ಸುದ್ದಿಒನ್, ಹೊಸದುರ್ಗ, ಅಕ್ಟೋಬರ್.08 : ಡಿಸೆಂಬರ್ 30 ಮತ್ತು 31 ರಂದು ನಡೆಯಲಿರುವ ಪ್ರಥಮ ಅಂತರ್ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರನ್ನು ಚಿತ್ರದುರ್ಗ, ಚಿಕ್ಕಮಗಳೂರು ಕಸಾಪ ಘಟಕದವರು ಸಮ್ಮೇಳನಕ್ಕೆ ಆಹ್ವಾನಿಸಿದರು.
ಆಹ್ವಾನ ಸ್ವೀಕರಿಸಿ ಮಾತನಾಡಿದ ಪಂಡಿತಾರಾಧ್ಯ ಶ್ರೀಗಳು, ಯಾವುದೇ ಕೆಲಸ ಕಾರ್ಯಗಳನ್ನು ಮಾಡಿದರೂ ನಕಾರಾತ್ಮಕ ಮತ್ತು ಸಕಾರಾತ್ಮಕ ಟೀಕೆಗಳು ಬರುವುದು ಸಹಜ. ಯಾರ ಟೀಕೆಗೂ ಗಮನಕೊಡದೆ, ಬೈದವರೆ ಬಂಧುಗಳೆನ್ನಬೇಕು. ಸಮಾರಂಭಗಳಲ್ಲಿ ಕಾಲಪ್ರಜ್ಞೆ ಬಹುಮುಖ್ಯ. ಕಾಲಪ್ರಜ್ಞೆ ಅರಿತು ಕಾರ್ಯಕ್ರಮ ಆಯೋಜಿಸಿ, ಅದರಂತೆ ನಡೆದರೆ ಕಾರ್ಯಕ್ರಮ ಯಶಸ್ವಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ನಮ್ಮ ಆದರ್ಶಗಳು ನಮಗೆ ದಾರಿದೀಪವಾಗಬೇಕು. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಡಾಕ್ಟರೇಟ್ ಪದವಿ ವಿಚಾರ ಬಂದಾಗ ‘ಸ್ವಾಮಿತ್ವ’ ಎನ್ನುವುದಕ್ಕಿಂತ ಹೆಚ್ಚಿನ ಪದವಿ ಬೇಕೆ? ಎಂದು ಪ್ರಶ್ನೆ ಮಾಡಿದ್ದರು. ಆ ಪರಂಪರೆಯಲ್ಲಿಯೇ ನಾವು ನಡೆಯಯುತ್ತಿದ್ದೇವೆ ಎಂದರು.
ಚಿಕ್ಕಮಗಳೂರು ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿ ಅಂತರ ಜಿಲ್ಲಾ ಸಾಹಿತ್ಯ ಸಮ್ಮೇಳನ ಪ್ರಥಮ ವಿನೂತನ ಪ್ರಯತ್ನವಾಗಿದೆ. ಇದರಿಂದ ಎರಡು ಜಿಲ್ಲೆಗಳ ನಡುವೆ ಕಲೆ,ಸಾಹಿತ್ಯ ಮತ್ತು ಸಂಸ್ಕøತಿಗಳ ವಿನಿಮಿಯ ಸಾಧ್ಯವಿದೆ. ಎರಡು ಜಿಲ್ಲೆಗಳಲ್ಲಿರುವ ಲೇಖಕ,ಸಾಹಿತಿಗಳನ್ನು ಸಮ್ಮೇಳನದಲ್ಲಿ ಗುರುತಿಸಲಾಗುವುದು. ಪುಸ್ತಕೋದ್ಯಮ ಮತ್ತು ಸವಾಲುಗಳು, ಅನ್ನದಾತನ ಅಳಲು, ಕಲೆ,ಸಾಹಿತ್ಯ, ಸಂಸ್ಕøತಿಗೆ ಸಾಣೇಹಳ್ಳಿ ಶ್ರೀಮಠದ ಕೊಡುಗೆ ಸೇರಿದಂತೆ ಹಲವು ಗೋಷ್ಠಿಗಳನ್ನು ಏರ್ಪಡಿಸಲಾಗುವುದು ಎಂದು ಮಾಹಿತಿ ನೀಡಿದರು.
