ಚಿತ್ರದುರ್ಗ,(ಮಾ.24) : ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಳೆದ 5 ವರ್ಷಗಳಿಂದ ಕಾಮಗಾರಿಗಳ ನಿರ್ವಹಣೆಯಲ್ಲಿ ಅನೇಕ ಅಕ್ರಮಗಳು ನಡೆದಿವೆ. ಶಾಸಕ ಚಂದ್ರಪ್ಪ ಇವರು ಅಧಿಕಾರಿಗಳಿಗೆ ಬೆದರಿಸುವುದು, ಧಮ್ಕಿ ಹಾಕುವುದು ನಿರಂತರವಾಗಿ ಮಾಡುತ್ತ ಬಂದಿದ್ದಾರೆ. ಈ ಕಾರಣಗಳಿಂದ ತಾಲ್ಲೂಕು ಮಟ್ಟದ ಅಧಿಕಾರಿಗಳು ಒಂದು ವರ್ಷವೂ ಕೂಡ ಕರ್ತವ್ಯ ನಿರ್ವಹಿಸದೆ ಎತ್ತಂಗಡಿಯಾಗುತ್ತಿದ್ದಾರೆ ಎಂದು ಮಾಜಿ ಸಚಿವ ಕೆಪಿಸಿಸಿ ಉಪಾಧ್ಯಕ್ಷ ಎಚ್.ಆಂಜನೇಯ ಆರೋಪಿಸಿದ್ದಾರೆ.
ನಗರದ ಐಶ್ವರ್ಯ ಪೋರ್ಟ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್.ಇ.ಪಿ/ಟಿ.ಎಸ್.ಪಿ ಹಣ ಮತ್ತು ಗಣಿ ಭಾದಿತ ಪ್ರದೇಶಗಳು (ಡಿ.ಎಂ.ಎಫ್ ಫಂಡ್) ಸಂಪೂರ್ಣವಾಗಿ ದುರ್ಬಳಕೆಯಾಗುತ್ತಿದ್ದೆ. ನಿಯಂತ್ರಣ ಮಾಡುವಲ್ಲಿ ಪಾರದರ್ಶಕತೆ ಕಾಪಾಡುವಲ್ಲಿ ಕಳೆದ 5 ವರ್ಷಗಳಿಂದ ಜಿಲ್ಲಾಡಳಿತ ಸಂಪೂರ್ಣ ನಿರ್ಲಕ್ಷ ವಹಿಸಿದೆ.
ತಾಲ್ಲೂಕಿನಲ್ಲಿ 300 ಕೆರೆಗಳನ್ನು ನಿರ್ಮಿಸಿದ್ದೇನೆ, ಅಭಿವೃದ್ಧಿಪಡಿಸಿದ್ದೇನೆಂದು ಶಾಸಕರ ಹೇಳಿಕೆ. ತಾಲ್ಲೂಕು/ ಕ್ಷೇತ್ರದಲ್ಲಿ ಎಷ್ಟು ಕೆರೆಗಳಿವೆ. ಈ ಕೆರೆಗಳ ಅಭಿವೃದ್ಧಿಗೆ ಸರ್ಕಾರ ಯಾವ ಯಾವ ಕೆರೆಗಳಿಗೆ ಎಷ್ಟು ಹಣ ಬಿಡುಗಡೆ ಮಾಡಿದೆ. ಟೆಂಡರ್ ಕೆರೆಯಲಾಗಿದೆಯೇ? ಹಾಗಿದ್ದರೆ ಯಾರಿಗೆ ಟೆಂಡರ್ ಕರೆಯಲಾಗಿದೆ, ಯಾರಿಗೆ ಟೆಂಡರ್ ನೀಡಲಾಗಿದೆ. ಕೆರೆಯಲ್ಲಿ ರಸ್ತೆ ನಿರ್ಮಾಣ ಮಾಡಲು ಸಂಬಂಧಿಸಿದ ಇಲಾಖೆಯಿಂದ ಅನುಮತಿ ಪಡೆಯಲಾಗಿದೆಯೇ ?
