ನಮ್ಮೂರ ದೇಗುಲ : ಜಟಂಗಿ ರಾಮೇಶ್ವರ ದೇವಸ್ಥಾನದ ಪರಿಚಯ

3 Min Read

ವಿಶೇಷ ಲೇಖನ :
ಡಾ ಕೆ ವಿ ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ
ಮೊ : 9342466936

 

ಚಿತ್ರದುರ್ಗದಿಂದ 102 ಕಿ.ಮೀ. ಹಾಗೂ ಬಳ್ಳಾರಿಯಿಂದ 40 ಕಿಮೀ. ದೂರವಿರುವ ಜಟಂಗಿ ರಾಮೇಶ್ವರ ಬೆಟ್ಟವು ಜಿಲ್ಲೆಯ ಎರಡನೇ ಅತಿ ಎತ್ತರದ ಬೆಟ್ಟ ಶ್ರೇಣಿಯಾಗಿದ್ದು ಇದು ಸುಮಾರು 3469 ಅಡಿಗಳಷ್ಟು ಎತ್ತರವಾಗಿದೆ.
ಇದೊಂದು ಚಾರಿತ್ರಿಕ, ಐತಿಹಾಸಿಕ, ಧಾರ್ಮಿಕ, ಪ್ರಾಗೈತಿಹಾಸಿಕ ನೆಲೆಯಾಗಿದೆ.ಇದು ಕಣಶಿಲೆಯ ಬೃಹತ್ ಶಿಲಾಸ್ತೋಮಗಳನ್ನು ಒಳಗೊಂಡ ಬೆಟ್ಟ ಶ್ರೇಣಿಗಳ ಸಾಲುಗಳನ್ನು ಹೊಂದಿದೆ.

ಇಲ್ಲಿಂದ 5 ಕಿಲೋಮೀಟರ್ ದೂರದ ಬ್ರಹ್ಮಗಿರಿ ಬೆಟ್ಟ ಹಾಗೂ ಜಟಂಗಿ ರಾಮೇಶ್ವರ ಬೆಟ್ಟಗಳ ಮಧ್ಯದ ಹಾಗೂ ಚಿನ್ನ ಹಗರಿ ನದಿಯ ದಂಡೆಯ ವಿಸ್ತಾರ ಬಯಲು ಪ್ರಾಚೀನ ಇಸಿಲಾ ಪಟ್ಟಣದ ಆಶ್ರಯತಾಣವಾಗಿತ್ತು. ಇಸಿಲಾ ಪಟ್ಟಣವು ಮೌರ್ಯ ಚಕ್ರವರ್ತಿ ಸಾಮ್ರಾಟ ಅಶೋಕನ ಕಾಲದ ಪ್ರಮುಖ ಆಡಳಿತ ಕೇಂದ್ರಗಳಲ್ಲಿ ಒಂದಾಗಿತ್ತು. ಇದೇ ಬೆಟ್ಟದಲ್ಲಿ ಈತನು ಹಾಕಿಸಿದ ಶಾಸನವನ್ನು ಕಾಣಬಹುದು.
ಜಟಂಗಿ ರಾಮೇಶ್ವರ ಬೆಟ್ಟಕ್ಕೆ ಹಿಂದೆ ಬಲ್ಗೋಡಿ ತೀರ್ಥವೆಂದು ಕರೆಯಲಾಗುತ್ತಿತ್ತು. ಜಟಂಗಿ ಬೆಟ್ಟದ ಮೇಲೆ ರಾಮೇಶ್ವರ ದೇವಾಲಯದಿಂದ ಈ ಬೆಟ್ಟವನ್ನು ಜಟಂಗಿ ರಾಮೇಶ್ವರ ಬೆಟ್ಟವೆಂದು ಹೆಸರಿಸಲಾಗಿದೆ.ಇದರಲ್ಲಿ ಎರಡು ಭಾಗಗಳಿವೆ.
ಸಣ್ಣಬೆಟ್ಟದ ಮೇಲೆ ರಾಮೇಶ್ವರ ದೇವಾಲಯ ಹಾಗೂ ಅಶೋಕನ ಶಿಲಾ ಶಾಸನಗಳಿವೆ. ದೊಡ್ಡಬೆಟ್ಟದ ಮೇಲೆ ರಾಮಾಯಣ ಕಾಲದ ಜಟಾಯು ಪಕ್ಷಿಯ ಸಮಾಧಿ ಇದೆ.

