ನಮ್ಮೂರ ದೇಗುಲ : ದಾವಣಗೆರೆ : ಕೊಡದಗುಡ್ಡ ಶ್ರೀ ವೀರಭದ್ರಸ್ವಾಮಿ ಬೆಟ್ಟದ ಪರಿಚಯ

2 Min Read

ವಿಶೇಷ ಲೇಖನ
ಡಾ. ಕೆ.ವಿ. ಸಂತೋಷ್
ಹೊಳಲ್ಕೆರೆ,
ಚಿತ್ರದುರ್ಗ ಜಿಲ್ಲೆ
ಮೊ : 93424 66936

 

ಕೊಡದಗುಡ್ಡ ಶ್ರೀ ವೀರಭದ್ರೇಶ್ವರ ಬೆಟ್ಟವು ದೇವಿಕೆರೆ ಪಂಚಾಯಿತಿ ವ್ಯಾಪ್ತಿಯಲ್ಲಿದ್ದು, ಚಿತ್ರದುರ್ಗದಿಂದ ವಾಯುವ್ಯಕ್ಕೆ 48 ಕಿಲೋಮೀಟರ್ ದೂರದಲ್ಲಿದೆ.(ಜಗಳೂರಿನಿಂದ 12 ಕಿ.ಮೀ.) ಚಿತ್ರದುರ್ಗ – ಯಳಗೋಡು-ಬಿದರಕೆರೆ- ಕೊಣಚಗಲ್-ಶೆಟ್ಟಿಗೊಂಡನಹಳ್ಳಿ-ಬಸವಾಪುರ ಮಾರ್ಗದಲ್ಲಿ ಶೆಟ್ಟಿಗೊಂಡನಹಳ್ಳಿ ಗೇಟ್ ನಿಂದ ಉತ್ತರಕ್ಕೆ 3 ಕಿ.ಮೀ.ದೂರದಲ್ಲಿದೆ.

ದೇವಿಗೆರೆ,ಶೆಟ್ಟಿಗೊಂಡನಹಳ್ಳಿ,ಬಸವಾಪುರ..ಹತ್ತಿರದ ಗ್ರಾಮಗಳಿವೆ. ಅಕ್ಕಪಕ್ಕದ ಜಿಲ್ಲೆ,ತಾಲ್ಲೂಕುಗಳ ಬಹಳಷ್ಟು ಭಕ್ತರು ಈ ದೇವರಿಗೆ ನಡೆದುಕೊಳ್ಳುತ್ತಾರೆ.
ಇಲ್ಲಿಯೇ ಹೊರಸಂಚಾರ,ಹೊರಬೀಡು,ಪರೇವು ಆಚರಣೆ, ಸಣ್ಣಪ್ರಮಾಣದ ಶುಭ ಸಮಾರಂಭಗಳು ,ಪ್ರಸಾದ, ದಾಸೋಹ ಸೇವೆಗಳು ಸದಾಕಾಲ ನಡೆಯುತ್ತಲೇ ಇರುತ್ತವೆ.
ಸೋಮವಾರ ಈ ದೇವರ ವಾರವಾಗಿದ್ದು ಹತ್ತಾರು ಊರುಗಳಿಂದ ಭಕ್ತರು ಆಗಮಿಸುತ್ತಾರೆ.

ಗುಡ್ಡದ ಮೇಲಿನ ದೇವಾಲಯ:
ಗುಡ್ಡದ ಮೇಲಿನ ದೇವಾಲಯ ತಲುಪಲು ಅಗಲವಾದ, ವಿಶಾಲವಾದ, ಹಿಡಿಕೆಯ ಗ್ರಿಲ್ ಸಹಿತ ಮೆಟ್ಟಿಲುಗಳಿವೆ.
ಬೆಟ್ಟದ ಮೇಲಿನ ಬಯಲನ್ನು ಬಳಸಿಕೊಂಡು ಕಟ್ಟಲಾದ ಸುಂದರವಾದ ಶ್ರೀ ವೀರಭದ್ರೇಶ್ವರ ದೇವಾಲಯ ಇದಾಗಿದೆ .ಇದನ್ನು 17-18 ನೇ ಶತಮಾನದಲ್ಲಿ ವಿಜಯನಗರೋತ್ತರ ಕಾಲದಲ್ಲಿ ಪೂರ್ವಾಭಿಮುಖವಾಗಿ ನಿರ್ಮಾಣ ಮಾಡಲಾಗಿದೆ. ಒಂದು ಹುಟ್ಟು ಬಂಡೆಗಲ್ಲಿನಲ್ಲಿ ವೀರಭದ್ರನ ಉಬ್ಬುಶಿಲ್ಪವನ್ನು ಕಡೆಯಲಾಗಿದ್ದು ,ಅದಕ್ಕೆ ಒಂದು ದೇವಾಲಯವನ್ನು ನಿರ್ಮಿಸಲಾಗಿದೆ. ವೀರಭದ್ರ ದೇವಾಲಯವು ಕೊಡದಗುಡ್ಡ ವೀರಭದ್ರ ಎಂದೇ ಪ್ರಸಿದ್ಧಿ ಹೊಂದಿದೆ. ಶಾಸನದಲ್ಲಿ ಕೊಟದ ವೀರಭದ್ರನೆಂದೇ ಕರೆಯಲಾಗಿದೆ. ಅತ್ಯಂತ ಪ್ರಾಚೀನ ,ಪೌರಾಣಿಕ ಹಿನ್ನೆಲೆಯುಳ್ಳ ಈ ಕ್ಷೇತ್ರದ ಬೆಟ್ಟವು ವಿಶಾಲವಾಗಿ ನಿಂತಿದೆ . ಒಂದು ಹಿಂದಿನ ದಂತಕಥೆಯಂತೆ ಕೊಟ್ಟೂರೇಶ್ವರ ದೇವರ ಬಳಿ ವೀರಭದ್ರ ದೇವರು ಆಶ್ರಯ ಕೇಳಿದಾಗ ವೀರಭದ್ರನಿಗೆ ಕೊಡದಗುಡ್ಡಕ್ಕೆ ಹೋಗಿ ನೆಲೆ ನಿಲ್ಲಲು ಕೊಟ್ಟೂರೇಶ್ವರ ಹೇಳಿದಾಗ ವೀರಭದ್ರನು ಇಲ್ಲಿಗೆ ಬಂದು ನೆಲೆಸಿದಂತೆ.