ಈ ವಿಷಯಗಳ ಕುರಿತು ನಾವು ಮಾಹಿತಿ ಹಕ್ಕು ಕಾಯಿದೆಯ (ಆರ್.ಟಿ.ಐ) ಪ್ರಕಾರ ಮಾಹಿತಿ ಕೇಳಿದರೆ ಯಾವ ಅಧಿಕಾರಿಗಳು ಮಾಹಿತಿ ನೀಡಬಾರದೆಂದು ತಾಕೀತ್ತು ಮಾಡಿದ್ದಾರೆ. ಈ ಶಾಸಕ. ಪಾರದರ್ಶಕ ಕಾಯಿದೆಯನ್ನು ಅಕ್ರಮಗಳನ್ನು ಸಕ್ರಮ ಮಾಡಿಕೊಳ್ಳಲು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದರು.
ಶಾಸಕ ಎಂ.ಚಂದ್ರಪ್ಪ ಐದು ವರ್ಷಗಳಿಂದ ತುಂಡು ಗುತ್ತಿಗೆಗಳನ್ನು ತನ್ನ ಕಾರ್ಯಕರ್ತರಿಗೆ ನೀಡದೆ, ಈಗ ಚುನಾವಣೆ ನಡೆಯುವ ಸಂದರ್ಭದಲ್ಲಿ ಕಾರ್ಯಕರ್ತರಿಗೆ ಆಮಿಷ ಒಡ್ಡಿ 5 ಲಕ್ಷ ರೂಪಾಯಿಗಳಂತೆ ತುಂಡು ಗುತ್ತಿಗೆಯನ್ನು ನೀಡಲಾಗುತ್ತಿದೆ. ರಸ್ತೆ ಮಾಡದೆ ಕಳಪೆ ಕಾಮಗಾರಿ ಮಾಡಿಸಿ ಅಕ್ರಮ ಬಿಲ್ಲುಗಳನ್ನು ಮಾಡಿಸಿ ಹಣ ಪಾವತಿಸುವಂತೆ ಅಧಿಕಾರಿಗಳಿಗೆ, ಇಂಜಿನಿಯರ್ ಗಳಿಗೆ ಧಮ್ಕಿ ಹಾಕುತ್ತಿದ್ದಾರೆ, ಅಷ್ಟೇ ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಮಾನಸಿಕ ಹಿಂಸೆ ಮತ್ತು ಕಿರುಕುಳ ನೀಡುತ್ತಿದ್ದಾರೆ.
ಅಧಿಕಾರಿಗಳು ರಜೆ ಹಾಕುತ್ತಿದ್ದಾರೆ, ವರ್ಗಾವಣೆಗೆ ಪ್ರಯತ್ನಿಸುತ್ತಿದ್ದಾರೆ, ಕೆಲವರು ಸ್ವಯಂ ನಿವೃತ್ತಿ ಹೊಂದಲು ಅರ್ಜಿ ಸಲ್ಲಿಸುತ್ತಿದ್ದಾರೆ. ಜಿಲ್ಲಾಡಳಿತ ಕೂಡಲೇ ಮಧ್ಯ ಪ್ರವೇಶಿಸಿ ಅಧಿಕಾರಿಗಳ ರಕ್ಷಣೆಗೆ ಮುಂದಾಗಬೇಕು. ಅಕ್ರಮ ಬಿಲ್ಲುಗಳನ್ನು ಬರೆಯುವುದನ್ನು ತಡೆಹಿಡಿಯಬೇಕು ಎಂದು ಒತ್ತಾಯಿಸಿದರು.
ಡಿ.ಎಂ.ಎಫ್ ಪಂಡ್ ಗಣಿ ಭಾದಿತ ಪ್ರದೇಶಗಳಿಗೆ ಬಳಕೆಯಾಗಬೇಕು, ಹಾಗೆ ಮಾಡದೆ ಡಿ.ಎಂ.ಎಫ್ ಅನುದಾನವನ್ನು ಸಂಪೂರ್ಣ ದುರ್ಬಳಕೆ ಮಾಡಲಾಗಿದೆ. ನಿರ್ಮಿತಿ ಕೇಂದ್ರ ಮತ್ತಿತರ ಏಜೆನ್ಸಿಗಳಿಗೆ ನೀಡಿ ಶಾಸಕ ತನ್ನ ಕುಟುಂಬದವರಿಂದ ಕಾಮಗಾರಿ ಮಾಡಿಸಿ ಅಕ್ರಮವಾಗಿ ಬಿಲ್ಲುಗಳನ್ನು ಬರೆಯಿಸಿ ಹೇರಳವಾಗಿ ಹಣ ಪಡೆದಿದ್ದಾರೆ ಎಂಬ ಆಪಾದನೆ ನಮ್ಮ ಕ್ಷೇತ್ರದಾದ್ಯಂತ ಜನ ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ.
