ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, (ಆ.02) : ಕಲುಷಿತ ನೀರು ಸೇವಿಸಿ ಕವಾಡಿಗರಹಟ್ಟಿಯಲ್ಲಿ ಮೂವರು ಮೃತಪಟ್ಟು ಎಪ್ಪತ್ತಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದು, ತಪ್ಪಿತಸ್ಥರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಿಜೆಪಿ.ಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿ ಕಾಂಗ್ರೆಸ್ ಸರ್ಕಾರದ ವಿರುದ್ದ ಧಿಕ್ಕಾರಗಳನ್ನು ಕೂಗಲಾಯಿತು.
ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ರಾಜ್ಯ ಸರ್ಕಾರ ಜನರಿಗೆ ಶುದ್ದ ಕುಡಿಯುವ ನೀರು ಕೊಡುವಲ್ಲಿ ವಿಫಲವಾಗಿರುವುದರಿಂದ ಇಂತಹ ಘಟನೆಗಳು ಮೇಲಿಂದ ಮೇಲೆ ಮರುಕಳಿಸುತ್ತಿದೆ. ಶಾಂತಿಸಾಗರದಿಂದ ಪೂರೈಕೆಯಾಗುತ್ತಿರುವ ನೀರು ಕುಡಿದು ಮಂಜುಳಮ್ಮ, ರಘು ಮತ್ತು ಪ್ರವೀಣ್ ಸಾವನ್ನಪ್ಪಿದ್ದಾರೆ.
ಮೃತರ ಕುಟುಂಬಕ್ಕೆ ಕೂಡಲೇ ಪರಿಹಾರ ನೀಡಿ ಉನ್ನತ ಮಟ್ಟದ ಸಮಿತಿ ರಚಿಸಿ ಸಂಪೂರ್ಣ ತನಿಖೆ ಕೈಗೊಂಡು ತಪ್ಪಿತಸ್ಥರು ಯಾರೆ ಇರಲಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದೆಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಎಚ್ಚರಿಸಿದರು.
ಮೊಳಕಾಲ್ಮುರು ತಾಲ್ಲೂಕಿನ ನಾಗಸಮುದ್ರದಲ್ಲಿಯೂ ಇಂತಹುದೇ ಘಟನೆ ಕೆಲವು ದಿನಗಳ ಹಿಂದೆ ನಡೆದಿತ್ತು. ಅದೃಷ್ಠವಶಾತ್ ಯಾವುದೇ ಪ್ರಾಣ ಹಾನಿಯಾಗಲಿಲ್ಲ. ಗ್ರಾಮೀಣ ಭಾಗದಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳು ಕೆಟ್ಟಿವೆ.
ರಿಪೇರಿ ಮಾಡಿಸಲು ಆಳುವ ಸರ್ಕಾರಕ್ಕೆ ಮನಸ್ಸಿನಲ್ಲದ ಕಾರಣ ಇಂತಹ ದುರ್ಘಟನೆಗಳು ನಡೆಯುತ್ತಿವೆ. ಕಲುಷಿತ ನೀರು ಸೇವಿಸಿ ಕಿಡ್ನಿ ಹಾಗೂ ಹೃದಯ ವೈಫಲ್ಯದಿಂದ ಸಾವನ್ನಪ್ಪಿದ್ದಾರೆ. ಮೈನ್ ಟ್ಯಾಂಕ್‍ನಿಂದ ಮತ್ತೊಂದು ಟ್ಯಾಂಕ್‍ಗೆ ನೀರು ಸರಬರಾಜಾಗುವುದರಲ್ಲಿ ಏನು ಮಿಶ್ರಣವಾಗಿದೆ ಎನ್ನುವುದು ತನಿಖೆಯಿಂದ ಹೊರಬರಬೇಕಿದೆ. ಸಂಬಂಧಪಟ್ಟ ಅಧಿಕಾರಿಗಳನ್ನು ತಕ್ಷಣವೇ ಸೇವೆಯಿಂದ ಅಮಾನತ್ತುಗೊಳಿಸಬೇಕು ಎಂದು ಕೆ.ಎಸ್.ನವೀನ್ ಆಗ್ರಹಿಸಿದರು.
ಮೃತಪಟ್ಟ ಮೂರು ಮಂದಿ ಕುಟುಂಬಕ್ಕೆ ತಲಾ ಐವತ್ತು ಸಾವಿರ ರೂ.ಗಳನ್ನು ವೈಯಕ್ತಿಕವಾಗಿ ಕೆ.ಎಸ್.ನವೀನ್ ನೀಡಿದರು.
ಕವಾಡಿಗರಹಟ್ಟಿ, ಜಿಲ್ಲಾಸ್ಪತ್ರೆ ಹಾಗೂ ಬಸವೇಶ್ವರ ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥರಾಗಿರುವವರನ್ನು ವೀಕ್ಷಿಸಿದರು.
ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಜೈಪಾಲ್, ನರೇಂದ್ರ ಹೊನ್ನಾಳ್, ಉಪಾಧ್ಯಕ್ಷ ಸಂಪತ್‍ಕುಮಾರ್, ನಗರಾಧ್ಯಕ್ಷ ನವೀನ್ ಚಾಲುಕ್ಯ, ಬಾಳೆಕಾಯಿ ರಾಂದಾಸ್, ಯುವ ಮುಖಂಡ ಜಿ.ಎಸ್.ಅನಿತ್‍ಕುಮಾರ್, ಜಿಲ್ಲಾ ಕಾರ್ಯದರ್ಶಿಗಳಾದ ಜಿ.ಹೆಚ್.ಮೋಹನ್, ರೇಖ, ಮಾಧ್ಯಮ ವಕ್ತಾರ್ ದಗ್ಗೆಶಿವಪ್ರಕಾಶ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಶೈಲಜಾರೆಡ್ಡಿ, ಚಂದ್ರಿಕಾ ಲೋಕನಾಥ್, ಸಿಂಧು, ರಜಿನಿ, ಕವನ, ಲೀಲ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ್‍ಯಾದವ್, ಕಿರಣ್‍ಕುಮಾರ್, ಗ್ರಾಮಾಂತರ ಅಧ್ಯಕ್ಷ ಕಲ್ಲೇಶಯ್ಯ ಇನ್ನು ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.