ನಮ್ಮೂರ ದೇಗುಲ : ಚಿತ್ರದುರ್ಗ : ವದ್ದೀಕೆರೆ ಗ್ರಾಮದ ಸಿದ್ದೇಶ್ವರ ದೇವಾಲಯದ ಪರಿಚಯ

3 Min Read

 

ವಿಶೇಷ ಲೇಖನ :
ಡಾ ಕೆ ವಿ ಸಂತೋಷ್
ಹೊಳಲ್ಕೆರೆ. ಮೊ : 9342466936.
ಚಿತ್ರದುರ್ಗ ಜಿಲ್ಲೆ

 

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ಐಮಂಗಲ ಹೋಬಳಿಯ ವದ್ದೀಕೆರೆ ಗ್ರಾಮದ ಸಿದ್ದೇಶ್ವರ (ಸಿದ್ದಪ್ಪ) ಯಾನೆ ಕಾಲಭೈರವೇಶ್ವರಸ್ವಾಮಿ ದೇವಾಲಯದ ಪರಿಚಯ.

ವದ್ದೀಕೆರೆ ಗ್ರಾಮವು ಮದಕರಿನಾಯಕನಕೋಟೆ (ಎಂ.ಡಿ.ಕೋಟೆ ) ಪಂಚಾಯಿತಿ ವ್ಯಾಪ್ತಿಯಲ್ಲಿದ್ದು, ಈ ಗ್ರಾಮವು ಚಿತ್ರದುರ್ಗ- ಐಮಂಗಲ – ವದ್ದೀಕೆರೆ-ಯರಬಳ್ಳಿ ಮುಖ್ಯರಸ್ತೆಯಲ್ಲಿದ್ದು, ಚಿತ್ರದುರ್ಗದಿಂದ 29 ಕಿಲೋಮೀಟರ್ ಹಾಗೂ ಹಿರಿಯೂರಿನಿಂದ 22 ಕಿಲೋಮೀಟರ್ ದೂರದಲ್ಲಿದೆ.
ಇದು ತಾಲ್ಲೂಕು/ ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದೆನಿಸಿದೆ.

ಪರಿಚಯ:
ಸಿದ್ಧೇಶ್ವರ / ಕಾಲಭೈರವ ದೇವಾಲಯವು ಗ್ರಾಮದ ಮಧ್ಯಭಾಗದಲ್ಲಿದ್ದು, ಪೂರ್ವಾಭಿಮುಖವಾಗಿ ಪಾಳೆಯಗಾರ ಶೈಲಿಯಲ್ಲಿ 16 -17ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಕಾಲಭೈರವಮೂರ್ತಿಯನ್ನು 10ನೇ ಶತಮಾನದ ನೊಳಂಬರ ಕಾಲದಲ್ಲಿ ಪ್ರತಿಷ್ಠಾಪಿಸಲಾಗಿದೆ.

ಇದು ಗರ್ಭಗೃಹ,ಅಂತರಾಳ, ನವರಂಗಗಳಿಂದ ಕೂಡಿದ ಈ ಭಾಗದ ಪ್ರಸಿದ್ಧ ದೇವಾಲಯವಾಗಿದೆ. ಗರ್ಭಗೃಹದಲ್ಲಿ ಒಂದು ಅಡಿ ಎತ್ತರದ ಪೀಠದ ಮೇಲೆ ಮೂರು ಅಡಿಗಳಷ್ಟು ಎತ್ತರದ ಕಾಲಭೈರವನ ಶಿಲ್ಪವಿದೆ. ಭೈರವನು ತನ್ನ ನಾಲ್ಕು ಕೈಗಳಲ್ಲಿ ಡಮರುಗ, ತ್ರಿಶೂಲ,ಖಡ್ಗ ಮತ್ತು ಪಾನಬಟ್ಟಲುಗಳನ್ನು ಹಿಡಿದಿದ್ದಾನೆ. ತ್ರಿಭಂಗಿಯಲ್ಲಿ ನಿಂತ ಜಟಾಮುಕುಟಧಾರಿಯಾದ ಭೈರವನ ಎಡಗೈಯಲ್ಲಿ ರುಂಡವಿದ್ದು,ಇದರಿಂದ ತೊಟ್ಟಿಕ್ಕುತ್ತಿರುವ ರಕ್ತವನ್ನು ನಾಯಿಯು ಜಿಗಿದು ನೆಕ್ಕುವಂತೆ ಕೆತ್ತಲಾಗಿದೆ. ಭೈರವನ ಪಕ್ಕದಲ್ಲಿ ಗಂಗಮ್ಮ,ಮಾಳಮ್ಮ ಎಂಬ ಲೋಹದ ವಿಗ್ರಹಗಳಿವೆ.