ಈ ದೇವಾಲಯವು ಗರ್ಭಗೃಹ ,ಅಂತರಾಳ,
ನವರಂಗ ,ತೆರೆದ ಮುಖಮಂಟಪ ,
ನಂದಿಮಂಟಪ ಹಾಗೂ ಮಹಾದ್ವಾರ ಗೋಪುರಗಳನ್ನು ಒಳಗೊಂಡಿದೆ.ಗರ್ಭಗೃಹದಲ್ಲಿ ಬೃಹತ್ ಬಂಡೆಗಲ್ಲಿನ ಮೇಲೆ ಸುಮಾರು 9 ಅಡಿಗಳೆತ್ತರದ ವೀರಭದ್ರನ ಉಬ್ಬುಶಿಲ್ಪವನ್ನು ಕಡೆದಿರುವರು. ದ್ವಿಭಂಗಿಯಲ್ಲಿ ನಿಂತಿರುವ ವೀರಭದ್ರನು ತನ್ನ ಕೈಯಲ್ಲಿ ತ್ರಿಶೂಲ,ಕತ್ತಿ,ಗುರಾಣಿ, ಡಮರು ಹಿಡಿದಿದ್ದಾನೆ.ಕೊರಳಲ್ಲಿ ರುಂಡಮಾಲೆಯನ್ನು ಧರಿಸಿದ್ದಾನೆ.
ನವರಂಗದಲ್ಲಿ ನಾಲ್ಕು ಕಂಬಗಳಿದ್ದು,ಬಹುಮುಖಗಳಲ್ಲಿ ಕಡೆಯಲಾಗಿದೆ.ಗರ್ಭಗೃಹದ ಮೇಲೆ ದ್ರಾವಿಡ ಶೈಲಿಯ ಶಿಖರವನ್ನು ನಿರ್ಮಿಸಿರುವರು. ದೇವಾಲಯದ ವಾಯುವ್ಯ ದಿಕ್ಕಿನಲ್ಲಿ ಇತ್ತೀಚೆಗೆ ನಿರ್ಮಿಸಿದ ದ್ರಾವಿಡ ಶೈಲಿಯ ಮಹಾದ್ವಾರ ಗೋಪುರವಿದೆ. ದೇವಾಲಯದ ಕೆಳಗಡೆ ಪೂರ್ವ ಭಾಗದಲ್ಲಿ ಕಾಳಿಕಾಂಬ ದೇವಾಲಯವಿದೆ.

ಈ ದೇವರ ಜಾತ್ರೆಯು ಅತ್ಯಂತ ವಿಜೃಂಭಣೆಯಿಂದ ಹೋಳಿ ಹುಣ್ಣಿಮೆಯ ನಂತರ ನಡೆಯುತ್ತದೆ .ಈ ಜಾತ್ರೆ ಐದು ದಿನಗಳ ಕಾಲ ನಡೆಯುತ್ತದೆ.ಕಂಕಣ, ರಥೋತ್ಸವ,ಗುಗ್ಗಳ,
ಕೆಂಡಾರ್ಚನೆ,ಕಡುಬು ಬೆಲ್ಲದ ಬೇಳೆ ಎಡೆ… ಸೇವೆಗಳು ನಡೆಯುತ್ತವೆ. ಬೆಟ್ಟದ ಕೆಳಭಾಗದಲ್ಲಿ ಬಾವಿ, ಕಲ್ಯಾಣಿ,ಕಲ್ಲಿನ ಪೌಳಿಗಳಿವೆ. ಯುಗಾದಿ ,ದಸರಾ,ಕಾರ್ತಿಕ ಮಾಸದಲ್ಲಿ ವಿಶೇಷ ಪೂಜೆಗಳು ಜರುಗುತ್ತದೆ. ದೇವಾಲಯದ ಹೊರಭಾಗದಲ್ಲಿ ನಿಂತು ನೋಡಿದರೆ ಸುತ್ತಮುತ್ತಲಿನ ಕಣ್ವಕುಪ್ಪೆ,ಕೊಣಚಗಲ್ ,
ಹತ್ತಾರು ಕಿಲೋಮೀಟರ್ ದೂರದ ಪ್ರದೇಶಗಳನ್ನು, ಗ್ರಾಮಗಳು ಬಲು ಸುಂದರವಾಗಿ ಕಾಣುತ್ತದೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks