ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 87220 22817
ಚಿತ್ರದುರ್ಗ, (ಮಾ.27) : ತಾಲ್ಲೂಕಿನ ಸರ್ಕಾರಿ ಶಾಲೆಗಳನ್ನು ದೆಹಲಿ ಮಾದರಿಯಲ್ಲಿ ಅಭಿವೃದ್ಧಿ ಮಾಡುವುದರ ಜೊತೆಗೆ ಎಲ್‍ಕೆಜಿಯಿಂದ ಪದವಿ ಪೂರ್ವ ಶಿಕ್ಷಣವನ್ನು ಉಚಿತವಾಗಿ ನೀಡುವುದು ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿ ರಾಜ್ಯ ಜಂಟಿ ಕಾರ್ಯದರ್ಶಿ ಬಿ.ಇ.ಜಗದೀಶ ಉದ್ದೇಶವಾಗಿದೆ.
ನಗರದ ಪತ್ರಿಕಾ ಭವನದಲ್ಲಿ ಇಂದು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಹು ವರ್ಷಗಳಿಂದ ಚಿತ್ರದುರ್ಗ ತಾಲ್ಲೂಕು ಸೇರಿದಂತೆ ಜಿಲ್ಲೆಯು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ.
ಇಲ್ಲಿಯವರೆಗೂ ಚುನಾಯಿತರಾದ ವಿಧಾನಸಭೆ ಹಾಗೂ ಲೋಕಸಭಾ ಸದಸ್ಯರು ತಮ್ಮ ಸ್ವಾರ್ಥ ರಾಜಕಾರಣದಿಂದ ಇಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಇದರಿಂದಾಗಿ ತಾಲ್ಲೂಕು ಸೇರಿದಂತೆ ಜಿಲ್ಲೆಯ ಜನರು ಉತ್ತಮ ಶಿಕ್ಷಣ ಪಡೆಯದೆ, ಯಾವುದೇ ಉದ್ಯೋಗಗಳನ್ನು ಪಡೆಯಲಾಗದೆ ಬಡತನದಲ್ಲೇ ಸಿಲುಕುವುದರ ಜೊತೆಗೆ ಸೂಕ್ತ ಆಸ್ಪತ್ರೆಗಳು ಇಲ್ಲದೆ ಜನರು ಖಾಯಿಲೆಗಳಿಂದ ನಲುಗಿ ಹೋಗಿದ್ದಾರೆ ಎಂದು ದೂರಿದರು.
ದೆಹಲಿಯಲ್ಲಿ ಎರಡು ಭಾರೀ ಮುಖ್ಯಮಂತ್ರಿ ಆಗಿರುವಂತಹ ಅರವಿಂದ್ ಕೇಜ್ರೀವಾಲ ಅವರು ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವಲ್ಲಿ ದಿಟ್ಟತನದ ನಿರ್ಧಾರಗಳನ್ನು ಕೈಗೊಂಡು ಆಡಳಿತ ನಡೆಸುತ್ತಿದ್ದಾರೆ. ಸರ್ಕಾರಿ ಶಾಲೆಗಳನ್ನು ಹೈಟೆಕ್ ಮಾದರಿಯಲ್ಲಿ ನಿರ್ಮಾಣ ಮಾಡಿ, ಉಚಿತವಾಗಿ ಶಿಕ್ಷಣವನ್ನು ನೀಡುತ್ತಿದ್ದಾರೆ. ಅದೇ ಮಾದರಿಯಲ್ಲಿ ಚಿತ್ರದುರ್ಗ ತಾಲ್ಲೂಕಿನಲ್ಲಿ ಶಿಕ್ಷಣ ನೀಡಲು ನಾವು ಮುಂದಾಗಿದ್ದು, ಎಲ್‍ಕೆಜಿ ಯಿಂದ ಪದವಿ ಪೂರ್ವ ಶಿಕ್ಷಣವನ್ನು ಉಚಿತವಾಗಿ ನೀಡುವುದು. ಬಸ್ಸಿನ ವ್ಯವಸ್ಥೆ, ಷೂ, ಸಮವಸ್ತ್ರ, ಕಂಪ್ಯೂಟರ್ ಶಿಕ್ಷಣವನ್ನು ನೀಡಲಾಗುವುದು ಎಂದು ಹೇಳಿದರು.
ತಾಲ್ಲೂಕಿನಾದ್ಯಂತ ದೆಹಲಿ ಮಾದರಿಯಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ನಿರ್ಮಾಣ ಮಾಡುವ ಮೂಲಕ ಜನರು ಹೆಚ್ಚಿನ ಚಿಕಿತ್ಸೆಗಾಗಿ ದೂರದ ಊರು, ಜಿಲ್ಲೆಗಳಿಗೆ ಹೋಗುವುದನ್ನು ತಪ್ಪಿಸಲಾಗುವುದು. ತಾಲ್ಲೂಕಿನಲ್ಲಿ ಸಾಕಷ್ಟು ಜನರು ಮನೆಗಳಲ್ಲದೆ ಗುಡಿಸಲುಗಳಲ್ಲಿ ವಾಸ ಮಾಡುತ್ತಿದ್ದು, ಅವರಿಗಾಗಿ ಸುಮಾರು 25 ಸಾವಿರ ಮನೆಗಳನ್ನು ಕಟ್ಟಿಸಿಕೊಡುವ ಗುರಿಯನ್ನು ಹೊಂದಲಾಗಿದೆ. ಅಲ್ಲದೆ ತಾಲ್ಲೂಕಿನಲ್ಲಿ ಇನ್ನೂ ಸಾಕಷ್ಟು ಸಮಸ್ಯೆಗಳು ಇದ್ದು ಅವುಗಳನ್ನು ದೂರ ಮಾಡುವುದರ ಜೊತೆಗೆ ಭ್ರಷ್ಟಾಚಾರ ಮುಕ್ತ ಸರ್ಕಾರ ನೀಡಲಾಗುವುದು ಈ ನಿಟ್ಟಿನಲ್ಲಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿಯಾಗಿ ನಾನು ಸ್ಪರ್ಧೆ ಮಾಡುತ್ತಿದ್ದು, ತಾಲ್ಲೂಕಿನ ಜನರು ಈ ಭಾರಿ ಒಂದು ಅವಕಾಶ ಕೊಟ್ಟು ನನ್ನನ್ನು ಗೆಲ್ಲಿಸುವುದರ ಮೂಲಕ ತಾಲ್ಲೂಕಿನ ಅಭಿವೃದ್ಧಿಗೆ ಜೊತೆಯಾಗಿ ನಿಲ್ಲಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆಂಚಪ್ಪ, ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎಂ.ರಾಮಪ್ಪ ಸೇರಿದಂತೆ ಇತರರು ಹಾಜರಿದ್ದರು.