 

ಗರ್ಭಗೃಹ ಹಾಗೂ ಅಂತರಾಳದ ಬಾಗಿಲುವಾಡಗಳು ಸರಳವಾಗಿದೆ. ನವರಂಗದಲ್ಲಿ ನಾಲ್ಕು ಕಂಬಗಳಿವೆ. ನವರಂಗದ ಬಲಬದಿಯಲ್ಲಿ ಕರಂಡಮುಕುಟಧಾರಿಯಾದ ವಿಷ್ಣುವಿನ ಶಿಲ್ಪವಿದೆ. ನವರಂಗದ ಬಾಗಿಲುವಾಡದಲ್ಲಿ ಶೈವ ದ್ವಾರಪಾಲಕರಿದ್ದು, ಲಾಲಾಟದಲ್ಲಿ ಗಣೇಶನ ಉಬ್ಬುಶಿಲ್ಪವಿದೆ.
ದೇವಾಲಯದ ಮುಂಭಾಗದಲ್ಲಿ ನಂದಿ, ಶಿವಲಿಂಗ ಹಾಗೂ ನಾಗ ಶಿಲ್ಪಗಳಿವೆ. ಹೊರಭಾಗದಲ್ಲಿ ಶಿಲಾಶಾಸನಗಳು, ವೀರಮಾಸ್ತಿಗಲ್ಲು, ತುರುಗೋಳ್ ವೀರಗಲ್ಲು ಮೊದಲಾದ ಶಿಲ್ಪಗಳನ್ನು ಇಡಲಾಗಿದೆ.

ಗೋರಕನಾಥ ನವನಾಥ ಪಂಥಕ್ಕೆ ಸೇರಿದ ಕಾಲಭೈರವೇಶ್ವರ ಸ್ವಾಮಿ ದೇವಾಲಯವು ಪ್ರಸಿದ್ಧ ನಾಥಪಂಥದ ಶಕ್ತಿ ಕೇಂದ್ರವಾಗಿದೆ. ಈ ದೇವರನ್ನು ಆಡುಭಾಷೆಯಲ್ಲಿ ವದ್ದಿಕೆರೆ ಸಿದ್ದಪ್ಪ,ಸಿದ್ದೇಶ್ವರ.. ಎನ್ನುತ್ತಾರೆ. ಈ ದೇವರನ್ನು ನಡೆದುಕೊಳ್ಳುವ ಮನೆಗಳಲ್ಲಿ ಸಿದ್ದಪ್ಪ,ಸಿದ್ದಮ್ಮ.. ಎಂದು ತಮ್ಮ ಮಕ್ಕಳಿಗೆ ಹೆಸರು ಇಡುವ ಸಂಪ್ರದಾಯವಿದೆ.

ಮಜ್ಜನ ಬಾವಿ :
ದೇವಾಲಯದ ಮುಂಭಾಗದಲ್ಲಿ ಮಜ್ಜನದ ( ಸ್ನಾನದ )ಬಾವಿ ಇದ್ದು, ಈ ಬಾವಿಯ ನೀರಿನಿಂದ ಸ್ನಾನ ಮಾಡಿದರೆ ದುಷ್ಟಶಕ್ತಿಗಳು ದೂರವಾಗುವುದು, ರೋಗ-ರುಜಿನಗಳು ಪರಿಹಾರವಾಗುವುದೆಂಬ ನಂಬಿಕೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈ ಬಾವಿಯ ನೀರು ಜಾತ್ರೆಯ ಸಮಯದಲ್ಲಿ ಸಂಪೂರ್ಣ ಒಣಗಿ ಹೋಗುತ್ತದೆ.
ಗಂಗಾ ಪೂಜೆ ಮಾಡಿದ ನಂತರವಷ್ಟೇ ಹೊಸನೀರು
(ಹೊಸ ಜಲ)ಬರುತ್ತದೆ. ಇದು ಇಂದಿಗೂ ನಡೆಯುವ ಪವಾಡವಾಗಿದ್ದು,ವಿಜ್ಞಾನ ಲೋಕಕ್ಕೆ ಸವಾಲಾಗಿದೆ.

