ಮೈಸೂರು: ಲೋಕಸಭಾ ಚುನಾವಣೆಯಲ್ಲಿ ಗೆಲ್ಲಬೇಕು ಎಂಬ ಕಾರಣಕ್ಕೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳಗಳುತ್ತಿರುವ ವಿಚಾರ ಯಾವುದೇ ರೀತಿಯ ಗುಟ್ಟಾಗಿ ಉಳಿದಿಲ್ಲ. ಜೆಡಿಎಸ್ ನಾಯಕರು ಹೇಳುತ್ತಿದ್ದಾರೆ, ಬಿಜೆಪಿ ನಾಯಕರು ಮಾತನಾಡುತ್ತಿದ್ದಾರೆ. ಈ ಮೈತ್ರಿಯ ಬಗ್ಗೆ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಫೋಟೋವೊಂದು ವೈರಲ್ ಆಗುತ್ತಿದೆ.
ಆದಿಚುಂಚನಗಿರಿ ಮಠಕ್ಕೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಭೇಟಿ ನೀಡಿದ್ದರು. ಸಂಸದ ಪ್ರತಾಪ್ ಸಿಂಹ ಅವರು ಭೇಟಿ ನೀಡಿ, ದೇವೇಗೌಡ ಅವರ ಆಶೀರ್ವಾದ ಪಡೆದುಕೊಂಡಿದ್ದಾರೆ. ಕಾಲಿಗೆ ಬಿದ್ದು, ನಮಸ್ಕರಿಸಿದ್ದಾರೆ. ಈ ಫೋಟೋಗೆ ಹಲವರು ಹಲವು ರೀತಿಯ ವ್ಯಾಖ್ಯಾನ ಮಾಡುತ್ತಿದ್ದಾರೆ.
ಜೆಡಿಎಸ್ ಮತ್ತು ಬಿಜೆಪಿ ಒಗ್ಗಟ್ಟಾಗಿ ಚುನಾವಣೆ ಎದುರಿಸಲು ಹೊರಟಿದ್ದು, ಜೆಡಿಎಸ್ ಕೂಡ ಕ್ಷೇತ್ರಗಳಿಗೆ ಡಿಮ್ಯಾಂಡ್ ಇಡುವ ಸಾಧ್ಯತೆ ಇದೆ. ಅದರಲ್ಲೂ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಗೆ ಪ್ರಾಬಲ್ಯ ಜಾಸ್ತಿ. ಈಗಾಗಲೇ ಸಂಸದೆ ಸುಮಲತಾ ಅವರ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆಯೇ ದಟ್ಟವಾಗಿದೆ. ಮಂಡ್ಯದಿಂದ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ಹೀಗಿರುವಾಗ ಮೈಸೂರು ಭಾಗದಲ್ಲಿ ತನ್ನ ಪ್ರಾಬಲ್ಯ ಉಳಿಸಿಕೊಳ್ಳಲು ಪ್ರತಾಪ್ ಸಿಂಹ ದೇವೇಗೌಡ ಅವರ ಜೊತೆಗೆ ಹೆಚ್ಚಿನ ಬಾಂಧವ್ಯ ಬೆಳೆಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಯಾಕಂದರೆ ಪ್ರತಾಪ್ ಸಿಂಹ ಹೆಚ್ಚು ವಾಗ್ದಾಳಿ ನಡೆಸುತ್ತಾ ಇದ್ದದ್ದು ಇದೇ ಜೆಡಿಎಸ್ ಮೇಲೆ, ಜೆಡಿಎಸ್ ನಾಯಕರ ಮೇಲೆಯೇ. ಹೀಗಾಗಿ ಈ ಫೋಟೋಗೆ ಚರ್ಚೆಗಳು ರಾಜಕೀಯವಾಗಿ ಶುರುವಾಗಿದೆ.