ಮೈಸೂರು: ಸ್ಯಾಂಟ್ರೋ ರವಿಯನ್ನು ಪೊಲೀಸರು ಇತ್ತಿಚೆಗೆ ಗುಜರಾತ್ ನಲ್ಲಿ ಬಂಧಿಸಿದ್ದಾರೆ. ಆದರೆ ಆತನ ಸೆರೆ ಅಷ್ಟು ಸುಲಭದ್ದಾಗಿರಲಿಲ್ಲ. ದೂರುಗಳು ದಾಖಲಾದ ತಕ್ಷಣ ಅದೇಗೋ ಎಲ್ಲಾ ನಾಕಾಬಂಧಿಯನ್ನು ದಾಟಿ, ಗುಜರಾತ್ ನಲ್ಲಿ ಹಳೆ ಗ್ರಾಹಕರ ಮನೆ ಸೇರಿದ್ದ. ಮೈಸೂರು, ಮಂಡ್ಯ, ಬೆಂಗಳೂರು ಹೀಗೆ ಎಲ್ಲೆ ಹುಡುಕಾಡಿದರು ಆತನ ಸುಳಿವೇ ಸಿಕ್ಕಿರಲಿಲ್ಲ. ಕಡೆಗೂ ಹನ್ನೊಂದು ದಿನದ ಬಳಿಕ ಪೊಲೀಸರ ಕೈಗೆ ತಗಲಾಕಿಕೊಂಡಿದ್ದಾನೆ. ಇದಕ್ಕೆಲ್ಲಾ ನಿಮಿಷಾಂಭ ದೇವಿಯ ಪವಾಡವೇ ಕಾರಣ ಎನ್ನುತ್ತಿದ್ದಾರೆ ಎಡಿಜಿಪಿ ಅಲೋಕ್ ಕುಮಾರ್.
ಎಲ್ಲಾ ಕಡೆ ಹುಡುಕಿದರೂ ಸ್ಯಾಂಟ್ರೋ ರವಿಯ ಸುಳಿವು ಸಿಗದೆ ಇದ್ದಾಗ ಖುದ್ದು ಅಖಾಡಕ್ಕೆ ಎಡಿಜಿಪಿ ಅಲೋಕ್ ಕುಮಾರ್ ಎಂಟ್ರಿ ಕೊಟ್ಟಿದ್ದರು. ಅವರಿಗೂ ಈ ಕೇಸ್ ಬಹಳ ಸುಲಭವೇನು ಆಗಿರಲಿಲ್ಲ. ತಂಡಗಳನ್ನು ಕಟ್ಟಿಕೊಂಡು ಹುಡುಕುವುದಕ್ಕೆ ಆರಂಭಿಸಿದರು. ಬಳಿಕ ಶ್ರೀರಂಗಪಟ್ಟಣದ ನಿಮಿಷಾಂಭ ತಾಯಿಗೆ ಅಲೋಕ್ ಕುಮಾರ್ ಹರಕೆಯನ್ನು ಕಟ್ಟಿಕೊಂಡಿದ್ದರು. ಅದಾದ 22 ಗಂಟೆ ಕಳೆಯುವಷ್ಟರಲ್ಲಿಯೇ ಸ್ಯಾಂಟ್ರೋ ರವಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಇಂದು ದೇವಾಲಯಕ್ಕೆ ಹೋಗಿ ಹರಕೆ ತೀರಿಸಿ ಬಂದಿರುವ ಅಲೋಕ್ ಕುಮಾರ್, ಈ ದೇವಿ ಬಗ್ಗೆ ನನಗೆ 12 ವರ್ಷದಿಂದ ಅಪಾರ ನಂಬಿಕೆ ಇದೆ. 2011ರಲ್ಲಿ ಮೈಸೂರಿನಲ್ಲಿ ಡಬ್ಬಲ್ ಮರ್ಡರ್ ಆಗಿತ್ತು. ಅಂದು ಕೂಡ ನಾನು ದೇವಿಗೆ ಹರಕೆ ಹೊತ್ತಿದ್ದೆ. ಹರಕೆ ತೀರಿಸಿ, ಹೋಗುವ ಐದು ಗಂಟೆಯ ಒಳಗೆ ಆರೋಪಿಗಳನ್ನು ಬಂಧಿಸಲಾಗಿತ್ತು. ಸ್ಯಾಂಟ್ರೋ ರವಿಯನ್ನು ಬಂಧಿಸದೆ ಹೋಗಿದ್ದರೆ ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ಬರುತ್ತಿತ್ತು ಎಂದಿದ್ದಾರೆ.