ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 22 : ಇಂದು ನಾವೆಲ್ಲಾ ನೀರಿನ ಸಂರಕ್ಷಣೆ, ನೀರಿನ ಪ್ರಾಮುಖ್ಯತೆ ಬಗ್ಗೆ ಬರೀ ಭಾಷಣ ಮಾಡುವ ಬದಲು, ಜಲಸಂರಕ್ಷಣೆಗಾಗಿ ಆರತಿ ಎತ್ತುವ ಬದಲು, ಜಲಸಂಪನ್ಮೂಲವನ್ನು ಹಾಳು ಮಾಡುವವರ ವಿರುದ್ಧ ಲಾಠಿ ಎತ್ತಿ” ಎಂದು ಆರ್ಥಿಕ ಚಿಂತಕ ಹಾಗೂ ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಅಧ್ಯಕ್ಷ ಡಾ.ಜಿ. ಎನ್.ಮಲ್ಲಿಕಾರ್ಜುನಪ್ಪ ತಿಳಿಸಿದರು.

ನಗರದ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಚಿತ್ರದುರ್ಗ ಸೈನ್ಸ್ ಫೌಂಡೇಶನ್, IQAC ಮತ್ತು NSS ಘಟಕಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ವಿಶ್ವ ಜಲ ದಿನ” ಕಾರ್ಯಕ್ರಮದಲ್ಲಿ ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು.

ಜನಸಾಮಾನ್ಯರಿಗೆ. ನೀರಿನ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಪ್ರತಿವರ್ಷವೂ ಪ್ರಮುಖ ಘೋಷವಾಕ್ಯಗಳ ಮೂಲಕ ವಿದ್ಯಾರ್ಥಿಗಳು ಮತ್ತು ಶಿಕ್ಷಿತರಿಗೆ ತಿಳಿಸಿಕೊಡಬೇಕಾಗಿದೆ. ನೀರಿನ ಸಂರಕ್ಷಣೆ ಬಗ್ಗೆ ಪ್ರತಿಯೊಬ್ಬರ ಜವಾಬ್ದಾರಿ ಇದೆ. ಬೇಜವಾಬ್ದಾರಿ ಹೇಳಿಕೆಗಳನ್ನು ಕಿತ್ತುಹಾಕುವಂತಹ ಕಾನೂನನ್ನು ಜಾರಿಗೆ ತರುವ ತುರ್ತು ಅವಶ್ಯಕತೆ ಇದೆ. ಬೇರೆ ದೇಶಗಳಲ್ಲಿ ಇಂತಹ ವಿಷಯಗಳ ಬಗ್ಗೆ ಸಭಾಸದನಗಳಲ್ಲಿ ಮೊದಲು ಚರ್ಚೆ ಮಾಡಿ ಕಾನೂನನ್ನು ತರುತ್ತಾರೆ. ನಮ್ಮ ದೇಶದಲ್ಲಿ ಮೊದಲು ಕಾನೂನನ್ನು ಜಾರಿಗೆ ತಂದು, ಸಭಾಸದನಗಳಲ್ಲಿ ವಿಷಯಗಳನ್ನು ಅಂಗೀಕರಿಸಿ ನಂತರ ಪ್ರಜೆಗಳಿಗೆ ತಿಳಿಸುತ್ತಾರೆ. ಭೂಮಿಯ ಮೇಲಿನ ಪ್ರತಿ ಜೀವಿಗೂ ನೀರು ಅತ್ಯವಶ್ಯಕ. ಅತ್ಯಂತ ಪ್ರಮುಖವಾದ ನೈಸರ್ಗಿಕ ಸಂಪನ್ಮೂಲ. ಬಹುತೇಕ ನಾಗರೀಕತೆಗಳು ನೀರಿನ ಮೂಲದಿಂದಲೇ ಉಗಮವಾಗಿವೆ. ಇಡೀ ಮಾನವ ಇತಿಹಾಸದಲ್ಲಿ ನೀರು ಪ್ರಮುಖವಾಗಿ ಬಳಕೆಯಾಗುವ ಉಪಯುಕ್ತ ಅಂಶವಾಗಿದೆ. ಭೂಮಿಯ ಮೇಲೆ ನೀರು ಇಲ್ಲದಿದ್ದಲ್ಲಿ ಬಹುತೇಕ ಜೀವಿಗಳ ಉಗಮವಾಗಲೀ, ಜೀವನವಾಗಲೀ ಸಾಗುತ್ತಲೇ ಇರಲಿಲ್ಲ. ನೀರು ಇಲ್ಲದ ಜಗತ್ತಿನಲ್ಲಿ ಯಾವ ಜೀವಿಯೂ ಬದುಕಲಾರದು” ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಡಾ ಕೆ.ಎಂ.ವೀರೇಶ್ ರವರು “ಯಾವುದೇ ರೀತಿಯ ವ್ಯವಸ್ಥೆ ಒಳಿತಾಗಬೇಕಾದರೆ ಜನರಲ್ಲಿ ವೈಚಾರಿಕತೆ, ವೈಜ್ಞಾನಿಕ ಮನೋಭಾವ ಮೂಡಿಸುವುದು ಇಂದಿನ ಅವಶ್ಯ. ಬೇಜವಾಬ್ದಾರಿ ಕಾನೂನುಗಳನ್ನು ಜಾರಿಗೆ ತರುವುದು ಅನವಶ್ಯಕ” ಎಂದರು.
ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಕಾರ್ಯದರ್ಶಿ ಎಚ್.ಎಸ್.ಟಿ.ಸ್ವಾಮಿ ಮಾತನಾಡಿ, ” ನೀರು ಇಲ್ಲದೇ ಇರುವ ಈ ಭೂಮಿಯನ್ನು ಊಹಿಸಲೂ ಸಾಧ್ಯವಿಲ್ಲ. ನೀರು ಇಲ್ಲದೇ ಹೋಗಿದ್ದಲ್ಲಿ ರಾಜ್ಯ ರಾಜ್ಯಗಳ ನಡುವೆ, ರಾಷ್ಟ್ರ ರಾಷ್ಟ್ರಗಳ ನಡುವೆ ಜಗಳ ನಡೆಯುತ್ತಲೇ ಇರಲಿಲ್ಲ. ಒಂದು ವೇಳೆ ಮೂರನೇ ಮಹಾಯುದ್ಧ ಭವಿಷ್ಯದಲ್ಲಿ ನಡೆದಲ್ಲಿ ಅದು ನೀರಿಗಾಗಿ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲೆ ಎಂ.ಆರ್.ಜಯಲಕ್ಷ್ಮಿ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವಿಶ್ವ ಜಲ ದಿನದ ಮಹತ್ವ ತಿಳಿಸಿದರು. ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಉಪಾಧ್ಯಕ್ಷ ಚಳ್ಳಕೆರೆ ಯರ್ರಿಸ್ವಾಮಿ, ಖಜಾಂಚಿ ಕೆ.ವಿ.ನಾಗಲಿಂಗರೆಡ್ಡಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ವೈಷ್ಣವಿ ಎಸ್ ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ಎಸ್.ಎಂ.ಅಮೂಲ್ಯ ಸ್ವಾಗತಿಸಿ, ಪಿ.ಕಾಂತರಾಜ್ ವಂದಿಸಿದರು.