 

ಐತಿಹ್ಯ : ಹಿಂದೆ ರಾಮಾಯಣ ಕಾಲದಲ್ಲಿ ರಾವಣನು ಸೀತೆಯನ್ನು ಅಪಹರಣ ಮಾಡಿಕೊಂಡು ಕರೆದೊಯ್ಯುವಾಗ ಇಲ್ಲಿದ್ದ ಜಟಾಯು ಪಕ್ಷಿ ಸೀತೆಯನ್ನು ರಕ್ಷಿಸುವ ಸಲುವಾಗಿ ರಾವಣನೊಂದಿಗೆ ಹೋರಾಡಿ ಗಾಯಗೊಂಡು ಬಿದ್ದಿರುತ್ತದೆ.
ಕೆಲದಿನಗಳ ನಂತರ ಇದೇ ಮಾರ್ಗದಲ್ಲಿ ಶ್ರೀರಾಮ ಹಾಗೂ ಲಕ್ಷ್ಮಣ, ಸೀತೆಯನ್ನು ಹುಡುಕಿಕೊಂಡು ಹೊರಟಾಗ ಜಟಾಯು ಪಕ್ಷಿಯು ನಡೆದ ಕಥೆ ವಿವರಿಸಿ, ರಾವಣನು ಸೀತೆಯನ್ನು ದಕ್ಷಿಣದ ಕಡೆಗೆ ಕರೆದುಕೊಂಡು ಹೋಗಿದ್ದಾನೆ ಎಂಬ ಮಾಹಿತಿ ತಿಳಿಸಿ ಪ್ರಾಣ ಬಿಡುತ್ತದೆ.
ಶ್ರೀರಾಮನು ಅದಕ್ಕೆ ಸಮಾಧಿ ಮಾಡಿ ಅದರ ಮೇಲೆ ಒಂದು ಲಿಂಗವನ್ನು ಪ್ರತಿಷ್ಠಾಪಿಸಿದ್ದಾನೆ ಎಂದು ಹೇಳಲಾಗುತ್ತದೆ.ಅದೇ ರಾಮೇಶ್ವರಲಿಂಗ ಎಂದು ಹೇಳಲಾಗುತ್ತದೆ.
ಇಲ್ಲಿ ಪ್ರತಿ ಸೋಮವಾರ, ಶಿವರಾತ್ರಿ,ಯುಗಾದಿ, ದಸರಾ ಹಾಗೂ ಇನ್ನಿತರ ಹಬ್ಬಗಳಲ್ಲಿ ಉತ್ಸವಗಳು ನಡೆಯುತ್ತವೆ ಹಾಗೂ ಭಕ್ತರಿಂದ ವಿಶೇಷ ಪೂಜೆಗಳು ಜರುಗುತ್ತವೆ.

 

ದೇವಾಲಯದ ಪರಿಚಯ:
ಈ ದೇವಾಲಯ ಮೊದಲು ಇಟ್ಟಿಗೆಯ ದೇಗುಲವಾಗಿದ್ದು 5-6 ಶತಮಾನದಿಂದಲೇ ಇದ್ದಿತು. ನಂತರ ಕ್ರಿಸ್ತಶಕ 962 ರಲ್ಲಿ ಇಲ್ಲಿ ಕಲ್ಲಿನ ದೇವಾಲಯ ಲಿಂಗಶಿವಜೀಯರು ನಿರ್ಮಿಸಿದರೆಂದು ಹೇಳಲಾಗುತ್ತದೆ.

