ಬೆಂಗಳೂರು: ದೇವಾಲಯದಿಂದ ಬರುವ ಆದಾಯವನ್ನು ಸಿಎಂ ಸಿದ್ದರಾಮಯ್ಯ ಸರ್ಕಾರ ಚರ್ಚ್, ಮಸೀದಿಗಳಿಗೆ ನೀಡುತ್ತಿದೆ ಎಂದು ಬಿಜೆಪಿ ಆರೋಪ ಮಾಡಿತ್ತು. ಇದೀಗ ಆ ಆರೋಪಕ್ಕೆ ಅರ್ಚಕರ ಸಂಘ ಅದಕ್ಕೆ ಸ್ಪಷ್ಟನೆ ನೀಡಿದೆ. ಇಂದು ಸುದ್ದಿಗೋಷ್ಠಿ ನಡೆಸಿ ವಿವರಣೆ ನೀಡುವ ಮೂಲಕ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದೆ.
ಎ, ಬಿ, ಸಿ ದರ್ಜೆಯ ಹುಂಡಿಯ ಹಣ ದುರುಪಯೋಗವಾಗುತ್ತಿಲ್ಲ. ಯಾವುದೇ ದೇವಾಲಯಗಳ ಹುಂಡಿ ಹಣ ದುರುಪಯೋಗವಾಗುವುದಿಲ್ಲ. ದೇವಸ್ಥಾನದ ಹುಂಡಿಯ ಹಣ ಒಳ್ಳೆಯ ಕಾರ್ಯಗಳಿಗೆ ಉಪಯೋಗವಾಗುತ್ತಿದೆ. ರಾಜ್ಯದ ಎ ದರ್ಜೆ ದೇವಸ್ಥಾನಗಳ ಬಗ್ಗೆ ಅಪಪ್ರಚಾರ ನಡೆಯುತ್ತಿದೆ. ಎ ದರ್ಜೆ ದೇವಸ್ಥಾನಗಳಲ್ಲಿ ನೂರಾರು ಕೋಟಿ ವ್ಯವಹಾರ ನಡೆಯುತ್ತಿದೆ ಎಂದು ವಿರೋಧ ಪಕ್ಷಗಳು ಅಪಪ್ರಚಾರ ನಡೆಸುತ್ತಿವೆ.
ರಾಜ್ಯ ಕಾಂಗ್ರೆಸ್ ಸರ್ಕಾರ ದೇವಾಲಯಗಳ ಅಭಿವೃದ್ಧಿ ಕೆಲಸ ಮಾಡುತ್ತಿದೆ. ಅದನ್ನು ಸಹಿಸಲಾಗದ ರೀತಿ ಬಿಜೆಪಿ ನಾಯಕರು ಚರ್ಚ್, ಮಸೀದಿಗಳಿಗೆ ಹಣ ಹೋಗುತ್ತಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನಿತ್ಯ ಕೋಟ್ಯಂತರ ಹಣ ಸಂಗ್ರಹ ಆಗುತ್ತಿದ್ದು, ಇದನ್ನು ಬಿಜೆಪಿ ಸಹಿಸುತ್ತಿಲ್ಲ. ಬಿಜೆಪಿಯವರೇ ದಯವಿಟ್ಟು ಅಪಪ್ರಚಾರ ಮಾಡುವುದನ್ನು ಬಿಡಿ ಎಂದು ಅರ್ಚಕರ ಸಂಘದ ಪ್ರಧಾನ ಕಾರ್ಯದರ್ಶಿ ದೀಕ್ಷಿತ್ ಮನವಿ ಮಾಡಿದ್ದಾರೆ.
ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ 35 ಸಾವಿರ ಇಲಾಖೆಗಳಿವೆ. ಆ ದೇವಾಲಯಗಳಿಂದ ಕೋಟ್ಯಾಂತರ ರೂಪಾಯಿ ಆದಾಯ ಬರುತ್ತೆ. ಆ ಆದಾಯವನ್ನು ದೇವಸ್ಥಾನಗಳ ಅಭಿವೃದ್ಧಿಗೆ ಬಳಸಿಕೊಳ್ಳಲು ಕಾಂಗ್ರೆಸ್ ಸರ್ಕಾರ ಹಿಂದೂ ಧಾರ್ಮಿಕ ಸಂಸ್ಥೆ ಧರ್ಮದಾಯ ದತ್ತಿ ವಿಧೇಯಕದಲ್ಲಿ ತಿದ್ದುಪಡಿಗೆ ರಾಜ್ಯ ಸರ್ಕಾರ ಮುಂದಾಗಿದೆ. ಹಳೆ ನಿಯಮ ಬದಲಾಯಿಸಿ ಸರ್ಕಾರ ದೇವಸ್ಥಾನದ ಆದಾಯಕ್ಕೆ ಕನ್ನ ಹಾಕುತ್ತಿದೆ ಎಂದು ಬಿಜೆಪಿ ಆರೋಪ ಮಾಡಿತ್ತು.