ಬೆಂಗಳೂರು; ದಲಿತ ಸಮುದಾಯಗಳ ಒಳಮೀಸಲಾತಿ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇದೀಗ ದಲಿತ ಸಮುದಾಯದ ಒಳಮೀಸಲಾತಿ ಬಗ್ಗೆ ಬಿಗ್ ಅಪ್ಡೇಟ್ ನೀಡಲಾಗಿದೆ. ಸಚಿವ ಹೆಚ್.ಕೆ.ಪಾಟೀಲ್, ಹೆಚ್.ಸಿ.ಮಹದೇವಪ್ಪ, ಶರಣ ಪ್ರಕಾಶ್ ಪಾಟೀಲ್ ಸುದ್ದಿಗೋಷ್ಟಿ ನಡೆಸಿ ಈ ಸಂಬಂಧ ಮಾಹಿತಿ ನೀಡಿದ್ದಾರೆ.

ಈಗಾಗಲೇ ಈ ಒಳಮೀಸಲಾತಿ ಸಂಬಂಧ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಸಮಿತಿಯೂ ಮಧ್ಯಂತರ ವರದಿಯನ್ನು ಮುಖ್ಯಮಂತ್ರಿ ಅವರಿಗೆ ಸಲ್ಲಿಕೆ ಮಾಡಲಾಗಿದೆ. ಈ ಬೆನ್ನಲ್ಲೇ ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಚರ್ಚೆಯಾಗಿದೆ. ಈ ಸಂಬಂಧ ಹೆಚ್.ಕೆ.ಪಾಟೀಲ್ ಮಾತನಾಡಿ, ಇಂದಿನ ಸಭೆಯಲ್ಲಿ 36 ವಿಷಯಗಳ ಪರಿಶೀಲನೆ ಮಾಡಿ, 34 ವಿಷಯಗಳ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ನಾಗಮೋಹನ್ ದಾಸ್ ನೇತೃತ್ವದಲ್ಲಿ ಏಕ ಸದಸ್ಯ ವಿಚಾರಣಾ ಆಯೋಗ ರಚನೆ ಮಾಡಲಾಗಿತ್ತು. ಒಳ ಮೀಸಲಾತಿ ಬಗ್ಗೆ ಮಧ್ಯಂತರ ಶಿಫಾರಸು ಮಾಡಲಾಗಿತ್ತು. ಆ ಸಮಿತಿಯೂ ನಾಲ್ಕು ಶಿಫಾರಸು ಮಾಡಿದೆ ಎಂದು ತಿಳಿಸಿದ್ದಾರೆ.

ಹೊಸ ಸಮೀಕ್ಷೆಯ ದತ್ತಾಂಶದ ಆಧಾರದ ಮೇಲೆ ಎಸ್ಸಿ ಉಪಜಾತಿ ವರ್ಗೀಕರಣ ಮಾಡಿ ಮೀಸಲಾತಿ ಹಂಚಿಕೆ ಮಾಡಬೇಕು. ನಾಗಮೋಹನ್ ದಾಸ್ ಸಮಿತಿಯನ್ನೇ ಮುಂದುವರೆಸಲು ಕ್ಯಾಬಿನೆಟ್ ನಲ್ಲಿ ತೀರ್ಮಾನಿಸಲಾಗಿದೆ. ಸಮಿತಿ ಸದಸ್ಯರು ಕೂಡ 60 ದಿನಗಳ ಒಳಗೆ ಸಮೀಕ್ಷೆ ಮಾಡ್ತೇವೆ ಎಂದು ತಿಳಿಸಿದ್ದಾರೆ. ಅದಕ್ಕೆ ಸರ್ಕಾರ ಕೂಡ ಅನುಮತಿ ನೀಡಿದೆ. ಗಣತಿಯಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂದ್ರ ಅಂತ ಇದೆ. ಆದರೆ ಇದರಲ್ಲಿ ಇರುವ ಗೊಂದಲ ಬಗೆಹರಿಸುವ ಉದ್ದೇಶ ಇದೆ. ಇದನ್ನು ಸರಿಪಡಿಸಿಕೊಳ್ಳಲು ಹೆಚ್ಚು ಸಮಯ ಬೇಕಿಲ್ಲ. 60 ದಿನದೊಳಗೆ ನೀಡಬಹುದು ಎಂದು ಹೆಚ್.ಕೆ. ಪಾಟೀಲ್ ಮಾಹಿತಿ ನೀಡಿದ್ದಾರೆ.