ಡಿ.ಎಂ.ಎಫ್.ಫಂಡ್ ಕ್ಷೇತ್ರಕ್ಕೆ ಕೊಟ್ಟಿರುವ ಅನುದಾನ ಎಷ್ಟು ? ಈ ಅನುದಾನವನ್ನು ಬಳಸಬೇಕಾಗಿದ್ದ ನಿರ್ದಿಷ್ಟ ಪ್ರದೇಶ ಯಾವುದು ? ಗಣಿ ಬಾದಿತ ಪ್ರದೇಶದಲ್ಲಿ ಬಳಕೆಯಾಗಿದೆಯೇ ? ಪಾರದರ್ಶಕ ಕಾಯಿದೆಯಂತೆ ಕಾಮಗಾರಿಗಳನ್ನು ನಿರ್ವಹಿಸಲಾಗಿದೆಯೇ ? ಖಂಡಿತ ಸಾಧ್ಯವಿಲ್ಲ, ಯತೇಚ್ಛವಾಗಿ ಬಿಲ್ಲುಗಳನ್ನು ಮಾಡಿ ಹಣ ಲೂಟಿಯಾಗಿದೆ ಎಂದು ಆಪಾದಿಸಿದರು.
ಪರಿಶಿಷ್ಠ ಜಾತಿ ಪರಿಶಿಷ್ಠ ವರ್ಗಗಳ ವಾಸಿಸುವ ಪ್ರದೇಶಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಕಾಯಿದೆಯ ಪ್ರಕಾರ ಕಾಮಗಾರಿ ನಿರ್ವಹಿಸದೆ ಮನಸಾ ಇಚ್ಛೆ ಎಲ್ಲಿ ಬೇಕೋ ಅಲ್ಲಿ ಅಕ್ರಮವಾಗಿ ಈ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಕಾಯಿದೆಯ ಪ್ರಕಾರ ಸರ್ಕಾರದಿಂದ ಕ್ಷೇತ್ರಕ್ಕೆ ಬಿಡುಗಡೆಯಾಗಿರುವ ಅನುದಾನವೆಷ್ಟು ? ಎಲ್ಲೆಲ್ಲಿ ಈ ಅನುದಾನವನ್ನು ಬಳಕೆ ಮಾಡಲಾಗಿದೆ ? ಈ ಅನುದಾನವನ್ನು ಬಳಕೆ ಮಾಡುವ ಸಂದರ್ಭದಲ್ಲಿ ಪಾರದರ್ಶಕ ಕಾಯಿದೆಯಂತೆ ಕಾಮಗಾರಿಗಳನ್ನು ನಿರ್ವಹಿಸಲಾಗಿದೆಯೇ ? ಹಾಗಿದ್ದರೆ ಟೆಂಡರ್ ಕರೆಯಲಾಗಿದೆಯೇ ? ಟೆಂಡರ್‍ದಾರರು ಯಾರು ? ಈ ಕಾಮಗಾರಿಗಳನ್ನು ಕೂಡ ತುಂಡು ಗುತ್ತಿಗೆಯನ್ನು ನೀಡಿ ಅಕ್ರಮಗಳು ನಡೆದಿವೆ, ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
ರಂಗಮಂದಿರ ನಿರ್ಮಾಣಕ್ಕೆ ಯಾವ ಅನುದಾನವನ್ನು ಬಳಸಲಾಗಿದೆ ? ವೆಚ್ಚ ಮಾಡಿದ ಹಣವೆಷ್ಟು? ಯಾವ ಏಜೆನ್ಸಿಯಿಂದ ಈ ಕಾಮಗಾರಿಯನ್ನು ನಿರ್ವಹಿಸಲಾಗಿದೆ ? ಇಲ್ಲಿಯೂ ಕೂಡ ಅಕ್ರಮ ನಡೆದಿದೆ. ಹೊಳಲ್ಕೆರೆ ಪಟ್ಟಣದಲ್ಲಿ ರಸ್ತೆ ಅಗಲೀಕರಣವನ್ನು ಅವೈಜ್ಞಾನಿಕವಾಗಿ ಮಾಡಲಾಗುತ್ತಿದೆ. ಊರು ಹುಟ್ಟಿದ ಸಂದರ್ಭದಲ್ಲಿ ಮನೆ ಕಟ್ಟಿಕೊಂಡಿರುವ ವಾರಸುದಾರರ ಮನೆಗಳನರ್ನು ತೆಗ್ಗು ಮಾಡಿ ಮಳೆ ನೀರು ಮನೆಗೆ ನುಗ್ಗಲು ಮತ್ತು ಬಳಕೆ ಮಾಡಿದ ನೀರನ್ನು ಚರಂಡಿಗೆ ಬಿಡಲಾಗದೆ ಹಿಂಸೆಯನ್ನು ಅನುಭವಿಸುತ್ತಿದ್ದಾರೆ. ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ ರಸ್ತೆ ಮತ್ತು ಚರಂಡಿಗಳನ್ನು ಕೂಡಲೇ ಅಲ್ಲಿನ ನಿವಾಸಿಗಳಿಗೆ ತೊಂದರೆಯಾಗದಂತೆ ನಿರ್ಮಿಸಬೇಕು. ಕಾಮಗಾರಿ ಸಂಪೂರ್ಣವಾಗಿ ಕಳಪಯಿಂದ ಕೂಡಿದೆ ಎಂದರು.
ಅನೇಕ ವರ್ಷಗಳಿಂದ ಭೂಮಿಯನ್ನು ಉಳುಮೆ ಮಾಡುತ್ತಿರುವ ಸಣ್ಣ ಹಿಡುವಳಿದಾರರಿಗೆ ಅಕ್ರಮ ಸಕ್ರಮದಲ್ಲಿ ಸಾಗುವಳಿ ಚೀಟಿ ನೀಡುವಾಗ ಭೂಮಿಯನ್ನೇ ಉಳುಮೆ ಮಾಡದವರಿಗೆ ಭೂಮಿ ಕೊಡಬೇಕೆಂದು ಶಾಸಕ ತಹಶೀಲ್ದಾರರಿಗೆ ತಾಕೀತ್ತು ಮಾಡುತ್ತಿದ್ದಾರೆ. ಇದನ್ನು ಪ್ರತಿಭಟಿಸಿ ಇಬ್ಬರು ತಹಶೀಲ್ದಾರರು ಸ್ವಯಂ ಆಗಿ ವರ್ಗಾವಣೆ ಹೊಂದಿದ್ದಾರೆ. ಅಮೃತ್ ಮಹಲ್ ಕಾವಲು ಜಮೀನನ್ನು ಶಾಸಕ ತನ್ನ ಸಂಬಂಧಿಗಳು ಹೊಂದಿರುವ ಸಂಘಸಂಸ್ಥೆಗಳಿಗೆ ಜಮೀನು ಮಂಜೂರು ಮಾಡಬೇಕೆಂದು ಹುನ್ನಾರ ನಡೆಸಿದ್ದಾರೆ. ಈ ಅಕ್ರಮವನ್ನು ತಡೆಹಿಡಿಯಬೇಕು. ತಹಶೀಲ್ದಾರರು ಭಯ ಭೀತಿಗೆ ಒಳಗಾಗಿದ್ದಾರೆ. ಅವರಿಗೆ ರಕ್ಷಣೆ ನೀಡಬೇಕು ಎಂದರು
ಭಾರತೀಯ ಜನತಾ ಪಕ್ಷದ ಮತಭೇಟೆಯ ವಿಜಯಸಂಕಲ್ಪ ಯಾತ್ರೆಗೆ ತಾಲ್ಲೂಕು ಆಡಳಿತ ವನ್ನೇ ದುರ್ಬಳಕೆ ಮಾಡಿಕೊಂಡು ಅಧಿಕಾರಿಗಳು ವಿವಿಧ ಸಾಲ ಸೌಲಭ್ಯ ನೀಡುತ್ತೇವೆಂದು ಜನರನ್ನು ಬಲವಂತವಾಗಿ ಆಸೆ ಆಮಿಷಗಳನ್ನು ಒಡ್ಡಿ ಕರೆತರಲಾಯಿತು. ಈ ಬಗ್ಗ ನಾವು ಚುನಾವಣಾ ಆಯುಕ್ತರಿಗೆ ದೂರು ನೀಡುತ್ತೇವೆ. ನೀವು ಈಗಲಾದರೂ ಅಧಿಕಾರಿಗಳು ಕಾನೂನು ಪ್ರಕಾರ ನಡೆಯಬೇಕು, ಬಿ.ಜೆ.ಪಿ ಕಾರ್ಯಕರ್ತರಂತೆ ಕೆಲಸ ಮಾಡುವುದನ್ನು ನಿಲ್ಲಿಸಬೇಕು. ಕಾನೂನನ್ನು ಎತ್ತಿ ಹಿಡಿಯಬೇಕು ಎಂದರು.
