೌಢ್ಯಕ್ಕೆ ಹೆಣ್ಣು ಮಕ್ಕಳೆ ಜಾಸ್ತಿ ಬಲಿಯಾಗುತ್ತಿದ್ದರೂ. ಪ್ರಶ್ನಿಸುವ ಧೈರ್ಯ ಮಾಡುತ್ತಿಲ್ಲದಿರುವುದು ನೋವಿನ ಸಂಗತಿ ಎಂದರು.

ಜ್ಯೋತಿಷಿಗಳ ನಯ ವಂಚಕತನದಿಂದ ಆಗಬಾರದ್ದೆಲ್ಲಾ ಆಗುತ್ತಿದೆ. ನಿಜವಾಗಿಯೂ ಜ್ಯೋತಿಷಿಗಳಲ್ಲಿ ಯಾವ ಶಕ್ತಿಯೂ ಇಲ್ಲ. ಮಾಠ, ಮಂತ್ರ, ಮೋಡಿ ಈಗಲು ಇದೆ. ಜಾತಿ ಎನ್ನುವುದು ಕೂಡ ಒಂದು ಮೂಢನಂಬಿಕೆಯಿದ್ದಂತೆ. ವಿದ್ಯಾವಂತರು ಅಸ್ಪøಶ್ಯತೆಯನ್ನು ಆಚರಿಸಿಕೊಂಡು ಆತ್ಮವಂಚನೆ ಮಾಡಿಕೊಳ್ಳುತ್ತಿದ್ದಾರೆ. ದೊಡ್ಡ ದೊಡ್ಡ ವಿಜ್ಞಾನಿಗಳು ಕುಡ ಭೌದ್ದಿಕವಾಗಿ ದರಿದ್ರರಾಗಿದ್ದಾರೆಂದು ವಿಷಾಧಿಸಿದರು.

ಚಿತ್ರದುರ್ಗ ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಎಂ.ಆರ್.ದಾಸೆಗೌಡ ಮಾತನಾಡಿ ಸಮಾಜವನ್ನು ಮೌಢ್ಯ ಕಾಡುತ್ತಿರುವುದರಿಂದ ಯಾವುದು ವಿಜ್ಞಾನ, ಯಾವುದು ಮೌಢ್ಯ ಎನ್ನುವುದಕ್ಕೆ ಸ್ಪಷ್ಠ ಗೆರೆ ಎಳೆಯಬೇಕಿದೆ. ಶಿಕ್ಷಣ ಕಲ್ಪವೃಕ್ಷವಿದ್ದಂತೆ ಎಲ್ಲವನ್ನು ಕೊಡುತ್ತದೆ. ಪ್ರಯೋಜನ ಪಡೆದುಕೊಳ್ಳಬೇಕಷ್ಟೆ. ವೈಜ್ಞಾನಿಕ ನೆಲೆಯಲ್ಲಿ ಜೀವನ ಕಟ್ಟಿಕೊಳ್ಳಬೇಕು. ಆಗ ಅನೇಕ ಅಡ್ಡಿ ಆತಂಕಗಳು ಎದುರಾಗುವುದುಂಟು. ಸತ್ಯಶೋಧನೆ ಮಾಡಬೇಕಿದೆ. ಪ್ರಯೋಗದಿಂದ ಮಾತ್ರ ಸತ್ಯ ಗೊತ್ತಾಗುತ್ತದೆ ಎನ್ನುವುದೇ ನಿಜವಾದ ವಿಜ್ಞಾನ ಎಂದು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಸಿದ್ರಾಮ ಚನಗೊಂಡ ಅಧ್ಯಕ್ಷತೆ ವಹಿಸಿದ್ದರು.

ಸ್ನಾತಕೋತ್ತರ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ನಾಗರಾಜ್ ಡಿ. ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಸುಧಾಮ ವಿ.ಎನ್. ಚಿತ್ರದುರ್ಗ ವಿಜ್ಞಾನ ಕೇಂದ್ರದ ಖಜಾಂಚಿ ಕೆ.ರಾಮಪ್ಪ, ಸದಸ್ಯರುಗಳಾದ ಎಂ.ಬಿ.ಜಯದೇವಮೂರ್ತಿ, ಮನೋಹರ್ ವೇದಿಕೆಯಲ್ಲಿದ್ದರು.

Share This Article
Leave a Comment

Leave a Reply

Your email address will not be published. Required fields are marked *