ಚಿತ್ರದುರ್ಗ,(ಜೂನ್.17) : ಶೇಂಗಾ ಬೆಳೆಯು ಪ್ರಮುಖ ಎಣ್ಣೆಕಾಳು ಬೆಳೆಯಾಗಿದೆ. ಬಡವರ ಬಾದಾಮಿ ಎಂದೇ ಪ್ರಸಿದ್ಧ. ಈ ಬೆಳೆಯನ್ನು ಮುಖ್ಯವಾಗಿ ಖುಷ್ಕಿ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ನೀರಾವರಿ ಪ್ರದೇಶದಲ್ಲಿ ಹೆಚ್ಚು ಇಳುವರಿಯನ್ನು ನಿರೀಕ್ಷಿಸಬಹುದಾಗಿದೆ. ಶೇಂಗಾದಲ್ಲಿ ಟಿಎಂವಿ 2 ತಳಿಯು ತುಂಬಾ ಹಳೆಯ ತಳಿಯಾಗಿದ್ದು ಇಳುವರಿ ಕಡಿಮೆ ಇರುವುದರಿಂದ ರೈತರು ಇತ್ತೀಚಿಗೆ ಅಧಿಕ ಇಳುವರಿ ಕೊಡುವ ಇತರೆ ತಳಿಗಳ ಬಗ್ಗೆ ಆಸಕ್ತಿ ಹೊಂದಿದ್ದಾರೆ.
ಶೇಂಗಾ ತಳಿಗಳು ಮತ್ತು ವಿಶೇಷ ಗುಣಗಳು
ಜಿಪಿಪಿಡಿ-4 ತಳಿಯನ್ನು ಮುಂಗಾರು ಮತ್ತು ಬೇಸಿಗೆಯ ಸಮಯದಲ್ಲಿ ಬಿತ್ತನೆ ಮಾಡಬಹುದು ಸುಮಾರು 105 ರಿಂದ 110 ದಿನಗಳ ಅವಧಿಯಲ್ಲಿ ಫಸಲಿಗೆ ಬರುತ್ತದೆ. ಸುಮಾರು 6 ರಿಂದ 8 ಕ್ವಿಂಟಲ್‍ವರೆಗೆ ಇಳುವರಿ ಕೊಡುತ್ತದೆ. ಈ ತಳಿಯು ರೋಗ ಮತ್ತು ಎಲೆ ಚುಕ್ಕಿ ರೋಗಕ್ಕೆ ನಿರೋಧಕ ತಳಿಯಾಗಿದೆ.
ಐಸಿಜಿವಿ-91114 ತಳಿಯನ್ನು ಮುಂಗಾರು ಮತ್ತು ಬೇಸಿಗೆಯ ಸಮಯದಲ್ಲಿ ಬಿತ್ತನೆ ಮಾಡಬಹುದು. ಸುಮಾರು 95 ರಿಂದ 100ದಿನಗಳ ಅವಧಿಯಲ್ಲಿ ಫಸಲಿಗೆ ಬರುತ್ತದೆ. ಸುಮಾರು 7 ರಿಂದ 8 ಕ್ವಿಂಟಲ್‍ವರೆಗೆ ಇಳುವರಿ ಕೊಡುತ್ತದೆ. ಈ ತಳಿಯು ಅಲ್ಪಾವಧಿ ತಳಿಯಾಗಿದ್ದು , ತುಕ್ಕು ರೋಗ ಮತ್ತು ಎಲೆ ಚುಕ್ಕೆ ರೋಗಕ್ಕೆ ನಿರೋಧಕ ತಳಿಯಾಗಿದೆ.
ಟಿಎಂವಿ 2 ತಳಿಯನ್ನು ಮುಂಗಾರು ಮತ್ತು ಬೇಸಿಗೆಯ ಸಮಯದಲ್ಲಿ ಬಿತ್ತನೆ ಮಾಡಬಹುದು. ಸುಮಾರು 100ರಿಂದ 120 ದಿನಗಳ ಅವಧಿಯಲ್ಲಿ ಫಸಲಿಗೆ ಬರುತ್ತದೆ. ಸುಮಾರು 5 ರಿಂದ 6 ಕ್ವಿಂಟಲ್‍ವರೆಗೆ ಇಳುವರಿಯನ್ನು ಕೊಡುತ್ತದೆ. ಈ ತಳಿಯು ಬರ ನಿರೋಧಕ ತಳಿಯಾಗಿದೆ.