ಗರ್ಭಗೃಹ, ಅಂತರಾಳ, ನವರಂಗ, ಉಪ ದೇಗುಲ ದೀಪಸ್ತಂಭ ಹಾಗೂ ಮಹಾದ್ವಾರಗಳನ್ನು ಒಳಗೊಂಡ ವಿಸ್ತಾರವಾದ ದೇಗುಲವಾಗಿದೆ. ಜಟಂಗಿ ರಾಮೇಶ್ವರ ದೇವಾಲಯವು 10- 11ನೇ ಶತಮಾನದಲ್ಲಿ ಈ ಪರಿಸರದ ಪ್ರಸಿದ್ಧ ಜ್ಞಾನದೇಗುಲವಾಗಿತ್ತು. ಈ ದೇವಾಲಯಕ್ಕೆ ಹತ್ತಾರು ಪ್ರಮುಖ ರಾಜಮನೆತನಗಳು ದಾನದತ್ತಿಗಳನ್ನು ನೀಡಿದ ಶಾಸನಗಳಿವೆ.

ಈ ರಾಮೇಶ್ವರ ದೈವವು ಕುಮ್ಮಟದುರ್ಗದ ನಾಯಕ ಕಂಪಿಲರಾಯನ ಮನೆದೇವರಾಗಿದ್ದು, ಕುಮಾರರಾಮನನ್ನು ಕೆಲಕಾಲ ಇಂದಿನ ನೆಲಮಾಳಿಗೆಯಲ್ಲಿ ಇಟ್ಟಿದ್ದ ವಿಷಯ ಕೈಫಿಯತ್ತುಗಳಿಂದ ತಿಳಿದುಬರುತ್ತದೆ.ಅವುಗಳಲ್ಲಿ ಕುಮಾರರಾಮನು ಜಟಂಗಿ ರಾಮೇಶ್ವರ ವರಪ್ರಸಾದದಿಂದ ಹುಟ್ಟಿದವನೆಂದು ಈ ಕಾರಣದಿಂದ ಅವನಿಗೆ ಕುಮಾರರಾಮನೆಂದು ಕರೆಯಲಾಯಿತು ಎಂದು ಹೇಳಿವೆ.
ಇದರ ಜೊತೆಗೆ ಇಲ್ಲಿ ಸೋಮೇಶ್ವರ ದೇವಾಲಯ, ಕೇದಾರೇಶ್ವರ ದೇವಾಲಯ, ಮಹಿಷಮರ್ದಿನಿ ದೇವಾಲಯ, ಸೂರ್ಯ ದೇವಾಲಯ, ವೀರಭದ್ರೇಶ್ವರ ದೇವಾಲಯ, ಪಂಪಾಪತಿ ದೇವಾಲಯ, ಓಂಕಾರೇಶ್ವರ ದೇವಾಲಯ, ತ್ರಿಯಂಬಕೇಶ್ವರ ದೇವಾಲಯ,ಪರಶುರಾಮ ದೇವಾಲಯ, ಸಪ್ತಮಾತೃಕೆಯರ ದೇವಾಲಯ, ಜನಾರ್ಧನ, ಚಂದ್ರಮೌಳೇಶ್ವರ, ಮಹಾಬಲೇಶ್ವರ, ಅರ್ಕೇಶ್ವರ, ಚಂಡಿಕೇಶ್ವರ, ಕಾಲಭೈರವ ವಿರೂಪಾಕ್ಷೇಶ್ವರ, ಚಾಮುಂಡೇಶ್ವರಿ, ಮುಂತಾದ ದೇವಾಲಯಗಳಿವೆ.
ಸಣ್ಣ ಬೆಟ್ಟದ ಮೇಲೆ ಸೀತಾದೊಣೆ, ವೀರಗಲ್ಲುಗಳು, ಮಾಸ್ತಿಗಲ್ಲುಗಳು ಕಾಣಬಹುದು.
ಬಂದ ಭಕ್ತರಿಗೆ ಉಳಿದುಕೊಳ್ಳಲು ಸಣ್ಣ ಸಮುದಾಯಭವನ,ನೀರಿನ ವ್ಯವಸ್ಥೆ,ಊಟದ ವ್ಯವಸ್ಥೆ ತಂಗಲು, ನೀರು ನೆರಳಿನ ವ್ಯವಸ್ಥೆ ಇದೆ.

