ಹಾನಗಲ್: ಬೊಮ್ಮಾಯಿ ಅವರು ಈ ಹಿಂದೆ ಗೃಹ ಸಚಿವರಾಗಿದ್ದರು. ಈಗ ಮುಖ್ಯಮಂತ್ರಿಗಳಾಗಿದ್ದಾರೆ. ನೈತಿಕ ಪೊಲೀಸ್ ಗಿರಿ ಸಮರ್ಥಿಸಿ ಕೊಳ್ಳುತ್ತಿರುವುದು ಸರಿನಾ? ಪೊಲೀಸರ ಘನತೆ, ಗೌರವ ಏನಾಗಬೇಕು? ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರಶ್ನಿಸಿದರು.
ಈ ವೇಳೆ ಮಾತನಾಡಿದ ಅವರು, ಸಂವಿಧಾನ, ಪೊಲೀಸ್ ಇಲಾಖೆ ಏಕಿರಬೇಕು? ಗೃಹ ಸಚಿವರಾಗಿ ಕೆಲಸ ಮಾಡಿದವರೇ ತಮ್ಮ ಪಕ್ಷದ ಪಟಾಲಂನ ಕಿಡಿಗೇಡಿತನ ಸಮರ್ಥಿಸಿಕೊಳ್ಳುವುದು ರಾಜ್ಯ ಮತ್ತು ಇಡೀ ದೇಶಕ್ಕೆ ಕೆಟ್ಟ ಉದಾಹರಣೆಯಾಗಿ ನಿಲ್ಲುವಂತೆ ಮಾಡಿದೆ. ಪೊಲೀಸರು ಪೂಜೆ ಮಾಡಲಿ, ಒಗ್ಗಟ್ಟು ಪ್ರದರ್ಶಿಸಲಿ, ನಾವು ಬೇಡ ಎನ್ನುವುದಿಲ್ಲ. ಆದರೆ ಅವರು ರಾಷ್ಟ್ರಧ್ವಜ ಹಿಡಿಯಲಿ.
ಗೃಹ ಸಚಿವರು ನಮ್ಮ ಬಟ್ಟೆ ಹಾಕಿದರೆ ಏನು ತಪ್ಪು? ಎಂದು ಕೇಳುವುದಾದರೆ, ಇವರ ಮಾತು, ಇವರ ಪ್ರಚೋದನೆಗಳನ್ನು ನೋಡಿಕೊಂಡು ಕಾಂಗ್ರೆಸಿಗರು ಸುಮ್ಮನೆ ಕೂರಲು ಸಾಧ್ಯವಿಲ್ಲ. ಇದರಿಂದ ರಾಜ್ಯದ ಜನತೆಗೆ ಅವಮಾನವಾಗಿದೆ. ನಮ್ಮನ್ನು ಕಾಯುವ ಪೊಲೀಸ್ ಇಲಾಖೆಯನ್ನು ಕೇಸರಿಕರಣ ಮಾಡುವ ಪ್ರಯತ್ನ ಖಂಡನೀಯ. ಈ ಬಗ್ಗೆ ನಾವು ಮುಂದೆ ಹೋರಾಟ ಮಾಡುತ್ತೇವೆ ಎಂದು ಕಿಡಿಕಾರಿದರು.
ನಾವು ಸಂವಿಧಾನ, ಪೊಲೀಸ್ ಮ್ಯಾನುಯಲ್, ರಾಷ್ಟ್ರಧ್ವಜ, ಪೊಲೀಸ್ ಖಾಕಿ ಸಮವಸ್ತ್ರವನ್ನು ಅಲ್ಲಿನ ಎಸ್.ಪಿಗೆ ಕೊಟ್ಟು ಬರುತ್ತೇನೆ. ಇನ್ನು ಚರ್ಚ್ ನಲ್ಲಿ ನುಗ್ಗಿ ಬಲವಂತವಾಗಿ ಭಜನೆ ಮಾಡಿದವರ ವಿರುದ್ಧ ಅಲ್ಲಿನ ಪೊಲೀಸರು ಎಫ್ ಐಆರ್ ದಾಖಲಿಸಿರುವುದು ಸ್ವಾಗತಾರ್ಹ. ನಾವು ಹಿಂದೂಗಳೇ. ಆದರೆ ಬೇರೆ ಧರ್ಮದವರ ಪ್ರಾರ್ಥನಾ ಮಂದಿರಕ್ಕೆ ನುಗ್ಗಿ ಮಾಡಿರುವ ದಾಳಿ ಖಂಡನೀಯ. ಈ ವಿಚಾರವಾಗಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿರುವ ಅರವಿಂದ ಬೆಲ್ಲದ್ ಅವರನ್ನು ಸೇರಿಸಿ ಪ್ರಕರಣ ದಾಖಲಿಸಬೇಕು.
ಹಣಹಂಚಿಕೆ ವಿಚಾರವಾಗಿ ಕಾಂಗ್ರೆಸ್ ಚುನಾವಣೆ ಹಾದಿ ತಪ್ಪಿಸುತ್ತಿದೆ ಎಂಬ ಯಡಿಯೂರಪ್ಪನವರ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಚುನಾವಣೆಯಲ್ಲಿ ಜನರ ದಿಕ್ಕು ತಪ್ಪಿಸುತ್ತಿರುವವರು ಯಡಿಯೂರಪ್ಪನವರು ಹಾಗೂ ಬೊಮ್ಮಾಯಿ ಅವರು. ಅವರು ಈ ಜನಕ್ಕೆ ಏನು ಮಾಡಿದ್ದಾರೆ ಎಂಬುದನ್ನು ಮೊದಲು ಹೇಳಲಿ. ಕೋವಿಡ್ ಸಮಯದಲ್ಲಿ ಯಾರಿಗೆ ಏಷ್ಟು ಪರಿಹಾರ ಕೊಟ್ಟಿದ್ದಾರೆ. ರೈತರ ಆದಾಯ ಡಬಲ್ ಮಾಡಿದ್ದಾರಾ ಎಂಬುದನ್ನು ಹೇಳಲಿ. ಆ ಲೆಕ್ಕವನ್ನು ಜನರ ಮುಂದಿಡಲಿ ಎಂದರು.