ಕ-6 ತಳಿಯನ್ನು ಮುಂಗಾರು ಮತ್ತು ಬೇಸಿಗೆಯ ಸಮಯದಲ್ಲಿ ಬಿತ್ತನೆ ಮಾಡಬಹುದು. ಸುಮಾರು 115 ರಿಂದ 125 ದಿನಗಳ ಅವಧಿಯಲ್ಲಿ ಫಸಲಿಗೆ ಬರುತ್ತದೆ. ಸುಮಾರು 6 ರಿಂದ 7 ಕ್ವಿಂಟಲ್‍ವರೆಗೆ ಇಳುವರಿಯನ್ನು ಕೊಡುತ್ತದೆ. ಈ ತಳಿಯು ತುಕ್ಕು ರೋಗ ಮತ್ತು ಎಲೆ ಚುಕ್ಕೆ ರೋಗಕ್ಕೆ ನಿರೋಧಕ ತಳಿಯಾಗಿದೆ.
ಕದರಿಲೇಪಾಕ್ಷಿ- 1812 ತಳಿಯನ್ನು ಮುಂಗಾರು ಮತ್ತು ಬೇಸಿಗೆಯ ಸಮಯದಲ್ಲಿ ಬಿತ್ತನೆ ಮಾಡಬಹುದು. ಸುಮಾರು 120 ರಿಂದ 135 ದಿನಗಳ ಅವಧಿಯಲ್ಲಿ ಫಸಲಿಗೆ ಬರುತ್ತದೆ. ಸುಮಾರು 8 ರಿಂದ 10 ಕ್ವಿಂಟಲ್ ಖುಷ್ಕಿ ಹಾಗೂ 12 ರಿಂದ 15 ಕ್ವಿಂಟಾಲ್ ನೀರಾವರಿ ಜಮೀನಿನಲ್ಲಿ ಇಳುವರಿ ಬರುತ್ತದೆ.
ಈ ತಳಿಯು ಅಧಿಕ ಇಳುವರಿ ದೀಘಾವಧಿ ತಳಿಯಾಗಿದೆ. ತುಕ್ಕು ರೋಗ ಮತ್ತು ಎಲೆ ಚುಕ್ಕೆ ರೋಗಕ್ಕೆ ನಿರೋಧಕ ತಳಿಯಾಗಿದೆ ಬೆಳೆ ಕಟಾವಿನವರೆಗೂ ಎಲೆಗಳು ಹಸಿರಾಗಿರುತ್ತವೆ.
ಬಿತ್ತನೆ ಮಾಡುವುದಕ್ಕಿಂತ ಮುಂಚೆ ರೈತರು ಅನುಸರಿಸಬೇಕಾದ ಕ್ರಮಗಳು
ಬಿತ್ತನೆಗೆ ಮುಂಚೆ ನೆಲಗಡಲೆ ಬೀಜವನ್ನು 2.5 ಗ್ರಾಂ ಥೈರಾಮ್ ಪುಡಿಯನ್ನು ಪ್ರತಿ ಬೀಜಕ್ಕೆ ಬೆರೆಸಿ ನೆರಳಿನಲ್ಲಿ ಒಣಗಿಸಿ ತದನಂತರ ಒಂದು ಎಕರೆ ಬಿತ್ತನೆ ಬೀಜಕ್ಕೆ 150 ಗ್ರಾಂ ರೈಜೋಬಿಯಂ ಟ್ರೈಕೊಡರ್ಮ 500 ಗ್ರಾಂ ಮತ್ತು 400 ಗ್ರಾಂ ರಂಜಕ ಕರಗಿಸುವ ಜೀವಾಣು ಜೈವಿಕ ಗೊಬ್ಬರಗಳಿಂದ ಉಪಚರಿಸಿ ಬಿತ್ತನೆಗೆ ಬಳಸುವುದು.
ಭೂಮಿಯನ್ನು ಚೆನ್ನಾಗಿ ಅದ ಮಾಡಿದನಂತರ ಪೂರ್ಣ ಪ್ರಮಾಣದ ಕೊಟ್ಟಿಗೆ ಗೊಬ್ಬರ ರಾಸಾಯನಿಕ ಗೊಬ್ಬರಗಳನ್ನು ಬಿತ್ತನೆ ಮಾಡುವುದಕ್ಕಿಂತ ಎರಡರಿಂದ ಮೂರು ವಾರಗಳ ಮೊದಲು ಮಣ್ಣಿನಲ್ಲಿ ಬೆರೆಸಬೇಕು. ಬೀಜವನ್ನು 12 ಅಂಗಲ ಅಂತರದ ಸಾಲುಗಳಲ್ಲಿ ಬೀಜದಿಂದ ಬೀಜಕ್ಕೆ 4 ಅಂಗಳ ಅಂತರವಿರುವಂತೆ ಎರಡು ಅಂಗುಲಕ್ಕಿಂತ ಹೆಚ್ಚಿನ ಆಳ ಮೀರದಂತೆ ಬಿತ್ತುವುದು.