ಬೆಂಗಳೂರು: ರಾಜ್ಯದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯಾದರೆ ಸಾಕು ಎಂದು ಕನವರಿಸುವಾಗಲೇ ಇನ್ವೆಸ್ಟ್ ಕರ್ನಾಟಕ ಸಮಾವೇಶ ಕರ್ನಾಟಕ ನಿರುದ್ಯೋಗಿಗಳಿಗೆ ಹೊಸ ಭರವಸೆ ಹುಟ್ಟಿಸಿದೆ. ಈ ಮೂಲಕ ಉದ್ಯೋಗಗಳು ಹೆಚ್ಚಲಿದೆ, ಕನ್ನಡಿಗರಿಗೆ ಕೈತುಂಬ ಕೆಲಸ ಸಿಗಲಿದೆ ಎಂಬ ಭರವಸೆ ಇಟ್ಟುಕೊಂಡಾಗಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೀಡಿರುವ ಹೇಳಿಕೆಗೆ ವಿರೋಧ ವ್ಯಕ್ತವಾಗಿದೆ.
ಇನ್ವೆಸ್ಟ್ ಕರ್ನಾಟಕ-2025ಕ್ಕೆ ಅದ್ದೂರಿಯಾಗಿ ಚಾಲನೆ ನೀಡಲಾಗಿದೆ. ಈ ಕಾರ್ಯಕ್ರಮದಲ್ಲಿ ಮಾತನಾಡುವಾಗ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕರ್ನಾಟಕದಲ್ಲಿ ಬಂಡವಾಳ ಹೂಡಿದರೆ ಉತ್ತರ ಪ್ರದೇಶ, ಬಿಹಾರದ ಜನರಿಗೆ ಉದ್ಯೋಗ ಸಿಗುತ್ತದೆ ಎಂಬ ಹೇಳಿಕೆ ನೀಡಿದ್ದಾರೆ.
ಈ ಹೇಳಿಕೆಯನ್ನು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ ಖಂಡಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡಿದರೆ ಉತ್ತರ ಪ್ರದೇಶ, ಬಿಹಾರದ ಜನರಿಗೆ ಉದ್ಯೋಗ ಸಿಗುತ್ತದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥಸಿಂಗ್ ನಿನ್ನೆ ‘ಇನ್ವೆಸ್ಟ್ ಕರ್ನಾಟಕ’ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಉದ್ಘಾಟನೆ ಸಂದರ್ಭದಲ್ಲಿ ಹೇಳಿದ್ದಾರೆ. ಇದು ಅತ್ಯಂತ ದುರಹಂಕಾರದ, ಅತಾರ್ಕಿಕ, ಅಧರ್ಮದ, ಅನ್ಯಾಯದ, ಅನೈತಿಕ ಹೇಳಿಕೆ.
ರಾಜನಾಥಸಿಂಗ್ ದೇಶದ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರು. ಬಿಜೆಪಿ ನೇತೃತ್ವದ ಸರ್ಕಾರಗಳು ಬಂದಾಗೆಲ್ಲ ಅವರು ಕೇಂದ್ರ ಮಂತ್ರಿಯಾಗಿದ್ದಾರೆ. ಕಳೆದ ಅವಧಿಯಲ್ಲಿ ಅವರು ಕೇಂದ್ರ ಗೃಹ ಸಚಿವರಾಗಿದ್ದವರು. ಈ ಹಿಂದೆ ಉತ್ತರ ಪ್ರದೇಶ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು. ಇಷ್ಟಾಗಿಯೂ ಅವರಿಗೆ ಭಾರತ ಒಕ್ಕೂಟ ವ್ಯವಸ್ಥೆ ಅರ್ಥವಾಗದೇ ಇರುವುದು, ಒಕ್ಕೂಟ ಧರ್ಮದ ಪರಿಜ್ಞಾನವೇ ಇಲ್ಲದಿರುವುದು ದುರಂತ.
ರಾಜನಾಥ ಸಿಂಗ್ ಅವರಿಗೆ ಒಕ್ಕೂಟ ವ್ಯವಸ್ಥೆ ಹೇಗೆ ನಡೆಯಬೇಕೆಂಬ ಕನಿಷ್ಟ ಪರಿಜ್ಞಾನವಿದ್ದಿದ್ದರೆ ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಯಾಗುವುದರಿಂದ ಸ್ಥಳೀಯ ಜನರಿಗೆ ಉದ್ಯೋಗ ದೊರೆಯುತ್ತದೆ ಎಂದು ಹೇಳಿರುತ್ತಿದ್ದರು. ಯಾವುದೇ ರಾಜ್ಯದಲ್ಲಿ ಉದ್ಯಮ ಆರಂಭವಾದರೂ ಅಲ್ಲಿನ ಜನರಿಗೆ ಉದ್ಯೋಗ ದೊರೆಯಬೇಕೆಂಬುದು ಸಹಜ ನ್ಯಾಯ ಅನ್ನುವುದು ರಾಜಕಾರಣಿಗಳಿಗೆ ಇರಬೇಕಾದ ಸಾಮಾನ್ಯ ಜ್ಞಾನ. ಕರ್ನಾಟಕದಲ್ಲಿ ಲಕ್ಷಾಂತರ ಯುವಕ-ಯುವತಿಯರು ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿರುವಾಗ ರಾಜನಾಥ ಸಿಂಗ್ ಯುಪಿ, ಬಿಹಾರದ ಜನರಿಗೆ ಉದ್ಯೋಗ ಸಿಗುತ್ತದೆ ಎಂದು ಯಾಕೆ ಹೇಳಿದರು?
