ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಬಿ ವೈ ವಿಜಯೇಂದ್ರ ಅವರನ್ನು ನೇಮಕ ಮಾಡಲಾಗಿದೆ. ಇದು ತಾತ್ಕಾಲಿಕ ಆಯ್ಕೆ. ಲಿಂಗಾಯತರು ಬಿಜೆಪಿ ಬಿಟ್ಟಿದ್ದಾರೆಂದು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಮಾಡಿರುವ ನಾಟಕ. ಈ ನಾಟಕದ ಸ್ಕ್ರಿಪ್ಟ್ ನಲ್ಲಿ ಬಿವೈ ವಿಜಯೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಲಿಂಗಾಯತರು ಯಾಮಾರಬೇಡಿ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಆರೋಪಿಸಿದ್ದರು. ಇದೀಗ ತಾತ್ಕಾಲಿಕ ಅಧ್ಯಕ್ಷ ಎಂಬ ವಿಚಾರಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ಪಷ್ಟನೆ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಪ್ರಹ್ಲಾದ್ ಜೋಶಿ, ವಿಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿರುವುದನ್ನು ನಾನು ಸ್ವಾಗತ ಮಾಡುತ್ತೇನೆ. ವಿಜಯೇಂದ್ರ ಅವರು ಮೂರು ವರ್ಷ ಮಾತ್ರ ಅಧ್ಯಕ್ಷರಾಗಿರುತ್ತಾರೆ. ಬಳಿಕ ಮತ್ತೊಬ್ಬ ಕಾರ್ಯಕರ್ತ ಅಧ್ಯಕ್ಷರಾಗುತ್ತಾರೆ. ಹೈಕಮಾಂಡ್ ಈ ವಿಚಾರದಲ್ಲಿ ಸೂಕ್ತ ನಿರ್ಧಾರ ಕೈಗೊಂಡಿದೆ. ಯುವ ನಾಯಕತ್ವಕ್ಕೆ ಅವಕಾಶ ಕೊಡಬೇಕೆಂದು ಪಕ್ಷ ತೀರ್ಮಾನ ಮಾಡಿದೆ. ಹುಮ್ಮಸ್ಸಿನಿಂದ ಕೆಲಸ ಮಾಡುವ ಯುವಕರು ಬೇಕಿತ್ತು. ಹೀಗಾಗಿ ನನ್ನ ಸಂಪೂರ್ಣ ಬೆಂಬಲ ವಿಜಯೇಂದ್ರ ಅವರಿಗೆ ಇದೆ.
ಬಿಎಸ್ ಯಡಿಯೂರಪ್ಪ ಅವರನ್ನು ಎಲ್ಲಾ ಸಮುದಾಯದ ಜನ ಬೆಂಬಲಿಸುತ್ತಾರೆ. ಅವರು ಯಾವುದೋ ಒಂದು ಜಾತಿಯ ನಾಯಕ ಅಲ್ಲ. ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿಯೇ ವಿಜಯೇಂದ್ರ ಸಾಗುತ್ತಾರೆ. ವಿಜಯೇಂದ್ರ ಅವರು 15 ವರ್ಷದಿಂದ ಪಕ್ಷದ ಕೆಲಸ ಮಾಡುತ್ತಿದ್ದಾರೆ. ವಿಜಯೇಂದ್ರ ಅವರಿಗೆ ನಾವೂ ಬೆಂಬಲಕೊಡುತ್ತೇವೆ. ನಾನು ಬೆಲ್ಲದ ಜೊತೆಗೆ ಮಾತನಾಡುತ್ತೇನೆ. ಸಣ್ಣ ಪುಟ್ಟ ಅಸಮಾಧಾನ ಇದೆ ಅದನ್ನು ಸರಿ ಮಾಡುತ್ತೇವೆ ಎಂದು ವಿಜಯೇಂದ್ರ ಅವರ ತಾತ್ಕಾಲಿಕ ನೇಮಕದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.