ಕಳೆದ ಎರಡು ವರ್ಷದಿಂದ ಕೊರೊನಾದಿಂದ ಮನುಷ್ಯ ಕುಲ ಸಂಕಷ್ಟ ಅನುಭವಿಸಿದ್ದಾಯ್ತು. ಇದೀಗ ಗಂಟುರೋಗ/ ಲಿಂಪಿ ವೈರಸ್ ಜಾನುವಾರುಗಳನ್ನು ಕಾಡುವುದಕ್ಕೆ ಶುರು ಮಾಡಿದೆ. ದೇಶದ ಹಲವು ರಾಜ್ಯಗಳಲ್ಲಿ ಈ ಲಿಂಪಿ ವೈರಸ್ ಕಾಣಿಸಿಕೊಂಡಿದೆ. ಲಕ್ಷಾಂತರ ಹಸುಗಳು ಈ ಲಿಂಪಿ ವೈರಸ್ ಗೆ ಬಲಿಯಾಗಿವೆ. ಇದರ ನಡುವೆ ಲಿಂಪಿ ವೈರಸ್ ಗೆ ಒಳಗಾಗಿರುವ ಹಸುವಿನ ಹಾಲಿನಿಂದ ಮನುಷ್ಯನಿಗೆ ಸೋಂಕು ಹರಡಬಹುದಾ ಎಂಬ ಹಲವು ಅನುಮಾನಗಳು ಹುಟ್ಟಿಕೊಂಡಿವೆ.
ಜನರ ಆತಂಕಕ್ಕೆ ಉತ್ತರ ಹುಡುಕಲು ಈಗಾಗಲೇ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಅಧ್ಯಯನ ನಡೆಸುತ್ತಿದೆ. ಸೋಂಕಿತ ಜಾನುವಾರುಗಳ ತಲೆಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಹಾಗೇ ಅದರ ಹಾಲನ್ನು ಕುಡಿದರೆ ಸೋಂಕು ಹರಡಬಹುದಾ ಎಂಬುದನ್ನು ಕಂಡು ಹಿಡಿಯಲಾಗುತ್ತಿದೆ.
ಅಧ್ಯಯನದ ವರದಿ ಬರುವುದಕ್ಕೂ ಮುನ್ನ ಆತಂಕಗೊಳ್ಳುವ ಅಗತ್ಯವಿಲ್ಲ. ಪಶು ವೈದ್ಯಕೀಯ ಹಾಗೂ ಪ್ರಾಣಿ ವಿಜ್ಞಾನ ವಿಶ್ವವಿದ್ಯಾಲಯದ ತಜ್ಞರಾದ ಗುರು ಅಂಗದ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ದನಕರುಗಳಿಂದ ಈ ವೈರಸ್ ಮನುಷ್ಯನಿಗೆ ಹರಡುವುದಿಲ್ಲ. ಹರಡುತ್ತೆ ಎಂಬ ಸುದ್ದಿಯೆಲ್ಲಾ ಸುಳ್ಳು ಎಂದಿದ್ದಾರೆ. ಸೆಂಟರ್ ಫಾರ್ ಒನ್ ಹೆಲ್ತ್ ನಿರ್ದೇಶಕ ಕೂಡ ಈ ಬಗ್ಗೆ ಮಾತನಾಡಿ, ಬಾಧಿತ ಹಸುಗಳ ಹಾಲನ್ನು ಕುಡಿಯುವುದರಿಂದ ಯಾವುದೇ ಸಮಸ್ಯೆ ಆಗಲ್ಲ. ಹಾಲನ್ನು ಕುದಿಸಿ ಕುಡಿಯಬೇಕು ಎಂದಿದ್ದಾರೆ.