ಚಿತ್ರದುರ್ಗ, (ಮಾರ್ಚ್24): ನಗರದ ಗಾಯಿತ್ರಿ ಕಲ್ಯಾಣ ಮಂಟಪದಲ್ಲಿ ಮಾರ್ಚ್ 26ರಂದು ಬೆಳಿಗ್ಗೆ 11ಕ್ಕೆ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳ 2020-21ನೇ ಸಾಲಿನ ದೇವರಾಜ್ ಅರಸ್ ವಸತಿ (ಅಲೆಮಾರಿ/ಅರೆಅಲೆಮಾರಿ) ವಸತಿ ಯೋಜನೆಯಡಿ ಅನುಮೋದನೆ ಮಾಡಲಾದ ಒಟ್ಟು 972 ಫಲಾನುಭವಿಗಳಿಗೆ ಕಾರ್ಯಾದೇಶ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಚಿತ್ರದುರ್ಗ ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಏರ್ಪಡಿಸಿದ್ದ ಚಿತ್ರದುರ್ಗ ತಾಲ್ಲೂಕಿಗೆ ವಸತಿ ಯೋಜನೆಯಡಿ ಮಂಜೂರಾಗಿರುವ ಮನೆಗಳ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ದೇವರಾಜ್ ಅರಸ್ ವಸತಿ ಅಲೆಮಾರಿ, ಅರೆಅಲೆಮಾರಿ ವಸತಿ ಯೋಜನೆಯಡಿ ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಈಗಾಗಲೇ ಗ್ರಾಮಸಭೆಯು ನಡೆದಿದೆ. ಮಾರ್ಚ್ 26ರಂದು ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಕಾರ್ಯಾದೇಶ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಇದರ ಜೊತೆಗೆ ಚಿತ್ರದುರ್ಗ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ 2020-21ನೇ ಸಾಲಿನ ಬಸವ ವಸತಿ ಮತ್ತು ಅಂಬೇಡ್ಕರ್ ನಿವಾಸ ಯೋಜನೆಯಡಿ ಒಟ್ಟು 850 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಹೆಚ್ಚುವರಿಯಾಗಿ ಒಟ್ಟು 2611 ಮನೆಗಳ ಮಂಜೂರಾತಿ ಮಾಡಲು ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ನಿಗಮ ಆದೇಶ ಕೊಟ್ಟ ನಂತರ ಫಲಾನುಭವಿಗಳ ಪಟ್ಟಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
2018-19 ರಿಂದ 2020-21ನೇ ಸಾಲಿನವರೆಗೆ ಮುಖ್ಯಮಂತ್ರಿಗಳ ಗ್ರಾಮೀಣ ಆಶ್ರಯ ನಿವೇಶನ ಯೋಜನೆಯಡಿ ಮಂಜೂರಾದ 21.25 ಎಕರೆ ಜಮೀನು ಮಂಜೂರಾಗಿದ್ದು, ಇದರಲ್ಲಿ ಒಟ್ಟು 418 ನಿವೇಶನ ರಹಿತ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. 2022-23ನೇ ಸಾಲಿಗೆ ಮುಖ್ಯಮಂತ್ರಿಗಳ ಗ್ರಾಮೀಣ ಆಶ್ರಯ ನಿವೇಶನ ಯೋಜನೆಯಡಿ ಮಂಜೂರಾದ 23.19 ಎಕರೆ ಜಮೀನಿನಲ್ಲಿ ಒಟ್ಟು 470 ನಿವೇಶನ ರಹಿತ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.
ದೇವರಾಜ್ ಅರಸ್ ವಸತಿ ಅಲೆಮಾರಿ, ಅರೆಅಲೆಮಾರಿ ಯೋಜನೆಯಡಿಲ್ಲಿ ಫಲಾನುಭವಿಗೆ ರೂ.1,31,800/-(ಒಂದು ಲಕ್ಷದ ಮೂವತ್ತೋಂದು ಸಾವಿರದ ಎಂಟನೂರು), ಬಸವ ವಸತಿ ಯೋಜನೆಯಡಿ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ರೂ.1,31,800/-(ಒಂದು ಲಕ್ಷದ ಮೂವತ್ತೋಂದು ಸಾವಿರದ ಎಂಟನೂರು) ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ 1,74,800/-(ಒಂದು ಲಕ್ಷದ ಎಪ್ಪತ್ನಾಲ್ಕು ಸಾವಿರದ ಎಂಟುನೂರು) ಕೊಡಲಾಗುತ್ತಿದೆ. ಇದರ ಜೊತೆಗೆ ನರೇಗಾದಡಿ 90 ಮಾನವಗಳನ್ನು ಸೃಜಿಸಲು ಅವಕಾಶವಿದೆ. ಹಾಗೂ ಸ್ವಚ್ಛ ಭಾರತ ಮಿಷನ್ ಯೋಜನೆಯ ಸೌಲಭ್ಯವೂ ದೊರೆಯಲಿದೆ ಎಂದು ತಿಳಿಸಿದರು.
ಫಲಾನುಭವಿಗಳಿಗೆ ಕಾರ್ಯಾದೇಶ ನೀಡುವ ಕಾರ್ಯಕ್ರಮಕ್ಕೆ ವಸತಿ ಯೋಜನೆಗಳ ಫಲಾನುಭವಿಗಳು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಭಾಗವಹಿಸಲಿದ್ದಾರೆ ತಿಳಿಸಿದರು.