ಬೆಂಗಳೂರು: ಇತ್ತಿಚೆಗಷ್ಟೇ ಮಾಜಿ ಸಿಎಂ ಡಿವಿ ಸದಾನಂದಗೌಡ ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಅದರಲ್ಲೂ ಲೋಕಸಭಾ ಚುನಾವಣಾ ಟಿಕೆಟ್ ಆಕಾಂಕ್ಷಿಯಾಗಿದ್ದ ಸದಾನಂದ ಗೌಡ ಅವರ ಈ ನಿರ್ಧಾರ ಎಲ್ಲರಿಗೂ ಶಾಕಿಂಗ್ ಎನಿಸಿತ್ತು. ಈ ವಿಚಾರಕ್ಕೆ ಕಾಂಗ್ರೆಸ್ ಕೂಡ ವ್ಯಂಗ್ಯವಾಗಿ ಹೇಳಿತ್ತು. ಹೈಕಮಾಂಡ್ ನಿರ್ಧಾರ ಎಂಬಂತೆ ಟ್ವೀಟ್ ಮಾಡಿತ್ತು. ಇದೀಗ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕಾರಣವನ್ನು ಸ್ಪಷ್ಟಪಡಿಸಿದ್ದಾರೆ.
ಡಿವಿ ಸದಾನಂದ ಗೌಡ ಅವರು ರಾಜಕೀಯ ನಿವೃತ್ತಿ ಘೋಷಣೆ ಮಾಡುವುದಕ್ಕೆ ಕಾರಣ ಏನು ಎಂಬುದನ್ನು ಯಡಿಯೂರಪ್ಪ ಅವರು ತಿಳಿಸಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಅವರಿಗೆ ಪಕ್ಷದ ನಾಯಕತ್ವ ಸಲಹೆ ನೀಡಿದೆ. ಹೈಕಮಾಂಡ್ ಸಲಹೆ ಮೇರೆ ಸದಾನಂದ ಗೌಡ ಅವರು, ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವುದಾಗಿ ಘೋಷಣೆ ಮಾಡಿದ್ದಾರೆ ಅವರು ಪಕ್ಷದ ಚಟುವಟಿಕೆಯಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುತ್ತಾರೆ. ಆದರೆ ಚುನಾವಣೆಯಲ್ಲಿ ಸ್ಪರ್ಧೆ ಮಾಡದೆ ಇರಲು ನಿರ್ಧರಿಸಿದ್ದಾರೆ ಎಂದಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಬೇಡಿ ಎಂದು ಸದಾನಂದ ಗೌಡ ಅವರಿಗೆ ನೇರವಾಗಿಯೇ ತಿಳಿಸಲಾಗಿದೆ. ಆದರೆ ಅವರಿಗೆ ಪಕ್ಷದಲ್ಲಿ ಇತರ ಜವಬ್ದಾರಿಗಳನ್ನು ನೀಡಲಾಗುತ್ತದೆ. ಪಕ್ಷದ ಕಡೆಯಿಂದ ಯಾವುದೇ ಲೋಪವಾಗಿಲ್ಲ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಸ್ಪಷ್ಟಪಡಿಸಿದ್ದಾರೆ. ಆದರೆ ಡಿವಿ ಸದಾನಂದ ಗೌಡ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದರು ಎನ್ನಲಾಗಿದೆ. ಹೈಕಮಾಂಡ್ ನೇರವಾಗಿಯೇ ಸ್ಪರ್ಧಿಸಬೇಡಿ ಎಂದು ಹೇಳಿದೆ ಎಂದರೆ ಆಕಾಂಕ್ಷಿಯಾಗಿದ್ದರು ಕೂಡ ಟಿಕೆಟ್ ಸಿಗುವ ಯಾವ ಲಕ್ಷಣಗಳು ಅಲ್ಲಿ ಕಾಣಿಸುತ್ತಿರಲಿಲ್ಲ. ಹೀಗಾಗಿ ಹೈಕಮಾಂಡ್ ಮಾತಿನಂತೆ ಹಿಂದೆ ಸರಿದಿದ್ದಾರೆ.