ಚಿತ್ರದುರ್ಗ ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಮಾತನಾಡಿ, ಸಾಣೆಹಳ್ಳಿ ಮಠವು ಎರಡು ಜಿಲ್ಲೆಗಳ ನಡುವಿನ ಕೊಂಡಿಯಾಗಿದೆ. ಇಲ್ಲಿನ ಸಮ್ಮೇಳನದಲ್ಲಿ ಅತಿಥಿಗಳಿಗೆ ಶಾಲು, ಹಾರ, ತುರಾಯಿ ಬದಲಾಗಿ ಶ್ವೇತ ವಸ್ತ್ರ, ಪುಸ್ತಕಗಳು, ಬಳಕೆಗೆ ಯೋಗ್ಯವಾದ ವಸ್ತುಗಳನ್ನು ನೀಡಲಾಗುವುದು. ಇಲ್ಲಿನ ಸಮ್ಮೇಳನ ರಾಜ್ಯದ ಇತಿಹಾಸದಲ್ಲಿ ಹೊಸ ರೀತಿಯ ಪ್ರಥಮ ಪ್ರಯೋಗವಾಗಿದೆ ಎಂದರು.
ಈ ಸಂದರ್ಭದಲ್ಲಿ ಸಮ್ಮೇಳನದ ರೂಪುರೇಷೆಗಳ ಬಗ್ಗೆ ಚರ್ಚಿಸಲಾಯಿತು. ಸಮ್ಮೇಳನಕ್ಕೆ ಜನಪ್ರತಿನಿಧಿಗಳು, ಸಾಹಿತಿಗಳು, ಚಿಂತಕರು, ಕನ್ನಡದ ಬಗ್ಗೆ ಒಲವುಳ್ಳವರು ಆಗಮಿಸಲು ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ತೀರ್ಮಾನಿಸಲಾಯಿತು.
ಚಿಕ್ಕಮಗಳೂರು ಕಸಾಪ ಅಧ್ಯಕ್ಷ ಅಜ್ಜಂಪುರ ಸೂರಿ ಶ್ರೀನಿವಾಸ, ಚಿತ್ರದುರ್ಗ ಕಸಾಪ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ, ಇತಿಹಾಸ ಸಂಶೋಧಕ ರಾಜಶೇಖರಪ್ಪ, ಚಿತ್ರದುರ್ಗ ಬಾಪೂಜಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕೆ.ಎಂ. ವೀರೇಶ್, ಸ್ವಾಗತ ಸಮಿತಿ ಅಧ್ಯಕ್ಷ ಎ.ಸಿ ಚಂದ್ರಪ್ಪ, ಜಿಲ್ಲಾ ಕಸಾಪ ಕೋಶಾಧ್ಯಕ್ಷ ಸಿ.ಲೋಕೇಶ್, ಸಂಘಟನಾ ಕಾರ್ಯದರ್ಶಿ ವಿ.ಧನಂಜಯ, ಕಾರ್ಯದರ್ಶಿ ಕೆ.ಪಿ.ಎಂ. ಗಣೇಶಯ್ಯ, ಹೊಸದುರ್ಗ ಕಸಾಪ ಅಧ್ಯಕ್ಷ ಬಿ.ಪಿ. ಓಂಕಾರಪ್ಪ, ಹೊಳಲ್ಕೆರೆ ಕಸಾಪ ಅಧ್ಯಕ್ಷ ಎಂ. ಶಿವಮೂರ್ತಿ, ಹಿರಿಯೂರು ಕಸಾಪ ಅಧ್ಯಕ್ಷ ಡಾ.ನಾಗೇಶ್, ಸೇರಿದಂತೆ ಉಭಯ ಜಿಲ್ಲೆಗಳ ಕಸಾಪ ಪದಾಧಿಕಾರಿಗಳಿದ್ದರು.