ಗ್ರಾಮ ಪಂಚಾಯಿತಿಗಳಿಗೆ 14ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾಗಿರುವ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದು ತನ್ನ ಹಿಂಬಾಲಿಕರುಗಳಿಂದ ಪಿ.ಡಿ.ಓ ಗಳ ಮೇಲೆ ಒತ್ತಡ ಹಾಕಿ ಕೊರೋನ ಸಂದರ್ಭದಲ್ಲಿ ಮಾಸ್ಕ್, ಸ್ಯಾನಿಟೈಸರ್ ಖರೀದಿಯಲ್ಲಿ ಮತ್ತಿತರ ಸಾಮಗ್ರಿಗಳ ಸರಬರಾಜು ಮಾಡುವಲ್ಲಿ ಅಕ್ರಮಗಳನ್ನು ಎಸಗಿದ್ದಾರೆ. ಇದು ಕೂಡ ತನಿಖೆ ಆಗಬೇಕು. ಯಾವ ಪಂಚಾಯಿತಿಗಳಿಗೆ ಎಷ್ಟು ಹಣ ಬಿಡುಗಡೆಯಾಯಿತು ಎಂಬ ವಿವರ ಬಹಿರಂಗಪಡಿಸಬೇಕು ಎಂದರು.
ಆಸ್ಪತ್ರೆ ಕಟ್ಟಡ, ತಾಲ್ಲೂಕು ಆಡಳಿತ ಕಛೇರಿ ಕಟ್ಟಡ, ಪಟ್ಟಣ ಪಂಚಾಯಿತಿ ಕಛೇರಿ ಕಟ್ಟಡ ಮತ್ತಿತರ ಕಟ್ಟಡಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಆರ್.ಟಿ.ಐ ಕಾಯಿದೆ ಪ್ರಕಾರ ಅರ್ಜಿ ನೀಡಿದರೆ ಕೂಡಲೇ ಮಾಹಿತಿ ನೀಡುವಂತೆ ಸಂಬಂಧಿಸಿದ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳಿಗೆ ಆದೇಶ ನೀಡಬೇಕು ಎಂದು ಆಗ್ರಹಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದಹೆಚ್.ಟಿ.ಹನುಮಂತಪ್ಪ, ಎಂ.ಪ್ರಕಾಶ್, ಜಿಪಂ ಮಾಜಿ ಉಪಾಧ್ಯಕ್ಷ ಬಿ.ಗಂಗಾಧರ್, ಸದಸ್ಯರಾದ ಡಿ.ಕೆ.ಶಿವಮೂರ್ತಿ, ಲೋಹಿತ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಮಾಜಿ ಎಚ್.ಡಿ.ರಂಗಯ್ಯ, ದುರುಗೇಶ್ ಪೂಜಾರ್, ಯುವ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ ಮುಖಂಡರಾದ ಗುಂಡೇರಿ ಗಿರೀಶ್ ಉಪಸ್ಥಿತರಿದ್ದರು.