 

ಹೋಗುವ ದಾರಿ:
ಚಳ್ಳಕೆರೆ -ಬಳ್ಳಾರಿ ರಾಷ್ಟ್ರೀಯ ಹೆದ್ದಾರಿಯ ರಾಂಪುರ ಗ್ರಾಮದಿಂದ ಪೂರ್ವಕ್ಕೆ 5 ಕಿಲೋಮೀಟರ್ ದೂರದ ದೇವಸಮುದ್ರ ಗ್ರಾಮದ ಬಳಿಯ ಕ್ರಾಸ್ನಿಂದ ಇಲ್ಲಿಗೆ ತಲುಪಬಹುದು. ಬೆಟ್ಟಕ್ಕೆ ಹೋಗಲು ಎಲ್ಲಾ ಕಡೆಯಲ್ಲೂ ಮಾರ್ಗದರ್ಶಿ ಫಲಕ ಹಾಕಲಾಗಿದೆ.ಇಲ್ಲಿಗೆ ತಲುಪಲು ರಾಂಪುರಕ್ಕೆ ಹೋಗಿ ಅಲ್ಲಿಂದ ಆಟೋ ಮೂಲಕ ಸಾಗಬಹುದು ಅಥವಾ ಸ್ವಂತ ವಾಹನವನ್ನು ಬಳಸಬಹುದು.

ನೆಲಮಟ್ಟದಿಂದ ಸುಮಾರು 800 ಮೆಟ್ಟಿಲುಗಳನ್ನೇರಿ ಸಣ್ಣ ಬೆಟ್ಟದ ಮೇಲ್ಭಾಗಕ್ಕೆ ತಲುಪಬಹುದು.ಇದರ ಹತ್ತಿರದಿಂದಲೇ ದೊಡ್ಡ ಬೆಟ್ಟಕ್ಕೆ ಹೋಗಲು ದಾರಿ ಇದ್ದು,
ಬೆಳಿಗ್ಗೆ ಅಥವಾ ಸಂಜೆಯ ಸಮಯದಲ್ಲಿ ಹೋಗಿಬರುವುದು ಅನುಕೂಲಕರ.ಬೆಟ್ಟದ ಮೇಲಿನಿಂದ ಸುತ್ತಮುತ್ತಲ 30 -40 ಕಿಲೋಮೀಟರ್ ದೂರದ ಸುಂದರ ವಾತಾವರಣ ಹಾಗೂ ಪರಿಸರದ ಸೊಬಗನ್ನು ನೋಡಬಹುದು.ಒಂದು ದಿನದ ಪಿಕ್ನಿಕ್ಕಿಗೆ ಹೇಳಿಮಾಡಿಸಿದ ಜಾಗ ಇದಾಗಿದ್ದು,ಪ್ರಕೃತಿಯ ಸೊಬಗಿನ ಜೊತೆಗೆ ದೇವರ ದರ್ಶನದ ಭಾಗ್ಯವನ್ನು ಪಡೆಯಬಹುದು. ದೊಡ್ಡಬೆಟ್ಟಕ್ಕೆ ಹತ್ತಲು ಮೆಟ್ಟಿಲುಗಳಿರುವುದಿಲ್ಲ. ಕಾಲುದಾರಿಯಲ್ಲಿ ಸಾಗಬೇಕು.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks