ಹಾಸನ: ನಿನ್ನೆ ಅರ್ಜುನ ಆನೆ ಸಾವನ್ನಪ್ಪಿದೆ. ಇದಕ್ಕೆ ರಾಜ್ಯಾದ್ಯಂತ ಕಂಬನಿ ಮಿಡಿದಿದ್ದಾರೆ. 22 ವರ್ಷಗಳಿಂದ ದಸರಾ ಹಬ್ಬದಲ್ಲಿ ಅರ್ಜುನ ಆನೆ ಭಾಗಿಯಾಗುತ್ತಾ ಇತ್ತು. 8 ಬಾರಿ ಅಂಬಾರಿ ಹೊತ್ತು, ತಾಯಿ ಚಾಮುಂಡೇಶ್ವರಿಯನ್ನು ಹೊತ್ತು ಮೆರೆಸಿತ್ತು. ಆದರೆ ಒಂಟಿ ಸಲಗದ ಜೊತೆಗೆ ಕಾದಾಡಲು ಸಾಧ್ಯವಾಗದೆ ನಿನ್ನೆ ಸಾವನ್ನಪ್ಪಿದೆ. ಅರ್ಜುನನ ಸಾವಿನ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿಯ ಪ್ರಮಾದವೇ ಕಾರಣ ಎನ್ನಲಾಗುತ್ತಿದೆ.
ಅರ್ಜುನನ ಸಾವಿನ ಬಗ್ಗೆ ಮಾತನಾಡಿರುವ ಮಾವುತರೊಬ್ಬರು, ಗುಂಡು ಏಟಿನಿಂದ ಅರ್ಜುನನಿಗೆ ನಡೆದಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಒಂಟಿ ಸಲಗ ದಾಳಿ ಮಾಡಿದಾಗ ರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಮದದಲ್ಲಿದ್ದ ಆನೆ ಸೆರೆಗೆ ಅರಣ್ಯ ಇಲಾಖೆ ಮುಂದಾಗಿತ್ತು. ಒಂಟಿಸಲಗವನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಗಾಳಿಯಲ್ಲಿ ಗುಂಡು ಹಾರಿಸಿದರು. ಇದು ತಪ್ಪಿ ಅರ್ಜುನನ ಕಾಲಿಗೆ ಬಿದ್ದಿದೆ ಎಂದು ಮಾವುತರೊಬ್ಬರು ತಿಳಿಸಿದ್ದಾರೆ.
ಒಂಟಿ ಸಲಗದ ಕಾರ್ಯಾಚರಣೆ ವೇಳೆ ಅರವಳಿಕೆ ಇಂಜೆಕ್ಷನ್ ಹಾರಿಸಲಾಗಿತ್ತು. ಅದು ಮಿಸ್ ಆಗಿ ಪ್ರಶಾಂತ ಎಂಬ ಆನೆಯ ಮೇಲೆ ಬಿತ್ತು. ಆಮೇಲೆ ಸುಧಾರಿಸಲು ಇಂಜೆಕ್ಷನ್ ನೀಡಿದ್ದರು. ಅರ್ಜುನ ಆನೆ ಮೊದಲ ಬಾರಿಗೆ ಕಾಡಾನೆ ಮೇಲೆ ದಾಳಿ ಮಾಡಲು ಹೊರಟಿತ್ತು. ಈ ವೇಳೆ ಅರಣ್ಯ ಸಿಬ್ಬಂದಿ ಕೋವಿನಿಂದ ಗುಂಡು ಹಾರಿಸಿದರು. ಆ ಗುಂಡು ಅರ್ಜುನ ಆನೆಗೆ ತಗುಲಿದೆ. ಬಳಿಕ ಅರ್ಜುನ ತನ್ನ ಶಕ್ತಿ ಕಳೆದುಕೊಂಡಿದ್ದಾನೆ. ಕಾಡಾನೆ ದಾಳಿಯಲ್ಲಿ ಗುದ್ದಾಡಲು ಆಗದೆ ಸಾವನ್ನಪ್ಪಿದೆ. ಕಾರ್ಯಾಚರಣೆಯಲ್ಲಿ ಆದ ಆಕಸ್ಮಿಕ ಪ್ರಮಾದಿಂದ ಈ ದುರ್ಘಟನೆ ನಡೆದಿದೆ. ಅರ್ಜುನನ ಕಾಲಿಗೆ ಗುಂಡು ಬಿದ್ದ ಬಳಿಕ, ಎದುರಿದ್ದ ಆನೆ ಮರಗಳನ್ನೇ ಬೀಳಿಸಲು ಶುರು ಮಾಡಿತ್ತು. ಇದರಿಂದ ಹೆದರಿ ನಾವೆಲ್ಲಾ ಓಡಿ ಹೋದೆವು ಎಂದಿದ್ದಾರೆ ಮಾವುತರೊಬ್ಬರು.