ವಾಸ್ತವವೇನೆಂದರೆ ರಾಜನಾಥ ಸಿಂಗ್ ಬುಟ್ಟಿಯಲ್ಲಿದ್ದ ಹಾವನ್ನು ಹೊರಗೆ ಬಿಟ್ಟಿದ್ದಾರೆ. ದೇಶದ ಅಭಿವೃದ್ಧಿ ಎಂದರೆ ಉತ್ತರ ಭಾರತೀಯರ ಅಭಿವೃದ್ಧಿ ಎಂಬುದು ಅವರ ಒಳಗಿನ ಅಜೆಂಡಾ. ಜನಸಂಖ್ಯೆ ನಿಯಂತ್ರಣ ಮಾಡಿಕೊಳ್ಳದೇ ದೇಶದ ಅಭಿವೃದ್ಧಿಗೆ ಮಾರಕವಾಗಿರುವ ಯುಪಿ, ಬಿಹಾರಗಳ ಜನರನ್ನು ‘ಸುರಕ್ಷಿತ ಸ್ವರ್ಗ’ದಂತಿರುವ ಕರ್ನಾಟಕಕ್ಕೆ ತುಂಬಿಸುವುದು ಅವರ ಗುರಿ. ಹಿಂದೆ ಇದೆಲ್ಲ ಮುಗುಮ್ಮಾಗಿ ನಡೆಯುತ್ತಿತ್ತು. ಈಗ ಅದು ಬಹಿರಂಗವಾಗಿಯೇ ಅವರ ಬಾಯಿಂದ ಹೊರಬಿದ್ದಿದೆ.
ಹೂಡಿಕೆದಾರರಿಗೆ ಬೇಕಾಗುವ ಜಮೀನನ್ನು ನಮ್ಮ ರಾಜ್ಯ ಸರ್ಕಾರವೇ ರೈತರಿಂದ ಸ್ವಾಧೀನಪಡಿಸಿಕೊಂಡು ಕೊಡುತ್ತದೆ. ಈ ಉದ್ಯಮಗಳಿಗೆ ನಮ್ಮ ರೈತರು ಸರ್ಕಾರ ಕೊಡುವ ಅಲ್ಪ ಪರಿಹಾರಕ್ಕೆ ಜಮೀನು ಕೊಟ್ಟು ದೇಶದ ಅಭಿವೃದ್ಧಿಗೆ ‘ತ್ಯಾಗ’ ಮಾಡಬೇಕು. ಅವರ ಮಕ್ಕಳು ನಿರುದ್ಯೋಗಿಗಳಾಗಿ ಬೀದಿಬೀದಿ ಅಲೆಯಬೇಕು. ಅಲ್ಲಿ ಏಳುವ ಉದ್ಯಮಗಳಲ್ಲಿ ರೋಗಿಷ್ಠ ರಾಜ್ಯಗಳ ನಿರುದ್ಯೋಗಿಗಳಿಗೆ ಕೆಲಸ ನೀಡಬೇಕು. ಇದ್ಯಾವ ನ್ಯಾಯ? ಕರ್ನಾಟಕ, ಕನ್ನಡಿಗರು ಇವರಿಗೆ ಕಾಲಕಸವಾಗಿ ಹೋದರೆ?
ರಾಜನಾಥ ಸಿಂಗ್ ಅವರ ಈ ಹೇಳಿಕೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ಖಂಡಿಸುತ್ತದೆ. ಕರ್ನಾಟಕದ ಉದ್ಯಮಗಳಲ್ಲಿ ಕಡ್ಡಾಯವಾಗಿ ಕನ್ನಡಿಗರಿಗೆ ಉದ್ಯೋಗ ನೀಡುವ ಸಲುವಾಗಿ ಕಾಯ್ದೆ ರೂಪಿಸಲು ಕರ್ನಾಟಕ ಸರ್ಕಾರವನ್ನು ನಾನು ಆಗ್ರಹಿಸುತ್ತೇನೆ. ರಾಜನಾಥ್ ಸಿಂಗ್ ಹೇಳಿದಂತೆ ಕರ್ನಾಟಕದ ಉದ್ಯಮಗಳಲ್ಲಿ ಯುಪಿ, ಬಿಹಾರಿಗಳು ತುಂಬಿಕೊಂಡರೆ ಕನ್ನಡ ಜನರ ಆಕ್ರೋಶ ಭುಗಿಲೇಳುತ್ತದೆ. ದಂಗೆಯಂಥ ಸನ್ನಿವೇಶ ನಿರ್ಮಾಣವಾದರೂ ಆಶ್ಚರ್ಯವಿಲ್ಲ. ಇದಕ್ಕೆ ಎಲ್ಲರೂ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಲು ಬಯಸುತ್ತೇನೆ ಎಂದಿದ್ದಾರೆ.