ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಎರಡನೇ ಬಾರಿ ದರ್ಶನ್ ಅಂಡ್ ಸಹಚರರು ಜೈಲು ಸೇರಿದ್ದಾರೆ. ಜಾಮೀನಿಗಾಗಿ ಎಲ್ಲರೂ ಕೂಡ ಒದ್ದಾಡುತ್ತಿದ್ದಾರೆ. ಆದರೆ ಕಷ್ಟ ಸಾಧ್ಯವಾಗಿದೆ. ಇತ್ತ ದರ್ಶನ್ ಹಾಸಿಗೆ, ದಿಂಬಿಗಾಗಿ ಒದ್ದಾಡುತ್ತಿದ್ದಾರೆ. ಇದರ ಮಧ್ಯೆ ಮತ್ತೊಬ್ಬ ಆರೋಪಿ ಪ್ರದೂಶ್ ಗೆ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಇಂದು ಸಂಜೆ ಪ್ರದೂಶ್ ಗೆ ಕೋರ್ಟ್ ಜಾಮೀನನ್ನು ಮಂಜೂರು ಮಾಡಿದೆ.
ಪ್ರದೂಶ್ ಜೈಲು ಸೇರಿದ ಮೇಲೆ ಪೋಷಕರು ಕಂಗಲಾಗಿದ್ದರು. ಅದರಲ್ಲೂ ಅವರ ತಂದೆ ಅನಾರೋಗ್ಯದಿಂದ ಬಳಲುತ್ತಿದ್ದರು. ಮಗನ ಪರಿಸ್ಥಿತಿ ತಂದೆಯ ಆರೋಗ್ಯವನ್ನ ಇನ್ನಷ್ಟು ಕುಗ್ಗಿಸಿದೆ ಎನಿಸುತ್ತದೆ. ಕಡೆಗೂ ಆ ಜೀವ ಬದುಕುಳಿಯಲಿಲ್ಲ. ಪ್ರದೂಶ್ ಅವರ ತಂದೆ ಸುಬ್ಬುರಾವ್ ಇಂದು ಸಂಜೆ ನಿಧನರಾಗಿದ್ದಾರೆ. ತಂದೆಯ ಕಾರ್ಯವನ್ನು ಮಗನೇ ಮಾಡಬೇಕಾಗಿದೆ.ಒಂದು ಕಡೆ ಮಗ ಜೈಲಲ್ಲಿ ಮತ್ತೊಂದು ಕಡೆ ಕುಟುಂಬದ ಹಿರಿ ಜೀವ ನಿಧನ. ಇದನ್ನ ಕುಟುಂಬಸ್ಥರಿಗೆ ಸಹಿಸುವುದು ಸುಲಭದ ನೋವಲ್ಲ. ಆದರೂ ಕಣ್ಣಲ್ಲಿ ನೀರು ಬತ್ತಿ ಹೋದರು, ಮನದಲ್ಲಿ ದುಃಖ ಹೆಚ್ಚಾಗಿದೆ.
ಪ್ರದೂಶ್ ತಂದೆಯ ನಿಧನದ ಹಿನ್ನೆಲೆ ವಕೀಲ ದಿವಾಕರ್ ಅವರು ಬೆಂಗಳೂರಿನ ಸಿಸಿಹೆಚ್ ಕೋರ್ಟ್ ನಲ್ಲಿ ವಾದ ಮಂಡಿಸಿದ್ದಾರೆ. ಮಗನಿಂದ ಎಲ್ಲಾ ಕಾರ್ಯಗಳು ನಡೆಯಬೇಕಿರುವುದನ್ನ ವಿವರಿಸಿದ್ದಾರೆ. ಕೋರ್ಟ್ ಕೂಡ ಮಧ್ಯಂತರ ಜಾಮೀನನ್ನು ಮಂಜೂರು ಮಾಡಿದೆ. ಸುಮಾರು 20 ದಿನಗಳ ಕಾಲ ಎಲ್ಲಾ ಕಾರ್ಯವನ್ನು ಮುಗಿಸಲು ಕೋರ್ಟ್ ಅನುಮತಿ ನೀಡಿದೆ. ನ್ಯಾಯಾಧೀಶ ಐಪಿ ನಾಯಕ್ ಈ ತೀರ್ಪು ನೀಡಿದ್ದು, 20 ದಿನದ ಬಳಿಕ ವಾಪಾಸ್ ಜೈಲಿಗೆ ಬರಬೇಕಿರುತ್ತದೆ.