ಪ್ರತಿ ಭಾನುವಾರ, ಅಮಾವಾಸ್ಯೆ,ಹುಣ್ಣಿಮೆಯ ದಿನ ದೇವಾಲಯ ಭಕ್ತರಿಂದ ತುಂಬಿ ತುಳುಕುತ್ತದೆ. ಅನಾರೋಗ್ಯ ಕಾಡಿದಾಗ ಅಥವಾ ಮಾಟ-ಮಂತ್ರ, ವಾಮಾಚಾರ ಪ್ರಯೋಗ ನಡೆದ ಶಂಕೆ ಇದ್ದಾಗ ದೇವಾಲಯದ ಆವರಣದಲ್ಲಿ ಭಕ್ತರು ತಂಗುತ್ತಾರೆ. ಇದರಿಂದ ಸಮಸ್ಯೆ ದೂರವಾಗುವ ನಂಬಿಕೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ ಹಾಗೂ ಕಾರ್ತಿಕಮಾಸದಲ್ಲಿ ದೀಪೋತ್ಸವ ನಡೆಯುತ್ತದೆ. ದೇವಾಲಯದ ಬಳಿಯಲ್ಲಿ ಪ್ರತಿ ಭಾನುವಾರ ಅನ್ನಸಂತರ್ಪಣೆ ನಡೆಯುತ್ತದೆ. ಆಗಾಗ ಶುಭಸಮಾರಂಭಗಳು ಇಲ್ಲಿ ಜರುಗುತ್ತವೆ. ಈ ದೇವರಿಗೆ ಖಾರ -ಮಂಡಕ್ಕಿ,ಹುರಿಗಡ್ಲೆ -ಸಕ್ಕರೆ ನೈವೇದ್ಯವಾಗಿ ಅರ್ಪಿಸಿ ನಂತರ ಭಕ್ತರಿಗೆ ಹಂಚಲಾಗುತ್ತದೆ.

ಜಾತ್ರೆ :
ಈ ದೇವರ ಜಾತ್ರೆಯು ರಾಮನವಮಿಯ ನಂತರ ಶುಕ್ರವಾರದಂದು ಆರಂಭವಾಗಿ ಕಂಕಣಧಾರಣೆ ಮೂಲಕ ಆರಂಭವಾಗುವ ಜಾತ್ರೆಯಲ್ಲಿ ರಥೋತ್ಸವ ಮೊದಲಾದ ಉತ್ಸವಾಚರಣೆಗಳು ವಿಜೃಂಭಣೆಯಿಂದ ನಡೆಯುತ್ತವೆ. ಈ ಜಾತ್ರೆಯಲ್ಲಿ ಸುತ್ತಲಿನ ತಾಲ್ಲೂಕು/ ಜಿಲ್ಲೆಗಳಿಂದ
ಲಕ್ಷಾಂತರ ಜನರು ಪಾಲ್ಗೊಳ್ಳುತ್ತಾರೆ

ಶಾಸನಗಳು :
ಐಮಂಗಲದ ಕ್ರಿಸ್ತಶಕ 975 ಶಾಸನದಲ್ಲಿ ವೀರನೊಳಂಬ ದೇಲಿಪಯ್ಯ( ದಿಲೀಪ) ನ ಮಗ ನನ್ನಿನೊಳಂಬನು ಬಿಟ್ಟ ಬ್ರಹ್ಮಾದೇಯವಾಗಿದೆ (ಅಗ್ರಹಾರ ). ಪದುವಗೆರೆ- 500 ನ್ನು ಅಲ್ಲಿನ ಭೋಗಪತಿ ಗುಂಡಯ್ಯನು ನೋಡಿಕೊಳ್ಳುತ್ತಿದ್ದನೆಂದು ಹೇಳಿದೆ. ಪದುವಗೆರೆಯು ಐಮಂಗಲ ಸಮೀಪದಲ್ಲಿರುವ ಪ್ರಸ್ತುತ ವದ್ದೀಕೆರೆಯೇ ಆಗಿದೆ. ಪದುವಗೆರೆಯು- ಹದುವಗೆರೆಯಾಗಿ- ಪಾಳೆಯಗಾರರ ಕಾಲದಲ್ಲಿ ವೊದಿಕೆರೆಯಾಗಿ ವದಿಕೆರೆಯಾಗಿ ಮುಂದೆ ವದ್ದೀಕೆರೆ ಆಗಿರುವುದನ್ನು ಕಾಣಬಹುದು. ಹಿರಿಯೂರು -ಚಳ್ಳಕೆರೆ- ಚಿತ್ರದುರ್ಗದಿಂದ ಈ ಗ್ರಾಮಕ್ಕೆ ನೇರ ಬಸ್ ಸೌಲಭ್ಯವಿದೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks